×
Ad

ಬಡವರ ‘ಬೇಳೆಕಾಳು’ಗಳಿಂದ ಬೇಳೆ ಬೇಯಿಸಿದವರು

Update: 2022-04-28 12:31 IST

ಬಡವರು ಮತ್ತು ಸಶಸ್ತ್ರ ಪಡೆಗಳಿಗೆ 4,600 ಕೋ.ರೂ.ಗೂ ಅಧಿಕ ವೌಲ್ಯದ ಬೇಳೆಕಾಳುಗಳನ್ನು ಒದಗಿಸಲು ಕೇಂದ್ರ ಸರಕಾರವು ನಡೆಸಿದ್ದ ಹರಾಜುಗಳು ಕೆಲವು ದೊಡ್ಡ ಮಿಲ್‌ಗಳ ಮಾಲಕರು ಲಾಭ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿವೆ ಎನ್ನುವುದನ್ನು ವಾಣಿಜ್ಯ ಸಚಿವ ಪಿಯೂಷಗೋಯಲ್ ನೇತೃತ್ವದ ರಾಷ್ಟ್ರೀಯ ಉತ್ಪಾದಕತಾ ಮಂಡಳಿ (ಎನ್‌ಪಿಸಿ)ಯು ನಡೆಸಿದ ವಿಚಾರಣೆಯು ಬಹಿರಂಗಗೊಳಿಸಿದೆ.

ಮಂಡಳಿಯು ತನ್ನ ಪ್ರಾಥಮಿಕ ವರದಿಯನ್ನು 2021,ಅ.11ರಂದು ದೇಶದಲ್ಲಿ ಬೇಳೆಕಾಳುಗಳು ಮತ್ತು ಇತರ ಸರಕುಗಳ ಬೆಲೆ ಸ್ಥಿರೀಕರಣದ ಮೇಲ್ವಿಚಾರಣೆಯನ್ನು ಹೊಂದಿರುವ ಸಮಿತಿಗೆ ಸಲ್ಲಿಸಿದ್ದು,ಇದು ಸಮಾನ ಮನಸ್ಕ ಪತ್ರಕರ್ತರ ಗುಂಪು ‘ರಿಪೋರ್ಟರ್ಸ್ ಕಲೆಕ್ಟಿವ್ ’ನ ಅವಗಾಹನೆಗೆ ಲಭ್ಯವಾಗಿದೆ.

 ಎನ್‌ಪಿಸಿ ಸ್ವಾಯತ್ತ ಸರಕಾರಿ ಸಂಶೋಧನಾ ಸಂಸ್ಥೆಯಾಗಿದ್ದು, ಬೇಳೆಕಾಳುಗಳನ್ನು ಬಳಕೆಗೆ ಸಿದ್ಧ ರೂಪಕ್ಕೆ ಪರಿವರ್ತಿಸಲು ಮತ್ತು ಅವುಗಳನ್ನು ವಿತರಿಸಲು ಮಿಲ್‌ಗಳ ಆಯ್ಕೆಗಾಗಿ ನಡೆಸಲಾಗಿದ್ದ ಹರಾಜುಗಳ ಅಧ್ಯಯನವನ್ನು ನಡೆಸಿದೆ. ಮಿಲ್‌ಗಳು ಸರಕಾರವನ್ನು ವಂಚಿಸಿ ಟನ್‌ಗಳಷ್ಟು ಬೇಳೆಕಾಳುಗಳನ್ನು ಮುಕ್ತಮಾರುಕಟ್ಟೆಯಲ್ಲಿ ಲಾಭದಾಯಕ ಬೆಲೆಗಳಿಗೆ ಮಾರಾಟ ಮಾಡಲು ಮತ್ತು ಕಳಪೆ ಗುಣಮಟ್ಟದ ಬೇಳೆಕಾಳುಗಳನ್ನು ಪೂರೈಸಲು ಅವಕಾಶವನ್ನು ಕಲ್ಪಿಸಿದ್ದವು ಎನ್ನುವುದನ್ನು ಎನ್‌ಪಿಸಿ ಪತ್ತೆ ಹಚ್ಚಿದೆ.

ಮಿಲ್‌ಗಳು ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದ ಹರಾಜು ನಿಯಮಗಳನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ (ನಫೆಡ್)ವು ರೂಪಿಸಿತ್ತು. 2018ರಿಂದ ನಡೆಯುತ್ತಿರುವ ಹರಾಜು ಪ್ರಕ್ರಿಯೆಯನ್ನು ನಫೆಡ್ ರದ್ದುಗೊಳಿಸಬೇಕು ಎಂದು ಎನ್‌ಪಿಸಿಯು ಶಿಫಾರಸು ಮಾಡಿದೆ.

ಸಾಂಪ್ರದಾಯಿಕ ಹರಾಜು ಪ್ರಕ್ರಿಯೆಗಳಿಗಾಗಿ ಸರಕಾರವು ಬಳಸುವ ನಿಯಮಗಳನ್ನು ಮರುರೂಪಿಸುವ ಮೂಲಕ ನಫೆಡ್ ಹೇಗೆ ಮಿಲ್‌ಗಳು ಬಡವರಿಗಾಗಿ ಮೀಸಲಾಗಿದ್ದ ಟನ್‌ಗಟ್ಟಲೆ ಬೇಳೆಕಾಳುಗಳನ್ನು ದೋಚಲು ಅವಕಾಶ ನೀಡಿತ್ತು ಎನ್ನುವುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ತನ್ನ ಹಿಂದಿನ ತನಿಖೆಯೊಂದರಲ್ಲಿ ಬಯಲಿಗೆಳೆದಿತ್ತು.

ಆರ್‌ಟಿಐ ಅರ್ಜಿಗಳ ಮೂಲಕ ಲಭ್ಯವಾಗಿರುವ ಎನ್‌ಪಿಸಿಯ ಪ್ರಾಥಮಿಕ ತನಿಖಾ ವರದಿಯು ರಿಪೋರ್ಟರ್ಸ್ ಕಲೆಕ್ಟಿವ್ ಈ ಹಿಂದೆ ವರದಿ ಮಾಡಿದ್ದನ್ನು ಅಧಿಕೃತವಾಗಿ ದೃಢಪಡಿಸಿದೆ. ಎನ್‌ಪಿಸಿ 2021,ಅಕ್ಟೋಬರ್‌ನಲ್ಲಿ ತನ್ನೊಂದಿಗೆ ಹಂಚಿಕೊಂಡಿದ್ದ ಮಾಹಿತಿಗಳನ್ನು ಸರಕಾರವು ಕಡೆಗಣಿಸಿತ್ತು ಎನ್ನುವುದನ್ನು ಲಭ್ಯ ಇತರ ದಾಖಲೆಗಳು ತೋರಿಸಿವೆ. ನಂತರದ ಎರಡು ತಿಂಗಳುಗಳಲ್ಲಿ ಅದೇ ಹರಾಜು ಪದ್ಧತಿಯನ್ನು ಬಳಸಿ 875.47 ಕೋ.ರೂ.ವೌಲ್ಯದ ಬೇಳೆಕಾಳುಗಳನ್ನು ಹರಾಜು ಹಾಕಲು ನಫೆಡ್‌ಗೆ ಸರಕಾರವು ಅವಕಾಶ ನೀಡಿತ್ತು.

 ರಿಪೋರ್ಟರ್ಸ್ ಕಲೆಕ್ಟಿವ್ ಹರಾಜಿನ ನಿಜಬಣ್ಣವನ್ನು ಬಯಲುಗೊಳಿಸಿದ ಬಳಿಕ ನಫೆಡ್ ಈಗ ಕಲ್ಯಾಣ ಯೋಜನೆಗಳಿಗಾಗಿ ಬೇಳೆಕಾಳುಗಳ ಮಿಲ್ಲಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಿದೆ. ಬದಲಿಗೆ ಕಚ್ಚಾ ಬೇಳೆಕಾಳುಗಳನ್ನು ಮಾತ್ರ ವಿತರಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ಈ ವರ್ಷದ ಫೆಬ್ರವರಿಯಲ್ಲಿ ನಿರ್ಧರಿಸಿದ್ದು,ರಾಜ್ಯಗಳೇ ಈ ಬೇಳೆಕಾಳುಗಳನ್ನು ಬಳಕೆಗೆ ಸಿದ್ಧ ರೂಪಕ್ಕೆ ಪರಿವರ್ತಿಸಿಕೊಳ್ಳಬಹುದಾಗಿದೆ.

ನಫೆಡ್, ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ರಿಪೋರ್ಟರ್ಸ್ ಕಲೆಕ್ಟಿವ್‌ನ ಪ್ರಶ್ನೆಗಳಿಗೆ ಉತ್ತರಿಸಿಲ್ಲ.

ಕಾರ್ಯವಿಧಾನ ಏನಾಗಿತ್ತು ?

2015ರಲ್ಲಿ ಹೆಚ್ಚು ಬೇಳೆಕಾಳುಗಳನ್ನು ಉತ್ಪಾದಿಸಲು ರೈತರನ್ನು ಉತ್ತೇಜಿಸುವ ಮತ್ತು ಬೇಳೆಗಳ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ಸರಕಾರವು ರೈತರಿಂದ ಬೇಳೆಕಾಳುಗಳನ್ನು ಖರೀದಿಸುವ ಭರವಸೆಯನ್ನು ನೀಡಿತ್ತು. ಸರಕಾರದ ಬಳಿ ಬೇಳೆಕಾಳುಗಳ ದಾಸ್ತಾನು ಹೆಚ್ಚತೊಡಗಿದಾಗ 2017ರಲ್ಲಿ ನಫೆಡ್ ವಿವಿಧ ಕಲ್ಯಾಣ ಯೋಜನೆಗಳಡಿ ಬಳಕೆಗೆ ಸಿದ್ಧ ಬೇಳೆಕಾಳುಗಳನ್ನು ಪೂರೈಸುವ ಪ್ರಸ್ತಾವವನ್ನು ಮುಂದಿರಿಸಿತ್ತು. ಅದಕ್ಕಾಗಿ ನಫೆಡ್ ಹರಾಜು ವೇದಿಕೆಯನ್ನು ಸ್ಥಾಪಿಸಿದ್ದು,ಬೇಳೆಕಾಳುಗಳನ್ನು ಸಂಸ್ಕರಿಸಲು ಮತ್ತು ಅವುಗಳನ್ನು ರಾಜ್ಯಗಳಿಗೆ ಪೂರೈಸಲು ಮಿಲ್‌ಗಳು ಬಿಡ್‌ಗಳನ್ನು ಸಲ್ಲಿಸಬಹುದಿತ್ತು.

ಗುತ್ತಿಗೆಗಳ ನೀಡಿಕೆಗೆ ಸಂಬಂಧಿಸಿದಂತೆ ನಫೆಡ್ ರೂಪಿಸಿದ್ದ ವಿಧಾನವು ಕೆಲವು ಮಿಲ್‌ಗಳಿಗೆ ಇತರರಿಗಿಂತ ಹೆಚ್ಚಿನ ಲಾಭಗಳಿಕೆಗೆ ಅವಕಾಶ ಕಲ್ಪಿಸಿತ್ತು. ಸರಕಾರವು ಸಾಮಾನ್ಯವಾಗಿ ಅತ್ಯಂತ ಕಡಿಮೆ ಬಿಡ್‌ಗಳನ್ನು ಸಲ್ಲಿಸಿದವರಿಗೆ ಗುತ್ತಿಗೆಗಳನ್ನು ನೀಡುತ್ತದೆ. ಇದರ ಬದಲಿಗೆ ನಫೆಡ್ ಕಚ್ಚಾ ಬೇಳೆಕಾಳುಗಳನ್ನು ಸಂಸ್ಕರಿಸಲು ಅತ್ಯಧಿಕ ಔಟ್ ಟರ್ನ್ ಅನುಪಾತ (ಒಟಿಆರ್)ವನ್ನು ಉಲ್ಲೇಖಿಸಲು ಮಿಲ್‌ಗಳಿಗೆ ಸೂಚಿಸಿತ್ತು. ಒಟಿಆರ್ ಮಿಲ್‌ಗಳು ಸ್ವೀಕರಿಸುವ ಕಚ್ಚಾ ಬೇಳೆಕಾಳುಗಳು ಮತ್ತು ಅದರಿಂದ ಅಂತಿಮ ಬಳಕೆಗೆ ಸಿದ್ಧ ಬೇಳೆಗಳ ಉತ್ಪಾದನೆಯ ಪ್ರಮಾಣಗಳ ನಡುವಿನ ಅನುಪಾತವಾಗಿದೆ.

ಉದಾಹರಣೆಗೆ ಮಿಲ್‌ಗಳು 100 ಕೆ.ಜಿ. ಕಚ್ಚಾ ಬೇಳೆಕಾಳುಗಳನ್ನು ಸಂಸ್ಕರಿಸಿ 80 ಕೆ.ಜಿ.ಯಷ್ಟು ಬೇಳೆಯನ್ನು ಉತ್ಪಾದಿಸಬಹುದು ಮತ್ತು ಸುಮಾರು 10 ಕೆ.ಜಿ.ಯಷ್ಟು ತವಡು ಉಪಉತ್ಪನ್ನವಾಗಬಹುದು. ನಂತರ ಮಿಲ್‌ಗಳು 70 ಕೆ.ಜಿ. ಸಂಸ್ಕರಿತ ಬೇಳೆಗಳನ್ನು ಸರಕಾರಕ್ಕೆ ಮರಳಿಸುತ್ತವೆ. ಸರಕಾರದ ಪಾಲಿಗೆ ಒಟಿಆರ್ 70 ಕೆ.ಜಿ.ಆಗುತ್ತದೆ ಮತ್ತು ಉಳಿದ 10 ಕೆ.ಜಿ.ಯನ್ನು ಮಿಲ್‌ಗಳ ಸಾಗಣಿೆ ವೆಚ್ಚ,ಇತರ ವೆಚ್ಚಗಳು ಮತ್ತು ಲಾಭಕ್ಕೆ ಸರಿದೂಗಿಸಲಾಗುತ್ತದೆ. ಮಿಲ್‌ಗಳು ಹೇಗೆ ದುಡ್ಡನ್ನು ಕೊಳ್ಳೆ ಹೊಡೆದಿದ್ದವು ಎನ್ನುವುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಬಯಲಿಗೆಳೆದಿತ್ತು. ಮಿಲ್‌ಗಳು ಬಿಡ್ ಮಾಡಬಹುದಾದ ಒಟಿಆರ್‌ಗೆ ಯಾವುದೇ ಕನಿಷ್ಠ ಮಿತಿಯನ್ನು ನಫೆಡ್‌ನ ಹರಾಜುಗಳಲ್ಲಿ ನಿಗದಿಗೊಳಿಸಿರಲಿಲ್ಲ. ಒಟಿಆರ್ ಕಡಿಮೆಯಾದಷ್ಟೂ ಮಿಲ್‌ಗಳ ಲಾಭ ಹೆಚ್ಚಾಗುತ್ತದೆ. ಪರಿಣಾಮವಾಗಿ ಮಿಲ್‌ಗಳು ಹೆಚ್ಚಿನ ಲಾಭ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲು ನಫೆಡ್ ವಿಫಲಗೊಂಡಿತ್ತು.

 ಹಾಗೆಂದು ನಫೆಡ್‌ಗೆ ಎಚ್ಚರಿಕೆಗಳ ಕೊರತೆಯಿರಲಿಲ್ಲ. ಹಿಂದೆ ಆಂಧ್ರ ಪ್ರದೇಶದಲ್ಲಿ ಅಕ್ಕಿ ಗಿರಣಿಗಳಿಗೆ ಒಟಿಆರ್ ಆಧಾರಿತ ಬಿಡ್ಡಿಂಗ್ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೇಖಪಾಲ (ಸಿಎಜಿ)ರ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಕ್ಕಿ ಮಿಲ್‌ಗಳು ಆಂಧ್ರ ಸರಕಾರದ ಬೊಕ್ಕಸಕ್ಕೆ 1,195 ಕೋ.ರೂ.ಗಳ ನಷ್ಟವನ್ನುಂಟು ಮಾಡಿದ್ದನ್ನು ಸಿಎಜಿ ಕಚೇರಿಯು ಪತ್ತೆ ಹಚ್ಚಿತ್ತು. ಆಂಧ್ರ ಪ್ರದೇಶವು ಕನಿಷ್ಠ ಒಟಿಆರ್‌ನ್ನಾದರೂ ಹೊಂದಿತ್ತು. ಆದರೆ ನಫೆಡ್ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ನಫೆಡ್ ಸುಮಾರು 320 ನೋಂದಾಯಿತ ಮಿಲ್‌ಗಳನ್ನು ಹೊಂದಿದೆ ಎನ್ನುವುದನ್ನು ದಾಖಲೆಗಳು ತೋರಿಸುತ್ತಿವೆ. ದೇಶದಲ್ಲಿ ಅಂದಾಜು 7,000 ಬೇಳೆ ಮಿಲ್‌ಗಳು ಇವೆ ಮತ್ತು ಹೆಚ್ಚಿನವು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಸಣ್ಣ ಮಿಲ್‌ಗಳಾಗಿವೆ. ಕೆಲವೇ ದೊಡ್ಡ ಮಿಲ್‌ಗಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದ ನಫೆಡ್ ಹೆಚ್ಚಿನ ಮಿಲ್‌ಗಳಿಗೆ ಬಾಗಿಲನ್ನು ಮುಚ್ಚಿತ್ತು.

ರಾಜ್ಯಗಳಿಗೆ ಕಚ್ಚಾ ಬೇಳೆಕಾಳುಗಳನ್ನು ಮಾತ್ರ ಪೂರೈಸಬೇಕು ಎಂದು 2022,ಫೆ.11ರಂದು ನಫೆಡ್‌ಗೆ ಆದೇಶಿಸುವುದರೊಂದಿಗೆ ಗ್ರಾಹಕ ವ್ಯವಹಾರಗಳ ಇಲಾಖೆಯು ನಫೆಡ್‌ನ ಹರಾಜು ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿದೆ.

ಕೃಪೆ:(thewire.in)

Writer - ಶ್ರೀಗಿರೀಶ ಜಾಲಿಹಾಳ

contributor

Editor - ಶ್ರೀಗಿರೀಶ ಜಾಲಿಹಾಳ

contributor

Similar News