ದಿಲ್ಲಿ ರಾಜಧಾನಿ ಆಗಿರುವುದರಿಂದ ನಿಯಂತ್ರಣ ಅಗತ್ಯವಿದೆ ಎಂದ ಕೇಂದ್ರ ಸರಕಾರ‌

Update: 2022-04-27 18:02 GMT
PTI

ಹೊಸದಿಲ್ಲಿ,ಎ.27: ದಿಲ್ಲಿಯಲ್ಲಿ ಅಧಿಕಾರಿಗಳ ವರ್ಗಾವಣೆಗಳು ಮತ್ತು ನಿಯೋಜನೆಗಳ ಮೇಲೆ ತನ್ನ ನಿಯಂತ್ರಣವನ್ನು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡ ಕೇಂದ್ರವು,ದೇಶದ ರಾಜಧಾನಿಯಲ್ಲಿ ಆಡಳಿತದ ಮೇಲೆ ತಾನು ವಿಶೇಷ ಅಧಿಕಾರಗಳನ್ನು ಹೊಂದಿರುವುದು ಅಗತ್ಯವಾಗಿದೆ ಎಂದು ತಿಳಿಸಿತು. ಇದರ ಬೆನ್ನಲ್ಲೇ ದಿಲ್ಲಿ ಸರಕಾರವು ಕೇಂದ್ರದ ನಿಲುವಿಗೆ ಆಕ್ಷೇಪವನ್ನು ವ್ಯಕ್ತಪಡಿಸಿತು.

ದಿಲ್ಲಿಯು ರಾಷ್ಟ್ರ ರಾಜಧಾನಿಯಾಗಿರುವುದರಿಂದ ಸರಕಾರಿ ಅಧಿಕಾರಿಗಳ ನೇಮಕಾತಿಗಳು ಮತ್ತು ವರ್ಗಾವಣೆಗಳ ಮೇಲೆ ತಾನು ಅಧಿಕಾರ ಹೊಂದಿರುವುದು ಅಗತ್ಯವಾಗಿದೆ. ದಿಲ್ಲಿಯು ದೇಶದ ಮುಖವಾಗಿದೆ. ವಿಶ್ವವು ದಿಲ್ಲಿಯ ಮೂಲಕ ಭಾರತವನ್ನು ನೋಡುತ್ತದೆ ಎಂದು ಕೇಂದ್ರವು ಹೇಳಿತು.ನಾಗರಿಕ ಸೇವೆಗಳ ಮೇಲೆ ನಿಯಂತ್ರಣ ಕುರಿತು ಕೇಂದ್ರದ ವಿರುದ್ಧ ದಿಲ್ಲಿ ಸರಕಾರದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.ದಿಲ್ಲಿಯು ರಾಷ್ಟ್ರ ರಾಜಧಾನಿ ಆಗಿರುವುದರಿಂದ ಅದರ ಆಡಳಿತದ ಮೇಲೆ ಕೇಂದ್ರವು ವಿಶೇಷ ಅಧಿಕಾರಗಳನ್ನು ಮತ್ತು ಮಹತ್ವದ ವಿಷಯಗಳಲ್ಲಿ ನಿಯಂತ್ರಣವನ್ನು ಹೊಂದಿರುವುದು ಅಗತ್ಯವಾಗಿದೆ. ದಿಲ್ಲಿಯ ಆಡಳಿತ ಕುರಿತು ಕಾನೂನುಗಳು ಕೇಂದ್ರ ಮತ್ತು ದಿಲ್ಲಿ ಸರಕಾರದ ನಡುವೆ ಯಾವುದೇ ನೇರ ಸಂಘರ್ಷವನ್ನು ತಡೆಯುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದ ಕೇಂದ್ರವು,ದಿಲ್ಲಿಯ ಮೇಲೆ ಕೇಂದ್ರವು ನಿಯಂತ್ರಣ ಹೊಂದಿರುವುದು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮುಖ್ಯವಾಗಿದೆ ಎಂದು ಹೇಳಿರುವ ಬಾಲಕೃಷ್ಣನ್ ಸಮಿತಿಯ ವರದಿಯನ್ನೂ ಪ್ರಸ್ತಾಪಿಸಿತು.

ಈ ಪ್ರಕರಣವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಒಪ್ಪಿಸುವಂತೆ ಕೇಂದ್ರವು ಕೋರಿಕೊಂಡಿತು.
ಇದನ್ನು ಬಲವಾಗಿ ವಿರೋಧಿಸಿದ ದಿಲ್ಲಿ ಸರಕಾರದ ಪರ ವಕೀಲ ಅಭಿಷೇಕ ಮನು ಸಿಂಘ್ವಿಯವರು,ಕೇಂದ್ರವು ಸೂಚಿಸಿರುವಂತೆ ಈ ವಿಷಯವನ್ನು ವಿಶಾಲ ಪೀಠಕ್ಕೆ ಒಪ್ಪಿಸುವ ಅಗತ್ಯವಿಲ್ಲ. ಬಾಲಕೃಷ್ಣನ್ ಸಮಿತಿಯ ವರದಿಯು ತಿರಸ್ಕೃತಗೊಂಡಿರುವುದರಿಂದ ಅದನ್ನು ಚರ್ಚಿಸುವ ಅಗತ್ಯವೂ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News