ರಶ್ಯ: ಶಿಶುವಿಹಾರದಲ್ಲಿ ಗುಂಡಿನ ದಾಳಿ; ಇಬ್ಬರು ಮಕ್ಕಳ ಸಹಿತ 4 ಮಂದಿ ಮೃತ್ಯು

Update: 2022-04-26 16:19 GMT
ಸಾಂದರ್ಭಿಕ ಚಿತ್ರ

ಮಾಸ್ಕೊ, ಎ.26: ರಶ್ಯದ ಉಲ್ಯನೊವ್‌ಸ್ಕ್ ಪ್ರಾಂತದ ಶಿಶುವಿಹಾರದಲ್ಲಿ ಮಂಗಳವಾರ ಸಶಸ್ತ್ರಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಹಾಗೂ ಒಬ್ಬ ಶಿಕ್ಷಕರ ಸಹಿತ 4 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

   ಸ್ಥಳೀಯ ಮನಸ್ತಾಪ ಈ ಘಟನೆಗೆ ಕಾರಣವಾಗಿರಬಹುದು. ಘಟನೆ ನಡೆದಾಗ ಶಿಶುವಿಹಾರದಲ್ಲಿ ಭದ್ರತಾ ಸಿಬಂದಿ ಇರಲಿಲ್ಲ. ಮೃತಪಟ್ಟ ಮಕ್ಕಳು 3ರಿಂದ 6 ವರ್ಷದವರು. ಮೃತಪಟ್ಟ ನಾಲ್ವರಲ್ಲಿ ದಾಳಿಕೋರನೂ ಸೇರಿದ್ದಾನೆ ಎಂದು ಉಲ್ಯನೊವ್‌ಸ್ಕ್ ಪ್ರಾಂತೀಯ ಮಾಹಿತಿ ಕೇಂದ್ರದ ಮುಖ್ಯಸ್ಥ ಡಿಮಿಟ್ರಿ ಕಮಾಲ್ ಹೇಳಿರುವುದಾಗಿ ವರದಿಯಾಗಿದೆ.

 ಮಧ್ಯಾಹ್ನ ಊಟದ ವಿರಾಮದ ಸಂದರ್ಭ ಶಿಶುವಿಹಾರಕ್ಕೆ ಡಬಲ್ ಬ್ಯಾರೆಲ್ ಗನ್ನೊಂದಿಗೆ ನುಗ್ಗಿದ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಇಬ್ಬರು ಮಕ್ಕಳು ಹಾಗೂ ಒಬ್ಬ ಶಿಕ್ಷಕ ಮೃತಪಟ್ಟಿದ್ದು ಮತ್ತೊಬ್ಬ ಶಿಕ್ಷಕ ಗಾಯಗೊಂಡಿದ್ದಾರೆ. ಬಳಿಕ ದಾಳಿಕೋರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಉಲ್ಯನೊವ್‌ಸ್ಕ್ ಪ್ರಾಂತದ ಮಾಜಿ ಗವರ್ನರ್ ಸೆರ್ಗೆಯ್ ಮೊರೊಝೊವ್ ಹೇಳಿದ್ದಾರೆ.

ರಶ್ಯದಲ್ಲಿ 2021ರಲ್ಲಿ ಶಾಲೆ ಹಾಗೂ ವಿವಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಬಳಿಕ ಬಂದೂಕು ಲೈಸೆನ್ಸ್ ನಿಯಮವನ್ನು ಬಿಗಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News