ಜ್ಯುಡಿಷಿಯಲ್ ವಿಸ್ಟಾ ನಿರ್ಮಾಣ ಕೋರಿ ಅರ್ಜಿ: ಮೂಲಭೂತ ಸೌಕರ್ಯಗಳ ಸಮಸ್ಯೆಯಿದೆ ಎಂದ ಸುಪ್ರೀಂ ಕೋರ್ಟ್

Update: 2022-04-26 17:49 GMT

ಹೊಸದಿಲ್ಲಿ,ಎ.26: ಸೆಂಟ್ರಲ್ ವಿಸ್ಟಾ ಮಾದರಿಯಲ್ಲಿ ಜ್ಯುಡಿಷಿಯಲ್ (ನ್ಯಾಯಾಂಗ) ವಿಸ್ಟಾ ನಿರ್ಮಾಣವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಕೇಂದ್ರದಿಂದ ಸೂಚನೆಗಳನ್ನು ಪಡೆದುಕೊಳ್ಳಲು ತನಗೆ ಕಾಲಾವಕಾಶ ಅಗತ್ಯವಿದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ತಿಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ವಿಚಾರಣೆಯನ್ನು ಜುಲೈವರೆಗೆ ಮುಂದೂಡಿತು. ವಿಷಯವನ್ನು ಕೈಗೆತ್ತಿಕೊಳ್ಳುವ ಮೂಲಕ ಮೂಲಸೌಕರ್ಯ ಸಮಸ್ಯೆಯನ್ನು ತಾನು ಎದುರಿಸುತ್ತಿರುವುದನ್ನು ಬಿಂಬಿಸಲಷ್ಟೇ ತಾನು ಪ್ರಯತ್ನಿಸಿದ್ದೇನೆ ಎಂದು ಅದು ತಿಳಿಸಿತು.

‘ನಿನ್ನೆ ನಾವು ಈ ವಿಷಯವನ್ನು ಕೈಗೆತ್ತಿಕೊಂಡಾಗ ಯಾವುದೇ ನಿರ್ದೇಶಗಳನ್ನು ಹೊರಡಿಸುವುದಿಲ್ಲ ಎಂದು ತಿಳಿಸಿದ್ದೆವು. ಇದು ಸರಕಾರವೇ ನಿರ್ಧರಿಸಬೇಕಾದ ವಿಷಯವಾಗಿದೆ. ಈ ಅರ್ಜಿಯ ಮೂಲಕ ಇಂತಹ ಸಮಸ್ಯೆ ಇರುವುದನ್ನು ಸರಕಾರದ ಗಮನಕ್ಕೆ ತರಲಾಗುತ್ತಿದೆ’ ಎಂದು ಹೇಳಿದ ನ್ಯಾ.ವಿನೀತ ಸರನ್ ನೇತೃತ್ವದ ಪೀಠವು,ನೀವು ಯೋಜನೆಯೊಂದನ್ನು ರೂಪಿಸಬಹುದು. ಅದಕ್ಕಾಗಿ ಒಂದು,ಮೂರು ಅಥವಾ ಎಷ್ಟೇ ತಿಂಗಳುಗಳನ್ನು ತೆಗೆದುಕೊಳ್ಳಿ,ಆದರೆ ಕನಿಷ್ಠ ಆ ಕಾರ್ಯಕ್ಕೆ ಚಾಲನೆ ನೀಡಿ. ಸಮಸ್ಯೆಯಿದೆ,ಆದರೆ ಅದನ್ನು ಬಗೆಹರಿಸುವುದು ನ್ಯಾಯಾಲಯದ ಕೆಲಸವಲ್ಲ. ನ್ಯಾಯಾಲಯವು ಕೇವಲ ಮಾರ್ಗದರ್ಶನವನ್ನು ನೀಡಬಲ್ಲದು,ಆದರೆ ಸಮಸ್ಯೆಯನ್ನು ನೀವೇ ಬಗೆಹರಿಸಬೇಕು ಎಂದು ಹೇಳಿತು.

ನ್ಯಾಯವಾದಿ ಎ.ಕೆ.ಪ್ರಸಾದ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲಿಯ ಹಾಲಿ ಮೂಲಸೌಕರ್ಯಗಳು ಸಾಕಷ್ಟಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿರುವ ಪ್ರಸಾದ್,ನ್ಯಾಯಾಲಯದ ಸುತ್ತಲಿನ ಸ್ಥಳವನ್ನು ಹೆಚ್ಚು ನ್ಯಾಯಾಲಯ ಕೊಠಡಿಗಳು,ಕಚೇರಿ ಸ್ಥಳಾವಕಾಶಗಳು ಮತ್ತು ವಕೀಲರ ಚೇಂಬರ್ಗಳನ್ನು ಒಳಗೊಂಡ ಜ್ಯುಡಿಷಿಯಲ್ ವಿಸ್ಟಾ ಆಗಿ ಪುನರಾಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯಕ್ಕೆ ಈಗಿನ ಮೂಲಸೌಕರ್ಯಗಳು ಸೂಕ್ತವಾಗಿಲ್ಲ ಎಂದು ಮೆಹ್ತಾ ಒಪ್ಪಿಕೊಂಡರು.

ಅರ್ಜಿಯ ಫಲವನ್ನು ಅನುಭವಿಸಲು ತಾನಾಗಲೀ ತನ್ನ ಸಹೋದ್ಯೋಗಿ ನ್ಯಾಯಾಧೀಶರಾಗಲೀ ಇಲ್ಲಿರುವುದಿಲ್ಲ,ಆದರೆ ಕನಿಷ್ಠ ಈ ಬಗ್ಗೆ ಚಿಂತನೆಯನ್ನು ನಡೆಸಬೇಕಿದೆ ಎಂದು ನ್ಯಾ.ಸರನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News