ಶ್ರೀಲಂಕಾ: 2019ರ ಬಾಂಬ್ ದಾಳಿ ಪ್ರಕರಣ; ರೂವಾರಿಗಳ ಗುರುತು ಬಹಿರಂಗಕ್ಕೆ ಪೋಪ್ ಆಗ್ರಹ

Update: 2022-04-26 16:03 GMT
photo :twitter/@Pontifex

ವ್ಯಾಟಿಕನ್ ಸಿಟಿ, ಎ.26: 2019ರ ಈಸ್ಟರ್ ಭಾನುವಾರ ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ದಾಳಿ ಪ್ರಕರಣದ ರೂವಾರಿಗಳ ಹೆಸರು ಬಹಿರಂಗಗೊಳಿಸುವಂತೆ ಪೋಪ್ ಫ್ರಾನ್ಸಿಸ್ ಅವರು ಶ್ರೀಲಂಕಾ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

’3 ಚರ್ಚ್ ಗಳು ಹಾಗು 3 ಹೋಟೆಲ್‌ಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 270ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ‘ನ್ಯಾಯದ ಮೇಲಿನ ಪ್ರೀತಿಗಾಗಿ, ನಿಮ್ಮ ದೇಶದ ಜನತೆಯ ಮೇಲಿನ ಪ್ರೀತಿಗಾಗಿ ದಯವಿಟ್ಟು ಈ ಬಾಂಬ್ ದಾಳಿಯ ರೂವಾರಿಗಳ ಹೆಸರು ಬಹಿರಂಗಪಡಿಸಿ. ಈ ದಾಳಿಗೆ ಯಾರು ಜವಾಬ್ದಾರರು ಎಂಬ ಸತ್ಯ ಎಲ್ಲರಿಗೂ ತಿಳಿಯಲಿ. ಇದು ನಿಮ್ಮ ಆತ್ಮಕ್ಕೆ ಮತ್ತು ದೇಶಕ್ಕೆ ಶಾಂತಿಯನ್ನು ತರಲಿದೆ ಎಂದು ಶ್ರೀಲಂಕಾ ಸರಕಾರವನ್ನು ಪೋಪ್ ವಿನಂತಿಸಿದ್ದಾರೆ. ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬದ 60ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಸುಮಾರು 3,500 ಶ್ರೀಲಂಕನ್ನರನ್ನು ವ್ಯಾಟಿಕನ್‌ನಲ್ಲಿ ಭೇಟಿಯಾದ ಬಳಿಕ ಪೋಪ್ ಈ ಸಂದೇಶ ರವಾನಿಸಿದ್ದಾರೆ.

ನಿಯೋಗದ ನೇತೃತ್ವದ ವಹಿಸಿದ್ದ ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್ ನ ಮುಖ್ಯಸ್ಥ ಮಾಲ್ಕಮ್ ರಂಜಿತ್ ಮಾತನಾಡಿ, ತಮ್ಮ ದೇಶದಲ್ಲಿ ನ್ಯಾಯ ಮತ್ತು ಬದಲಾವಣೆಯ ಅಗತ್ಯವಿದೆ ಎಂದರು. ಅಂತರಾಷ್ಟ್ರೀಯ ಸಮುದಾಯವು ಶ್ರೀಲಂಕಾಕ್ಕೆ ಯಾವುದೇ ನೆರವು ಒದಗಿಸುವ ಮುನ್ನ, ದೇಶದಲ್ಲಿ ಆಗಬೇಕಿರುವ ಬದಲಾವಣೆಯ ಬಗ್ಗೆ ಶರತ್ತು ವಿಧಿಸಬೇಕು ಎಂದವರು ಒತ್ತಾಯಿಸಿದರು. 2019ರ ಆತ್ಮಹತ್ಯಾ ಬಾಂಬ್ ದಾಳಿಯ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಕಳೆದ ತಿಂಗಳು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯನ್ನು ಕಳೆದ ತಿಂಗಳು ಅವರು ಆಗ್ರಹಿಸಿದ್ದರು.

ಸ್ಥಳೀಯ ಮುಸ್ಲಿಮ್ ಸಂಘಟನೆ ಬಾಂಬ್ ಸ್ಫೋಟ ನಡೆಸಿದೆ ಎಂದು ಶ್ರೀಲಂಕಾ ಸರಕಾರ ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಂಜಿತ್, ಆರಂಭದಲ್ಲಿ ಸ್ಥಳೀಯ ಮುಸ್ಲಿಮ್ ಸಂಘಟನೆಯ ಕೃತ್ಯ ಎಂದು ಭಾವಿಸಲಾಗಿತ್ತು. ಆದರೆ ಬಳಿಕದ ತನಿಖೆಯಲ್ಲಿ, ಇದರ ಹಿಂದೆ ಭಾರೀ ರಾಜಕೀಯ ಷಡ್ಯಂತ್ರ ಇರುವ ಸಂಶಯ ಮೂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News