ಮಂಗಳೂರು: ರೌಡಿಶೀಟರ್ ಕೊಲೆ
ಮಂಗಳೂರು, ಎ.28: ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ಹಳೆದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆಗೈದ ಘಟನೆ ಗುರುವಾರ ಸಂಜೆ ನಡೆದಿದೆ.
ಕೊಲೆಯಾದ ಯುವಕನನ್ನು ಹೊಯ್ಗೆ ಬಜಾರ್ ನಿವಾಸಿ ಕಕ್ಕೆ ಯಾನೆ ರಾಹುಲ್ (26) ಎಂದು ಗುರುತಿಸಲಾಗಿದೆ. ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಮ್ಮೆಕೆರೆಯಲ್ಲಿ ಕೋಳಿ ಅಂಕ ನಡೆಯುತ್ತಿದ್ದು, ನೂರಾರು ಮಂದಿ ಜಮಾಯಿಸಿದ್ದರು. ರಾಹುಲ್ ಅಲ್ಲಿಗೆ ಆಗಮಿಸಿದ ವೇಳೆ ಹೊಂಚಿ ಹಾಕಿದ್ದ ನಾಲ್ಕು ಮಂದಿ ದುಷ್ಕರ್ಮಿಗಳ ತಂಡ ರಾಹುಲ್‌ನನ್ನು ಅಟ್ಟಿಸಿಕೊಂಡು ಬಂದು ಮೈದಾನದ ಬಳಿ ಬರ್ಬರವಾಗಿ ಕಡಿದು ಕೊಲೆಗೈದಿದೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ಹಳೆ ದ್ವೇಷದ ಹಿನ್ನಲೆ: ರಾಹುಲ್‌ನನ್ನು ಮಹೇಂದ್ರ, ಸುಚಿತ್ ಸಹಿತ ನಾಲ್ಕು ಮಂದಿ ಕೊಲೆಗೈದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ವರ್ಷದ ಹಿಂದೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಹೇಂದ್ರನಿಗೆ ರಾಹುಲ್ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ದ್ವೇಷದ ಹಿನ್ನಲೆಯಲ್ಲಿ ಕೊಲೆಗೈದಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕೊಲೆಯಾದ ರಾಹುಲ್ ನಾನಾ ಪ್ರಕರಣದ ಆರೋಪಿಯಾಗಿದ್ದು, ಈತನ ವಿರುದ್ಧ ರೌಡಿಶೀಟರ್ ಇದೆ.
ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹರಿರಾಂ ಶಂಕರ್ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.