ಬೆಳ್ತಂಗಡಿ; ಆದಿವಾಸಿ ಮಹಿಳೆಗೆ ಹಲ್ಲೆ, ಮಾನಹಾನಿ ಪ್ರಕರಣ: ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2022-04-27 15:11 GMT

ಬೆಳ್ತಂಗಡಿ: ತಾಲೂಕು ಇಂದು ಇಲ್ಲಿಯ ಶಾಸಕರ ದೆಸೆಯಿಂದ ಅರಾಜಕತೆಯಿಂದ ಕುಸಿಯುವಂತಾಗಿದೆ, ನೈತಿಕತೆಯೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಓರ್ವ ಹಿಂದೂ ಮಹಿಳೆ ತನ್ನ ಮಾನವನ್ನು ನಡು ಬೀದಿಯಲ್ಲಿ ಕಳಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಹೇಳಿದ್ದಾರೆ.

ಅವರು ಇಂದು ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ಉಜಿರೆಯಲ್ಲಿ ಆದಿವಾಸಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಖಂಡಿಸಿ, ಹಾಗೂ ಆರೋಪಿಗಳ ಬಂದನಕ್ಕೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕು ರಕ್ಷಣಾ ಸಮಿತಿ ಮತ್ತು ಆದಿವಾಸಿ ಹಕ್ಕು ರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ದರಣಿಯನ್ನುದ್ದೇಶಿಸಿ ಮಾತಾಡಿದರು.

ಶಾಸಕರು ತಪ್ಪಿ ನಡೆಯುತ್ತಿದ್ದರೆ ಅವರ ಬೆಂಬಲಿಗರೂ ಅದೇ ದಾರಿ ಹಿಡಿಯುತ್ತಿದ್ದಾರೆ. ಉಜಿರೆಯ ನಡು ರಸ್ತೆಯಲ್ಲಿ ಓರ್ವ ಯುವತಿಯನ್ನು ಬಟ್ಟೆ ಹರಿದು ದೌರ್ಜನ್ಯ ಮಾಡಿದ ಆರೋಪಿಗಳನ್ನ ಬಂಧಿಸಲೂ ಶಾಸಕರ ಅನುಮತಿ ಬೇಕೇ ಎಂದು ಪೋಲೀಸರನ್ನು ಅವರು ಪ್ರಶ್ನಿಸಿದರು.

ಹೋರಾಟಗಾರರನ್ನುದ್ದೇಶಿಸಿ ಮಾತಾಡಿದ ಕಾರ್ಮಿಕ ನಾಯಕ ಬಿ.ಎಂ.ಭಟ್ ಅವರು ಈ ಬೆತ್ತಲೆ ಪ್ರಕರಣದಿಂದ ಹಿಂದೂ ರಕ್ಷಕರೆಂದು ಬೊಗಳೆ ಬಿಡುವ ಆರ್.ಎಸ್.ಎಸ್, ಸಂಘ ಪರಿವಾರ ನಿಜವಾಗಿ ಹಿಂದು ಧರ್ಮದ ನಾಶಕರು ಎಂಬ ಸತ್ಯ ನಮಗೆ ಅರಿವಾಗುವಂತಾಯಿತು. ಬಿಜೆಪಿ ಹಿಂದುಗಳೆಂದರೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಧರ್ಮ, ಬಡ ದಿನೇಶ ನಂತವರ ಕೊಲೆ ಮಾಡುವ ಧರ್ಮ ಎಂಬುದು ಸಾಬೀತಾಗಿದೆ ಎಂದ ಅವರು ನಿಜವಾದ ಹಿಂದು ಧರ್ಮಿಗರು ಇಂತಹ ಮಾನಗೇಡಿ ಕೆಲಸ ಮಾಡುವುದಿಲ್ಲ ಎಂದರು. 

ದುಷ್ಕರ್ಮಿಗಳ ಬಂಧನ ಆಗುವ ತನಕ ನಮ್ಮ ಹೋರಾಟ ನಿಲ್ಲದು ಎಂದರು. ಮುಸ್ಲಿಂರ ತಲೆಯಿಂದ ಬಟ್ಟೆ ತೆಗೆಸಿದ ಬಿಜೆಪಿಗರು ಹಿಂದುಗಳ ಮೈಮೇಲೇ ಬಟ್ಟೆ ಇರಬಾರದೆನ್ನುವವರೆಂಬುದು ಉಜಿರೆ ಪ್ರಕರಣ ಸಾಬೀತು ಮಾಡಿದೆ ಎಂದರು.

ಈ ಸಂದರ್ಭ ಮಾತಾಡಿದ ಈಶ್ವರಿ ಪದ್ಮುಂಜ ಅವರು ಹಿಂದು ಧರ್ಮದ ಮಹಿಳೆಯ ರಕ್ಷಣೆಗೆ ಧರ್ಮ ರಕ್ಷಣೆಯವರು ಎಲ್ಲಿದ್ದಾರೆ ? ನಮ್ಮ ಶಾಸಕರಾದ ಹರೀಶ್ ಪೂಂಜರು ಕನಿಷ್ಟ ಒಂದು ಸಾಂತ್ವಾನವನ್ನೂ ಹೇಳದಷ್ಟು ಆರೋಪಿಗಳ ಪರ ನಿಂತಿರುವುದು ಖಂಡನೀಯ ಎಂದರು.

ಕಾರ್ಮಿಕ ಮುಖಂರಾದ ಎಲ್ ಮಂಜುನಾಥ್, ದಮ್ಮಾನಂದ, ಡಿ.ಎಸ್.ಎಸ್. ಮುಖಂಡ ನೇಮಿರಾಜ್ ಕಿಲ್ಲೂರು ಮೊದಲಾದವರು ಮಾತಾಡಿದರು.

ಸಂಜೆ ಹೋರಾಟದ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿಯವರು ಶನಿವಾರದ ಒಳಗೆ ಆರೋಪಿಗಳ ಬಂಧಿಸುವ ಭರವಸೆ ನೀಡಿದ ಬಳಿಕ ಅನಿರ್ಧಿಷ್ಟ ಹೊರಾಟವನ್ನು ಶನಿವಾರದವರೆಗೆ ಮುಂದೂಡಿ ಆರೋಪಿಗಳ ಬಂಧನವಾಗದಿದ್ದಲ್ಲಿ ಮೇ  2 ರಂದು ದರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಪ್ರಕಟಿಸಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಕಿರಣ ಪ್ರಭಾ  ಸ್ವಾಗತಿಸಿ ಪ್ರಸ್ತಾವನೆ ಮಾಡಿದರು. ಹೋರಾಟದ ನೇತೃತ್ವದಲ್ಲಿ ಜಯರಾಮ ಮಯ್ಯ, ಸಂಜೀವ ನಾಯ್ಕ, ನೆಬಿಸಾ, ಕುಮಾರಿ, ಶ್ಯಾಮರಾಜ್, ಡೊಂಬಯ ಗೌಡ ಜಯಶ್ರೀ, ಭವ್ಯ, ರಾಮಚಂದ್ರ, ಅಶ್ವಿತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News