×
Ad

ಆಡಳಿತ ವೈಫಲ್ಯ ಮರೆಮಾಚಲು ಎಲ್ಲದರಲ್ಲೂ ದ್ವೇಷ ಹರಡುವ ಹುನ್ನಾರ: ವಿನಯ ಕುಮಾರ್ ಸೊರಕೆ

Update: 2022-04-26 21:02 IST

ಉಡುಪಿ : ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆಡಳಿತ ವೈಫಲ್ಯ, ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಆಹಾರ, ಉಡುಪು, ವ್ಯವಹಾರ ಸೇರಿದಂತೆ ಎಲ್ಲದರಲ್ಲೂ ದ್ವೇಷ ಭಾವನೆ ಮೂಡಿಸಲಾಗುತ್ತಿದೆ. ಈ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸನ್ನು ಬೇರೆಡೆ ಕೊಂಡೊಯ್ಯುವ ಕಾರ್ಯವನ್ನು ಸರಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.

ಉಡುಪಿ ಸಹಬಾಳ್ವೆ ವತಿಯಿಂದ ಮಂಗಳವಾರ ಉಡುಪಿ ಪುರಭವನದಲ್ಲಿ ನಡೆದ ಮೇ 14ರ ಸಹಬಾಳ್ವೆ ಸಮಾವೇಶ- ಸಾಮರಸ್ಯದ ನಡಿಗೆಯ ಪೂರ್ವ ಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸುಳ್ಳು ಜ್ವಾಲಮುಖಿಯಂತೆ ಹರಡಿದಂತೆ ಸತ್ಯ ತುಂಬಾ ನಿಧಾನವಾಗಿರುತ್ತದೆ. ಆದರೂ ನಾವು ತಾಳ್ಮೆ ಕಳೆದುಕೊಳ್ಳದೆ ಬದ್ಧತೆಯಿಂದ ಸತ್ಯ ಹೇಳುವ ಕಾರ್ಯ ವನ್ನು ಮಾಡಬೇಕಾಗಿದೆ. ಎಲ್ಲ ಧರ್ಮಗಳ ಸಾರ ಒಂದೇ. ಯಾವುದೇ ಧರ್ಮ ಧ್ವೇಷ ಮತ್ತು ಅಶಾಂತಿಯನ್ನು ಸಾರುವುದಿಲ್ಲ. ಆದುದರಿಂದ ಜಾತ್ಯತೀತ ಮನೋ ಭಾವದ ಜನರನ್ನು ಒಗ್ಗೂಡಿಸುವ ಮೂಲಕ ಸಾಮರಸ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದರು.

ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಇಂದು ಕಣ್ಣಿಗೆ ಕಾಣದ ಬಾಂಬ್ ಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿ, ಸೌಹಾರ್ದತೆಯನ್ನು ಛಿದ್ರಗೊಳಿಸುವ ವಿಚಿದ್ರ ಕಾರಿ, ಆತಂಕಕಾರಿ ಸಾಮಾಜಿಕ ರಾಜಕೀಯ ನಡೆಯುತ್ತಿದೆ. ಕೆಲವೊಂದು ಶಕ್ತಿಗಳು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯನ್ನು ಮುಂದುವರೆಸಿ ಅಸ್ಪಶ್ಯತೆ ಸಮಾಜವನ್ನು ಸೃಷ್ಠಿಸುವ ಕೃತ್ಯಕ್ಕೆ ಕೈಹಾಕಲಿದೆ. ಅದಕ್ಕೆ ಪೂರಕವಾಗಿ ಇಂದು ದಲಿತ ದೌರ್ಜನ್ಯದ ರಾಜಕೀಯ ಕೂಡ ಆರಂಭವಾಗಿದೆ. ಸ್ತ್ರೀ ಸಮಾನತೆಯನ್ನು ಹೊಸಕು ಹಾಕಿ ಅವರನ್ನು ದ್ವಿತೀಯ ದರ್ಜೆ ಪ್ರಜೆಗಳ ಮಾಡು ವುದು ಕೂಡ ಈ ಶಕ್ತಿಗಳ ಉದ್ದೇಶವಾಗಿದೆ ಎಂದು ಆರೋಪಿಸಿದರು.

ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸುವ ಮೂಲಕ ದಲಿತ ಹಾಗೂ ಹಿಂದುಳಿದ ವರ್ಗದ ಸಮುದಾಯಗಳಲ್ಲಿ ಭಯವನ್ನು ಹೆಚ್ಚಿಸುವ ಪ್ರಯತ್ನವನ್ನು ಕೆಲವೊಂದು ಶಕ್ತಿಗಳು ಮಾಡುತ್ತಿದೆ. ಇದಕ್ಕೆ ಅಂಜದೆ ನಾವೆಲ್ಲ ಈ ಸಮಾಜದಲ್ಲಿ ಸಹಬಾಳ್ವೆ, ಸಮಾನತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕೊರಗ ಮುಖಂಡ ಗಣೇಶ್ ಕೊರಗ ಮಾತನಾಡಿ, ಸಮಾಜದ ಇಂದಿನ ಸ್ಥಿತಿಯನ್ನು ಸುಧಾರಿಸಲು ಬುದ್ಧ, ಅಂಬೇಡ್ಕರ್, ನಾರಾಯಣಗುರುಗಳ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.

ಧರ್ಮಗುರು ಫಾ.ಹೆರಾಲ್ಡ್ ಪಿರೇರಾ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಸುನ್ನೀ ಸಂಯುಕ್ತ ಜಮಾತ್‌ನ ಅಬ್ದುರ‌್ರಹ್ಮಾನ್ ಕಲ್ಕಟ್ಟ, ರೆ.ಸಂತೋಷ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕೆಥೋಲಿಕ್ ಸಭಾ ಅಧ್ಯಕ್ಷೆ ಮೇರಿ ಡಿಸೋಜ, ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಜಯವಂತ ರಾವ್ ಮಾತನಾಡಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇಬ್ರಾಹಿಂ ಸಾಹೇಬ್ ಕೋಟ, ಜಿಲ್ಲಾ ಸಂಯುಕ್ತ ಜಮಾತ್‌ನ ಅಧ್ಯಕ್ಷ ಅಬೂಬಕ್ಕರ್ ನೇಜಾರ್, ರೆ.ಕಿಶೋರ್, ಜಯಕರ ಶೆಟ್ಟಿ ಇಂದ್ರಾಳಿ, ಮುಹ್ಮಮದ್ ಮೌಲಾ, ಫಾ.ವಿಲಿಯಂ ಮಾರ್ಟಿಸ್ ಮೊದಲಾದವರು ಉಪಸ್ಥಿತರಿದ್ದರು.

ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸಹಬಾಳ್ವೆ ಸಂಘಟನೆಯ ಅಧ್ಯಕ್ಷ ಅಮೃತ್ ಶೆಣೈ ಸ್ವಾಗತಿಸಿದರು. ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ವಂದಿಸಿದರು. ವರೋನಿಕಾ ಕರ್ನೆಲಿಯೋ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News