ಮೀಸಲಾತಿಯ ಹೆಸರಲ್ಲಿ 'ನಕಲಿ'ಗಳು

Update: 2022-04-28 04:50 GMT

ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತ ಸಮುದಾಯವನ್ನು ತುಳಿಯುತ್ತಾ ಬಂದವರು, ಸ್ವಾತಂತ್ರ್ಯಾನಂತರವೂ ಅದನ್ನು ಬೇರೆ ಬೇರೆ ಮುಖವಾಡಗಳಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಶೋಷಿತ ಸಮುದಾಯದ ಏಳಿಗೆಗಾಗಿ ಸಂವಿಧಾನ ಯಾವೆಲ್ಲ ಯೋಜನೆಗಳನ್ನು ರೂಪಿಸಿತೋ ಅವುಗಳನ್ನೆಲ್ಲ ಬುಡಮೇಲು ಮಾಡುವಲ್ಲಿ ಬಲಿಷ್ಠ ಜಾತಿಗಳು ಯಶಸ್ವಿಯಾಗಿವೆ. 'ಒಂದೆಡೆ ಮೀಸಲಾತಿಯಿಂದ ದಲಿತರು ಕೊಬ್ಬಿದ್ದಾರೆ' ಎಂಬ ಸುಳ್ಳು ಪ್ರಚಾರಗಳನ್ನು ಮಾಡುತ್ತಾ, ಮಗದೊಂದೆಡೆ ಮೀಸಲಾತಿಯ ಸವಲತ್ತು ದಲಿತರಿಗೆ ಸಿಗದಂತೆ ಮಾಡುವಲ್ಲಿ ಬೇರೆ ಬೇರೆ ತಂತ್ರಗಳನ್ನು ಆಯೋಜಿಸುತ್ತಾ ಬಂದಿವೆ. ಪರಿಣಾಮವಾಗಿ ಮೀಸಲಾತಿ ಜಾರಿಯಾಗಿ ಇಷ್ಟು ವರ್ಷಗಳಾದರೂ, ದಲಿತರ ಬದುಕಿನಲ್ಲಿ ವಿಶೇಷ ಬದಲಾವಣೆಗಳು ಆಗಿಲ್ಲ. ಮೇಲ್ ಪದರದಲ್ಲಿ ಒಂದಿಷ್ಟು ಜನರು ಉತ್ತಮ ಹುದ್ದೆಗಳನ್ನು ಪಡೆದುಕೊಂಡು ಬದುಕನ್ನು ಕಟ್ಟಿಕೊಂಡರಾದರೂ, ತಳಸ್ತರದಲ್ಲಿ ದಲಿತರ ಜೀವನ, ಅವರನ್ನು ನೋಡುವ ರೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದಕ್ಕೆ ಕಾರಣವಿಷ್ಟೇ. ದಲಿತರನ್ನು ಮೇಲೆತ್ತಲು ರೂಪಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುವವರು ದಲಿತರನ್ನು ಶೋಷಣೆ ಮಾಡಿಕೊಂಡು ಬಂದಿದ್ದ ಅದೇ ಮೇಲ್‌ಜಾತಿಯ ಬಲಿಷ್ಠ ಸಮುದಾಯದ ಪ್ರತಿನಿಧಿಗಳು. ದಲಿತರ ಮೀಸಲಾತಿಯೂ ಸೇರಿದಂತೆ ಯಾವುದೇ ಯೋಜನೆಗಳನ್ನು ದಲಿತರಿಗೆ ಪರಿಣಾಮಕಾರಿಯಾಗಿ ತಲುಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ದಲಿತರ ಯೋಜನೆಗಳನ್ನು ಬೇರೆ ಬೇರೆ ರೂಪದಲ್ಲಿ ಇವರು ಕಸಿದುಕೊಂಡು, ಸಬಲ ಜಾತಿಗಳಿಗೆ ಹಂಚುತ್ತಿದ್ದಾರೆ.

ಕೋತಿ ಬೆಣ್ಣೆ ತಿಂದು ಮೇಕೆಯ ಮೂತಿಗೆ ಒರೆಸಿದ ಕತೆಯಂತಾಗಿದೆ ಮೀಸಲಾತಿ. ಎಸ್ಸಿ-ಎಸ್ಟಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚನೆಗೈದಿರುವ ಆರೋಪದಡಿ ಈವರೆಗೆ 89 ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೆ, ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದೂ ತಿಳಿಸಿದೆ. ಜೊತೆಗೆ ಎಸ್ಸಿ, ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾದ ಒಟ್ಟು 591 ಪ್ರಕರಣಗಳು ವಿವಿಧ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳಲ್ಲಿ ಇಪ್ಪತ್ತು ವರ್ಷಗಳಿಂದ ಇತ್ಯರ್ಥ ಪಡಿಸದೆ ಬಾಕಿ ಉಳಿಸಿಕೊಂಡಿದ್ದು, ಇದರಿಂದ ಶೋಷಿತ ಸಮುದಾಯ ಸೌಲಭ್ಯ ವಂಚಿತವಾಗಿದೆ ಎಂದು ನಿರ್ದೇಶನಾಲಯ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ವಿತರಿಸಿದ ಒಟ್ಟು 11 ತಹಶೀಲ್ದಾರ್, 108 ಕಂದಾಯ ನಿರೀಕ್ಷಕರು ಮತ್ತು 107 ಗ್ರಾಮಲೆಕ್ಕಿಗರ ಮೇಲೆ ಎಫ್‌ಐಆರ್ ದಾಖಲಾಗಿದೆ ಎನ್ನುವುದನ್ನು ವರದಿ ಹೇಳುತ್ತದೆ. ಸುಳ್ಳು ಜಾತಿ ಪ್ರಮಾಣ ಪತ್ರ ಅನರ್ಹ ಅಭ್ಯರ್ಥಿಯನ್ನು ಹುದ್ದೆಗೆ ಆಯ್ಕೆ ಮಾಡುತ್ತದೆ ಮಾತ್ರವಲ್ಲ, ಓರ್ವ ಅರ್ಹ ಅಭ್ಯರ್ಥಿಯಿಂದ ಆತನ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಇಂದು ಎಲ್ಲ ವಿದ್ಯಾರ್ಹತೆಯಿದ್ದೂ ನೇಮಕಾತಿಗಾಗಿ ಕಾಯುತ್ತಿರುವ ಸಾವಿರಾರು ದಲಿತರು ನಮ್ಮ ನಡುವೆ ಇದ್ದಾರೆ. ಒಂದೆಡೆ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುತ್ತಿಲ್ಲ. ಮಗದೊಂದೆಡೆ ದಲಿತರೊಳಗೆ ವಿದ್ಯಾರ್ಹತೆಯಿರುವ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿ ಓಡಾಡುತ್ತಿದ್ದಾರೆ. ಹಾಗಾದರೆ ಮೀಸಲಾತಿಯ ನಿಜವಾದ ಸೌಲಭ್ಯವನ್ನು ಪಡೆಯುತ್ತಿರುವವರು ಯಾರು?

ಮೀಸಲಾತಿಯ ಮೂಲಕವೇ ದಲಿತರನ್ನು ಭಾರೀ ಪ್ರಮಾಣದಲ್ಲಿ ವಂಚಿಸಲಾಗಿದೆ. ಎಲ್ಲರೂ ದಲಿತರ ಮೀಸಲಾತಿಯ ಕುರಿತಂತೆ ಚರ್ಚಿಸುತ್ತಿರುವಾಗ, ಇತ್ತ ಮೇಲ್‌ಜಾತಿಯ ಮಾಸಿಕ 60,000 ರೂ. ವೇತನವಿರುದ 'ಬಡವರಿಗೆ' ಸರಕಾರ ಶೇ. 10 ಮೀಸಲಾತಿಯನ್ನು ನೀಡಿತು. ಈ ಮೀಸಲಾತಿಯನ್ನು ಕನಿಷ್ಠ ದಲಿತ ಮುಖಂಡರಾದರೂ ಪ್ರಶ್ನಿಸಬೇಕಾಗಿತ್ತು. ಯಾಕೆಂದರೆ, ಇದರಿಂದ ಮೇಲ್‌ಜಾತಿಯ ಜನರು ಉನ್ನತ ಹುದ್ದೆಗಳನ್ನು ಅಲಂಕರಿಸಲು ಇನ್ನಷ್ಟು ಸುಲಭವಾಗುತ್ತದೆ. ಆಯಕಟ್ಟಿನ ಜಾಗವನ್ನು ಮೇಲ್‌ಜಾತಿಯ ಜನರು ಆಕ್ರಮಿಸಿಕೊಂಡಂತೆ ದಲಿತರು ಇನ್ನಷ್ಟು ದುರ್ಬಲರಾಗುತ್ತಾ ಹೋಗುತ್ತಾರೆ. ಶೇ. 10 ಮೀಸಲಾತಿಗಾಗಿ ಮೇಲ್‌ಜಾತಿಯ ಜನರು ಯಾವತ್ತೂ ಬೀದಿಗಿಳಿದಿರಲಿಲ್ಲ. ಸರಕಾರಕ್ಕೊಂದು ಮನವಿಯನ್ನೂ ನೀಡಿರಲಿಲ್ಲ. ಇಷ್ಟಕ್ಕೂ ಈ ಜಾತಿಯು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ರಂಗಗಳಲ್ಲಿ ಅಗ್ರ ಪ್ರಾತಿನಿಧ್ಯವನ್ನು ನೀಡುತ್ತಾ ಬರುತ್ತಿದೆ. ಹೀಗಿರುವಾಗ ಏಕಾಏಕಿ ಇಂತಹದೊಂದು ಮೀಸಲಾತಿಯನ್ನು ಮೇಲ್‌ಜಾತಿಗಾಗಿ ಯಾಕೆ ಜಾರಿಗೊಳಿಸಲಾಯಿತು? ಈಗಾಗಲೇ ಮೀಸಲಾತಿ ಇದ್ದೂ ಹಿಂದುಳಿಯುತ್ತಿರುವ ದಲಿತರಿಗೆ ಶೇ. 10 ಮೀಸಲಾತಿ ಇನ್ನೊಂದು ಹೊಡೆತವಾಗಿದೆ. ಪರೋಕ್ಷವಾಗಿ ಮತ್ತೆ 'ದಲಿತರ ಮೀಸಲಾತಿ' ಸೌಲಭ್ಯವನ್ನು ಯಾವ ಕಾರಣವೂ ಇಲ್ಲದೆ ಮೇಲ್‌ಜಾತಿಯ ಜನರು ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲ, ದುರ್ಬಲ ವರ್ಗದ ಏಳಿಗೆಗಾಗಿ ನಿಗಮ, ಮಂಡಳಿ, ಪ್ರಾಧಿಕಾರಗಳನ್ನು ಮಾಡಬೇಕಾದ ಸರಕಾರ ಬಲಿಷ್ಠ ಸಮುದಾಯದ ಅಭಿವೃದ್ಧಿಗಾಗಿ ನಿಗಮ, ಮಂಡಳಿಗಳನ್ನು ಮಾಡಿದೆ. ಈಗಾಗಲೇ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಈ ಸಮುದಾಯಕ್ಕಾಗಿ ಮತ್ತೆ ನಿಗಮ, ಮಂಡಳಿಗಳ ಅಗತ್ಯ ಯಾಕೆ ಬಂತು? ಈ ಪ್ರಶ್ನೆಯನ್ನು ಯಾರೂ ಕೇಳದೇ ಇರುವುದು ಮೀಸಲಾತಿಯ ಅತಿ ದೊಡ್ಡ ಸೋಲಾಗಿದೆ.

ಒಂದು ಕಾಲದಲ್ಲಿ ಮನುಸಂವಿಧಾನ ಜಾರಿಗೊಳಿಸಿದ 'ಮೀಸಲಾತಿ' ಇನ್ನೂ ತೆರೆಮರೆಯಲ್ಲಿ ಜಾರಿಯಲ್ಲಿರುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಮಲಹೊರುವುದಕ್ಕೇ ರಚನೆಯಾದ ಜಾತಿ ಇನ್ನೂ ಸಮಾಜದಲ್ಲಿ ಅಸ್ತಿತ್ವದಲ್ಲಿದೆ. ಮಲ ಹೊರುವ ಪದ್ಧತಿಯೂ ಅಸ್ತಿತ್ವದಲ್ಲಿದೆ. 'ಮೀಸಲಾತಿ ಯಾಕೆ ಬೇಕು?' ಎಂದು ದಲಿತರನ್ನು ಪ್ರಶ್ನಿಸುವ ಜನರು, 'ನಮಗೂ ಮಲ ಹೊರುವ ಪದ್ಧತಿಯಲ್ಲಿ ಮೀಸಲಾತಿ ನೀಡಿ' ಎಂದು ಯಾಕೆ ಕೇಳುವುದಿಲ್ಲ? ನಕಲಿ ಜಾತಿ ಸರ್ಟಿಫಿಕೇಟ್ ಮಾಡಿಕೊಂಡು ಯಾಕೆ ರಸ್ತೆಯನ್ನು ಗುಡಿಸುವುದಿಲ್ಲ, ಮ್ಯಾನ್‌ಹೋಲ್‌ಗಳಿಗೆ ಇಳಿಯುವುದಿಲ್ಲ? ಮೀಸಲಾತಿ ದುರ್ಬಲಗೊಳ್ಳುವುದಕ್ಕೆ ಕೇವಲ ನಕಲಿ ಜಾತಿ ಪ್ರಮಾಣ ಪತ್ರ ಮಾತ್ರ ಕಾರಣವಲ್ಲ. ಮೀಸಲಾತಿಯನ್ನು ಯಾಕೆ ಜಾರಿಗೊಳಿಸಲಾಗಿದೆ ? ಎನ್ನುವುದರ ಉದ್ದೇಶವನ್ನೇ ನಾವು ಮರೆತಿರುವುದರಿಂದ ಅದು ದುರ್ಬಳಕೆಯಾಗುತ್ತಿದೆ. ಬಡವರನ್ನು ಮೇಲೆತ್ತಲೂ ಸರಕಾರ ತನ್ನದೇ ಆದ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಇಲ್ಲಿ ದಲಿತರು ಕೇವಲ ಬಡವರಲ್ಲ. ಬಡವನೊಬ್ಬ ನಾಳೆ ಶ್ರೀಮಂತನಾಗುವ ಅವಕಾಶವಿದೆ. ದೇವಸ್ಥಾನ ಪ್ರವೇಶ ಮಾಡಿ, ಅಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶವೂ ಇದೆ. ಆದರೆ ದಲಿತ ಬಡವನಿಗೆ ಎಂದೂ ಆ ಅವಕಾಶ ವಿರುವುದಿಲ್ಲ. ಯಾಕೆಂದರೆ, ನಮ್ಮ ಸಾಮಾಜಿಕ ವ್ಯವಸ್ಥೆ ಕೆಲವು ಜಾತಿಗಳನ್ನು ಆ ಮಟ್ಟದಲ್ಲಿ ತುಳಿದಿಟ್ಟಿದೆ. ಆದುದರಿಂದ ಅವರನ್ನು ಸಾಮಾಜಿಕವಾಗಿ ಮೇಲೆತ್ತುವುದಕ್ಕಾಗಿ ಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ ಇಂದು ಮೀಸಲಾತಿ ಯಾವ ಮಟ್ಟಕ್ಕೆ ದುರುಪಯೋಗವಾಗುತ್ತಿದೆ ಎಂದರೆ, ಮೀಸಲಾತಿಯಿಂದ ದಲಿತರಿಗೆ ಪ್ರಯೋಜನವಾಗುವುದಕ್ಕಿಂತ ಅನ್ಯಾಯವೇ ಹೆಚ್ಚಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News