ಕಾಶ್ಮೀರವನ್ನು ಸೇನೆಯು ವಶಪಡಿಸಿಕೊಂಡಿದೆ ಎಂಬ ಹೇಳಿಕೆಗೆ ವಾಕ್ ಸ್ವಾತಂತ್ರ್ಯದ ರಕ್ಷೆಯಿಲ್ಲ: ಜಮ್ಮು-ಕಾಶ್ಮೀರ ಹೈಕೋರ್ಟ್

Update: 2022-04-26 17:50 GMT

ಹೊಸದಿಲ್ಲಿ,ಎ.26: ಕಾಶ್ಮೀರವನ್ನು ಸೇನೆಯು ವಶಪಡಿಸಿಕೊಂಡಿದೆ ಅಥವಾ ಕಾಶ್ಮೀರಿಗಳನ್ನು ಗುಲಾಮರ ಮಟ್ಟಕ್ಕೆ ಇಳಿಸಲಾಗಿದೆ ಎಂಬ ಹೇಳಿಕೆಗಳಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಖಾತರಿ ಪಡಿಸಿರುವ ಸಂವಿಧಾನದ 19(ಎ) ವಿಧಿಯಡಿ ಯಾವುದೇ ರಕ್ಷಣೆಯನ್ನು ನೀಡಲಾಗಿಲ್ಲ ಎಂದು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ಹೇಳಿದೆ.

 ನಿರ್ಲಕ್ಷಕ್ಕಾಗಿ ಸರಕಾರವನ್ನು ಟೀಕಿಸುವುದು ಮತ್ತು ಜನರ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಆಕ್ರೋಶ ವ್ಯಕ್ತಪಡಿಸುವುದು ಒಂದು ವಿಷಯವಾಗಿದ್ದರೆ ದೇಶದ ನಿರ್ದಿಷ್ಟ ಭಾಗದ ಜನರು ಭಾರತ ಸರಕಾರದ ಗುಲಾಮರಾಗಿದ್ದಾರೆ ಅಥವಾ ಅವರು ದೇಶದ ಸೇನಾಪಡೆಗಳ ವಶದಲ್ಲಿದ್ದಾರೆ ಎಂದು ಪ್ರತಿಪಾದಿಸುವುದು ಬೇರೆಯೇ ವಿಷಯವಾಗುತ್ತದೆ ಎಂದು ಉಚ್ಚ ನ್ಯಾಯಾಲಯವು ತನ್ನ ಎ.22ರ ಆದೇಶದಲ್ಲಿ ಹೇಳಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ(ಯುಎಪಿಎ)ಯಡಿ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯವಾದಿ ಮುಝಾಮಿಲ್ ಬಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ.ಸಂಜಯ ಧರ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದರು.

2018,ಅಕ್ಟೋಬರ್ನಲ್ಲಿ ಕುಲ್ಗಾಮ್ ಜಿಲ್ಲೆಯ ಲಾರೂ ಗ್ರಾಮದಲ್ಲಿ ನಾಗರಿಕರ ಹತ್ಯೆಗಳನ್ನು ಟೀಕಿಸಿ ಫೇಸ್ಬುಕ್ ಪೋಸ್ಟ್ಗಳಿಗಾಗಿ ಬಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದ ಸ್ಥಳದಲ್ಲಿ ಸ್ಫೋಟದಿಂದಾಗಿ ಏಳು ನಾಗರಿಕರು ಮೃತಪಟ್ಟಿದ್ದರು.

ಬಟ್ ಇತರ ಹಿಂಸಾಚಾರದ ಘಟನೆಗಳ ಕುರಿತೂ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದು,ಅದು ಅವರ ವಾಕ್ ಸ್ವಾತಂತ್ರದ ವ್ಯಾಪ್ತಿಯಲ್ಲಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

 ಕ್ಯಾನ್ಸರ್ನಂತಿರುವ ಸೇನೆಯು ಕಾಶ್ಮೀರವನ್ನು ವಶಪಡಿಸಿಕೊಂಡಿದೆ ಮತ್ತು ಕಣಿವೆಯ ಜನರು ಕೇಂದ್ರ ಸರಕಾರದ ಗುಲಾಮರಂತಾಗಿದ್ದಾರೆ ಎಂದು ಬಟ್ ತನ್ನ ಫೇಸ್ಬುಕ್ ಪೋಸ್ಟ್ಗಳಲ್ಲಿ ಹೇಳುವ ಮೂಲಕ ಜಮ್ಮು-ಕಾಶ್ಮೀರವು ಭಾರತದ ಭಾಗವಲ್ಲ ಎಂಬ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ. ತನ್ನ ಅಭಿಪ್ರಾಯದಲ್ಲಿ ಸಂವಿಧಾನದಡಿ ಖಾತರಿ ಪಡಿಸಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ದೇಶದ ಭಾಗದ ಅಥವಾ ಅದರ ಜನರ ಸ್ಥಾನಮಾನವನ್ನು ಪ್ರಶ್ನಿಸಲು ಓರ್ವ ವ್ಯಕ್ತಿಗೆ ಅವಕಾಶ ನೀಡುವ ಮಟ್ಟಕ್ಕೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

ಬಟ್ ನಡವಳಿಕೆಯು ಯುಎಪಿಎಯ ಕಲಂ 2(ಒ)ದಲ್ಲಿನ ‘ಕಾನೂನು ಬಾಹಿರ ಚಟುವಟಿಕೆ’ಯ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿರುವ ನ್ಯಾಯಾಲಯವು,ಅವರ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಲು ನಿರಾಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News