ತಮಿಳುನಾಡು: ರಥೋತ್ಸವದ ವೇಳೆ ವಿದ್ಯುತ್ ಸ್ಪರ್ಶ, ಕನಿಷ್ಠ 11 ಮಂದಿ ಮೃತ್ಯು
ಚೆನ್ನೈ, ಎ 27: ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಳಿಮೆಡುವಿನ ಅಪ್ಪಾರ್ ಮಡಂ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ನಡೆದ ರಥೋತ್ಸವದ ಸಂದರ್ಭ ವಿದ್ಯುತ್ ಆಘಾತದಿಂದ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಅಪ್ಪಾರ್ ಮಡಂ ದೇವಸ್ಥಾನದಲ್ಲಿ ರಥ ತಿರುವು ತೆಗೆದುಕೊಳ್ಳುವಾಗ ಕೆಲವು ಸಮಸ್ಯೆ ಉಂಟಾಯಿತು. ರಥ ಹಿಂದಿರುಗುವಾಗ ಹೈ ವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿತು. ಇದರ ಪರಿಣಾಮ ರಥ ಹತ್ತಿ ಉರಿದಿದ್ದು, ಹತ್ತಿರಲ್ಲಿ ನಿಂತಿದ್ದ 11 ಮಂದಿ ಸುಟ್ಟು ಕರಕಲಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಯಾವುದೇ ಅನಪೇಕ್ಷಿತ ಘಟನೆಗಳು ನಡೆಯದಂತೆ ರಥೋತ್ಸವ ನಡೆಯುವ ಮಾರ್ಗದಲ್ಲಿ ಸಾಮಾನ್ಯವಾಗಿ ತಂತಿಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ಆದರೆ, ರಥ ಹೈ ವೋಲ್ಟೇಜ್ ತಂತಿಗೆ ತಾಗುತ್ತಿರಲಿಲ್ಲ. ಆದುದರಿಂದ ಈ ಬಾರಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರಲಿಲ್ಲ. ಆದರೆ, ಅತ್ಯಧಿಕ ಅಲಂಕಾರದ ಕಾರಣದಿಂದ ರಥದ ಎತ್ತರ ಹೆಚ್ಚಾಗಿರುವ ಹಾಗೂ ವಿದ್ಯುತ್ ತಂತಿಗೆ ಸ್ಪರ್ಶಿಸಿರುವ ಸಾಧ್ಯತೆ ಇದೆ’’ ಎಂದು ಅಧಿಕಾರಿ ತಿಳಿಸಿದ್ದಾರೆ. ‘‘ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ’’ ಎಂದು ತಿರುಚಿರಾಪ್ಪಳ್ಳಿ ಕೇಂದ್ರ ವಲಯದ ಐಜಿಪಿ ವಿ. ಬಾಲಕೃಷ್ಣನ್ ಹೇಳಿದ್ದಾರೆ.