×
Ad

ಹಿರಿಯರ ತ್ಯಾಗ ತಿಳಿಸಲು ಅಂತ್ಯೋದಯ ಅಭಿಯಾನ: ಶಾಸಕ ವೇದವ್ಯಾಸ ಕಾಮತ್

Update: 2022-04-27 17:40 IST

ಮಂಗಳೂರು : ದೇಶದ ಸ್ವತಂತ್ರಕ್ಕಾಗಿ ಹಿರಿಯರು ಮಾಡಿದ ತ್ಯಾಗ ಹಾಗೂ ಸೇವೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಲು ಆಝಾದಿ ಕಾ ಅಮೃತ ಮಹೋತ್ಸವದಡಿ ಅಂತ್ಯೋದಯ ಅಭಿಯಾನ -2022 ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರಾದ ವೇದವ್ಯಾಸ್ ಕಾಮತ್ ಅವರು ಹೇಳಿದರು.

ಅವರು ನಗರದ ಕದ್ರಿಹಿಲ್ಸ್ ನಲ್ಲಿರುವ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತ್ಯೋದಯ ಅಭಿಯಾನ-2022ಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕರೆ ತರಬೇಕು ಎನ್ನುವ ಉದ್ದೇಶದಿಂದ ಅಂತ್ಯೋದಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಂವಿಧಾನದ ಆಶಯಕ್ಕೆ ಪೂರಕವಾಗಿ ರೂಪಿಸಲಾಗಿರುವ ಈ ಕಾರ್ಯಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಆಸ್ಥೆಯಿಂದ ಅನುಷ್ಟಾನಗೊಳಿಸುತ್ತಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನುಭಾವರ ಚರಿತ್ರೆಯನ್ನು ತಿಳಿಸುವ ಮೂಲಕ ಅವರ ಪ್ರೇರಣೆ ಹಾಗೂ  ತ್ಯಾಗದೊಂದಿಗೆ ಅವರು ನಡೆದ ದಾರಿಯನ್ನು ಯುವಜನತೆಗೆ ತಿಳಿಸಿಕೊಟ್ಟು ಅವರನ್ನು ದೇಶಭಕ್ತಿ ಜತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬೆಳಗಾಂ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾತ್ರ ಈ ಯೋಜನೆಗೆ ಆಯ್ಕೆ  ಮಾಡಿರುವುದು ವಿಶೇಷ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಮಾತನಾಡಿ, ಯುವಜನತೆ ಸ್ವಾತಂತ್ರ್ಯ ಮತ್ತು  ಸ್ವೇಚ್ಛೆಯ ಅಂತರವನ್ನು ತಿಳಿದುಕೊಳ್ಳಬೇಕು.  ಮೂಲಭೂತ ಕರ್ತವ್ಯಗಳನ್ನು ನಿಭಾಯಿಸುವ ಮೂಲಕ ತಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ದೇಶ ಸೇವೆ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯರು ಅಭಿಯಾನದ ಬಿತ್ತಿ ಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್, ಉಪಕಾರ್ಯದರ್ಶಿ ಆನಂದ್ ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು ಹಾಗೂ ಕಾಲೇಜು ಪ್ರಾಧ್ಯಾಪಕರು, ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News