ಕರಾಚಿ ವಿವಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: ಚೀನಾದ 3 ಪ್ರಜೆಗಳ ಸಹಿತ 4 ಮಂದಿ ಮೃತ್ಯು

Update: 2022-04-26 17:40 GMT

 ಇಸ್ಲಮಾಬಾದ್, ಎ.26: ಕರಾಚಿ ವಿವಿಗೆ ಸಂಯೋಜಿತವಾಗಿರುವ ಕನ್ಫ್ಯೂಶಿಯಸ್ ಸಂಸ್ಥೆಯ ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಗುರಿಯಾಗಿಸಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಚೀನಾದ ಮೂವರು ಪ್ರಜೆಗಳು ಹಾಗೂ ಪಾಕಿಸ್ತಾನದ ಚಾಲಕ ಮೃತಪಟ್ಟಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

 ಪಾಕಿಸ್ತಾನದ ಪ್ರತ್ಯೇಕತಾವಾದಿ ಸಂಘಟನೆ ಬಲೋಚ್ ಲಿಬರೇಷನ್ ಆರ್ಮಿಯ ಮಹಿಳಾ ಆತ್ಮಹತ್ಯಾ ಬಾಂಬರ್ ಕರಾಚಿಯಲ್ಲಿ ಚೀನೀಯರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾಳೆ. ಮಹಿಳಾ ಸದಸ್ಯೆಯನ್ನು ಬಳಸಿಕೊಂಡು ನಡೆಸಿದ ಪ್ರಪ್ರಥಮ ಕಾರ್ಯಯೋಜನೆ ಇದಾಗಿದೆ ಎಂದು ಸಂಘಟನೆಯ ವಕ್ತಾರ ಜೀಯಂದ್ ಬಲೋಚ್ ಟೆಲಿಗ್ರಾಮ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆ ತಿಳಿಸಿದೆ.

   ಚೀನಾದ 3 ಪ್ರಜೆಗಳ ಸಹಿತ 4 ಮಂದಿ ಮೃತಪಟ್ಟಿರುವುದನ್ನು ಕರಾಚಿ ಪೊಲೀಸರು ದೃಢಪಡಿಸಿದ್ದಾರೆ. ಬಲೋಚೊಸ್ತಾನ್ ಪ್ರಾಂತದಲ್ಲಿ ನಡೆಯುತ್ತಿರುವ ಬೃಹತ್ ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಯೋಜನೆ(ಬೆಲ್ಟ್ ಆ್ಯಂಡ್ ರೋಡ್ ಯೋಜನೆ)ಯಲ್ಲಿ ಚೀನಾವೂ ಭಾಗಿಯಾಗಿದ್ದು, ಚೀನಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಬಲೋಚೊಸ್ತಾನ ಪ್ರಾಂತದ ಪ್ರತ್ಯೇಕತಾವಾದಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ. ಈ ಪ್ರಾಂತದಲ್ಲಿ ಪಾಕ್ ಸರಕಾರದ ಗಣಿಗಾರಿಕೆ ಮತ್ತು ಇಂಧನ ಯೋಜನೆಗಳಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಈ ಹಿಂದಿನಿಂದಲೂ ಪ್ರತ್ಯೇಕತಾವಾದಿಗಳು ವಿರೋಧಿಸುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News