ಹಲ್ಲೆ ಪ್ರಕರಣ: ಜಿಗ್ನೇಶ್ ಮೇವಾನಿ ಜಾಮೀನು ಅರ್ಜಿ ತಿರಸ್ಕೃತ
ಹೊಸದಿಲ್ಲಿ, ಎ 26: ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಅಸ್ಸಾಂ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಟ್ವೀಟ್ ಗೆ ಸಂಬಂಧಿಸಿ ಅಸ್ಸಾಂನ ಕೊಕ್ರಝಾರ್ ನಗರದಲ್ಲಿರುವ ನ್ಯಾಯಾಲಯದಿಂದ ಸೋಮವಾರ ಜಾಮೀನು ಪಡೆದ ಬಳಿಕ ಮೇವಾನಿ ಅವರು ಮತ್ತೆ ಬಂಧನಕ್ಕೆ ಒಳಗಾಗಿದ್ದರು.
ಮಹಿಳಾ ಪೊಲೀಸ್ ಅಧಿಕಾರಿ ದೇಬಿಕಾ ವರ್ಮಾ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಮೇವಾನಿ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ. ಗುವಾಹತಿ ವಿಮಾನ ನಿಲ್ದಾಣದಿಂದ ಕೊಕ್ರಝಾರ್ ಜಿಲ್ಲೆಗೆ ಕರೆದೊಯ್ಯುತ್ತಿರುವ ಸಂದರ್ಭ ಮೇವಾನಿ ಅವರು ತನಗೆ ಹಲ್ಲೆ ನಡೆಸಿದ್ದಾರೆ ಹಾಗೂ ತನ್ನ ವಿರುದ್ಧ ಅವಹೇಳನಾಕಾರಿ ಪದಗಳನ್ನು ಬಳಸಿದ್ದಾರೆ ಎಂದು ದೇಬಿಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
‘‘ಅವರು ನನ್ನತ್ತ ಬೆರಳು ತೋರಿಸಿ ಹೆದರಿಸಲು ಪ್ರಯತ್ನಿಸಿದರು. ನನ್ನನ್ನು ಆಸನದ ಮೇಲೆ ಬಲವಾಗಿ ದೂಡಿದರು’’ ಎಂದು ದೇಬಿಕಾ ಅವರು ದೂರಿನಲ್ಲಿ ಹೇಳಿದ್ದಾರೆ.