ಪಾಕ್ ವಿದೇಶ ಸಚಿವರಾಗಿ ಬೆನಝೀರ್ ಪುತ್ರ ಬಿಲಾವಲ್ ಭುಟ್ಟೊ ನೇಮಕ
ಇಸ್ಲಮಾಬಾದ್, ಎ.28: ಪಾಕಿಸ್ತಾನದ ನೂತನ ವಿದೇಶ ಸಚಿವರನ್ನಾಗಿ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೊ ಅವರ ಪುತ್ರ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೊ-ಝರ್ದಾರಿಯನ್ನು ನೇಮಿಸಿರುವುದಾಗಿ ಪ್ರಧಾನಿ ಶಹಬಾರ್ ಶರೀಫ್ ಘೋಷಿಸಿದ್ದಾರೆ.
ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳೊಂದಿಗೆ ಹಳಸಿರುವ ಸಂಬಂಧವನ್ನು ಮತ್ತೆ ಸುಧಾರಿಸುವ ಮಹತ್ವದ ಜವಾಬ್ದಾರಿ ಈಗ ಬಿಲಾವಲ್ ಹೆಗಲ ಮೇಲಿದೆ. ಆಕ್ಸ್‌ಫರ್ಡ್ ವಿವಿ ಪದವೀಧರನಾಗಿರುವ ಬಿಲಾವಲ್ ಗೆ ಬುಧವಾರ ಅಧ್ಯಕ್ಷ ಆರಿಫ್ ಆಲ್ವಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಬಿಲಾವಲ್ ಅವರ ತಾತ ಝುಲ್ಫಿಕರ್ ಆಲಿ ಭುಟ್ಟೊ 1979ರಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ಬಳಿಕ ದೇಶದ ಆಡಳಿತ ವಹಿಸಿದ್ದ ಸೇನಾಧಿಕಾರಿ ಅವರನ್ನು ಗಲ್ಲಿಗೇರಿಸಿದ್ದರು. ಬಿಲಾವಲ್ ಅವರ ತಾಯಿ, ಝುಲ್ಪೀಕರ್ ಭುಟ್ಟೊ ಪುತ್ರಿ ಬೆನಾಝಿರ್ ಭುಟ್ಟೊ ಅವರೂ ಪ್ರಧಾನಿಯಾಗಿದ್ದರು. 2007ರಲ್ಲಿ ಚುನಾವಣೆ ಪ್ರಚಾರದ ರ್ಯಾಲಿಯಲ್ಲಿ ಬೆನಾಝಿರ್ ರನ್ನು ಹತ್ಯೆ ಮಾಡಲಾಗಿತ್ತು.
33 ವರ್ಷದ ಬಿಲಾವಲ್ ವಿಶ್ವದ ಅತ್ಯಂತ ಕಿರಿಯ ವಿದೇಶಿ ಸಚಿವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ವಿದೇಶ ಸಚಿವರಾಗಿ ನೇಮಕಗೊಂಡಿರುವುದು ತನಗೆ ದೊರಕಿದ ಗೌರವವಾಗಿದ್ದು ಪ್ರಜಾಪ್ರಭುತ್ವದ ಮರುಸ್ಥಾಪನೆ, ಚುನಾವಣಾ ಸುಧಾರಣೆ, ಅರ್ಥವ್ಯವಸ್ಥೆ ಸುಧಾರಣೆಗೆ ಹೋರಾಟ ಮತ್ತು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವನ್ನು ಸೂಕ್ತವಾಗಿ ಪ್ರತಿನಿಧಿಸಲು ಆದ್ಯತೆ ನೀಡುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ತಾಯಿಯ ಹತ್ಯೆ ಸಂದರ್ಭ ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ 19 ವರ್ಷದ ಬಿಲಾವಲ್ ಬಳಿಕ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.