ಮುಂಬೈ ಪೊಲೀಸರಿಂದ ನನ್ನ ಹೆಸರಿನಲ್ಲಿ ಸುಳ್ಳು ಎಫ್ಐಆರ್ ದಾಖಲು:‌ ಕಿರೀಟ್ ಸೋಮೈಯಾ

Update: 2022-04-26 17:44 GMT

ಮುಂಬೈ,ಎ.26: ಇಲ್ಲಿಯ ಖಾರ್ ಪೊಲೀಸ್ ಠಾಣೆಯಲ್ಲಿ ತನ್ನ ಹೆಸರಿನಲ್ಲಿ ಸುಳ್ಳು ಎಫ್ಐಆರ್ ದಾಖಲಾಗಿದೆ,ಅದು ತನ್ನ ಸಹಿಯನ್ನೂ ಹೊಂದಿಲ್ಲ ಎಂದು ಮಾಜಿ ಬಿಜೆಪಿ ಸಂಸದ ಕಿರೀಟ್ ಸೋಮೈಯಾ ಅವರು ಮಂಗಳವಾರ ಪ್ರತಿಪಾದಿಸಿದರು. ಸೋಮೈಯಾ ಹನುಮಾನ್ ಚಾಲೀಸಾ ವಿವಾದದಲ್ಲಿ ಬಂಧಿತ ಪಕ್ಷೇತರ ಸಂಸದ ರವಿ ರಾಣಾ ಮತ್ತು ಅವರ ಶಾಸಕಿ ಪತ್ನಿ ನವನೀತ ರಾಣಾ ಅವರನ್ನು ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿ ಮರಳುತ್ತಿದ್ದಾಗ ಅವರ ಕಾರಿನ ಮೇಲೆ ದಾಳಿ ನಡೆಸಿ ಹಾನಿಯನ್ನುಂಟು ಮಾಡಲಾಗಿತ್ತು.

ಖಾರ್ ಪೊಲೀಸ್ ಠಾಣೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮೈಯಾ,ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ತನ್ನ ಮೇಲೆ ದಾಳಿ ನಡೆಸಲು ಗೂಂಡಾಗಳನ್ನು ಕಳುಹಿಸಿದ್ದರು ಎಂದು ಆರೋಪಿಸಿದರು.
ಅವರು ಕಠಿಣ ಕ್ರಮವನ್ನು ಎದುರಿಸಬೇಕು ಮತ್ತು ಅದು ಖಂಡಿತವಾಗಿಯೂ ಸಂಭವಿಸಲಿದೆ ಎಂದು ಠಾಣೆಯಲ್ಲಿ ಪ್ರವೇಶಕ್ಕೆ ಮುನ್ನ ಅವರು ಹೇಳಿದರು.

‘ಮುಂಬೈ ಪೊಲೀಸರು ನನ್ನ ಹೆಸರಿನಲ್ಲಿ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಅದು ನನ್ನ ಸಹಿಯನ್ನು ಹೊಂದಿಲ್ಲ. ಇಂತಹ ಅಕ್ರಮಗಳ ಬಗ್ಗೆ ಮುಂಬೈ ಪೊಲೀಸ್ ಆಯುಕ್ತರಿಗೆ ತಿಳಿದಿದೆಯೇ? ಪೊಲೀಸರು ದಾಖಲಿಸಿಕೊಂಡಿರುವ ಸುಳ್ಳು ಎಫ್ಐಆರ್ನ ವಿರುದ್ಧ ವಾಸ್ತವ ಎಫ್ಐಆರ್ ಸಲ್ಲಿಸಲು ನಾನಿಲ್ಲಿಗೆ ಬಂದಿದ್ದೇನೆ ’ಎಂದರು.

ಅತಿವೇಗ ಹಾಗೂ ಅಜಾಗ್ರತೆಯಿಂದ ವಾಹನ ಚಲಾಯಿಸಿದ್ದ ಆರೋಪದಲ್ಲಿ ಸೋಮೈಯಾರ ಚಾಲಕನ ವಿರುದ್ಧ ಮುಂಬೈ ಪೊಲೀಸರು ಶನಿವಾರ ತಡರಾತ್ರಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಈ ಘಟನೆಯಲ್ಲಿ ಶಿವಸೇನೆ ಕಾರ್ಪೊರೇಟರ್ ಮತ್ತು ಪಕ್ಷದ ಓರ್ವ ಕಾರ್ಯಕರ್ತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
 
ಸೋಮೈಯಾರ ಕಾರನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಪೊಲೀಸರು ಸೋಮವಾರ ಮಾಜಿ ಮೇಯರ್ ವಿಶ್ವನಾಥ ಮಹದೇಶ್ವರ ಸೇರಿದಂತೆ ನಾಲ್ವರು ಶಿವಸೇನೆ ಸದಸ್ಯರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News