"ಬಾಲಿವುಡ್ ಸ್ಟಾರ್ ಗಳಿಗೆ ಅಭದ್ರತೆ ಕಾಡುತ್ತಿದೆ": ಹಿಂದಿ ರಾಷ್ಟ್ರಭಾಷೆ ಚರ್ಚೆಗೆ ರಾಮ್ ಗೋಪಾಲ್ ವರ್ಮಾ ಎಂಟ್ರಿ

Update: 2022-04-28 18:06 GMT

ಹೊಸದಿಲ್ಲಿ, ಎ 28: ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಎಂಬ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಪಾದನೆ ಕುರಿತ ಚರ್ಚೆಯಲ್ಲಿ ಗುರುವಾರ ಪ್ರವೇಶಿಸಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಂದು ಉತ್ತರದ ತಾರೆಯರಿಗೆ ಅಭದ್ರತೆ ಕಾಡುತ್ತಿದೆ ಎಂಬುದು ತಳ್ಳಿ ಹಾಕಲಾಗದ ಸತ್ಯ ಎಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಬ್ಲಾಕ್ಬಸ್ಟರ್ ಕನ್ನಡ ಚಿತ್ರ ‘‘ಕೆ.ಜಿ.ಎಫ್. ಚಾಪ್ಟರ್ 2’’ ಉತ್ತರ ಭಾರತದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವುದನ್ನು ಉಲ್ಲೇಖಿಸಿದ ವರ್ಮಾ, ತಮ್ಮ ದಕ್ಷಿಣದ ಸಹೋದ್ಯೋಗಿಗಳ ಯಶಸ್ಸಿನಿಂದ ಬಾಲಿವುಡ್ ನಟರಿಗೆ ಅಭದ್ರತೆ ಭಾವನೆ ಹಾಗೂ ಮತ್ಸರ ಉಂಟಾಗಿದೆ ಎಂದು ಹೇಳಿದ್ದಾರೆ.

 ಉತ್ತರದ ತಾರೆಯರಿಗೆ ಅಭದ್ರತೆ ಉಂಟಾಗಿರುವುದು ತಳ್ಳಿ ಹಾಕಲಾಗದ ಸತ್ಯ. ಕನ್ನಡ ಚಿತ್ರ ಕೆ.ಜಿ.ಎಫ್.2ನ ಹಿಂದಿ ಡಬ್ಬಿಂಗ್ ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸಿರುವುದರಿಂದ ಉತ್ತರದ ನಟರಿಗೆ ಮತ್ಸರ ಉಂಟಾಗಿದೆ. ನಾವೆಲ್ಲರೂ ಮುಂಬರುವ ಹಿಂದಿ ಚಿತ್ರಗಳ ಮೊದಲ ದಿನವನ್ನು ನೋಡಲಿದ್ದೇವೆ ಎಂದು ವರ್ಮಾ ಹೇಳಿದರು.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಕನ್ನಡ ನಟ ಸುದೀಪ್ ಸಂಜೀವ್ ಅವರ ಹೇಳಿಕೆಯನ್ನು ವರ್ಮಾ ಅವರು ಬೆಂಬಲಿಸಿದ್ದಾರೆ. ‘‘ನೀವು ಉದ್ದೇಶಿಸಿದ್ದರೂ ಇಲ್ಲದಿದ್ದರೂ ನೀವು ಈ ಹೇಳಿಕೆ ನೀಡಿರುವುದು ನನಗೆ ಸಂತೋಷ ಉಂಟು ಮಾಡಿದೆ. ಯಾಕೆಂದರೆ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಶಾಂತಿ ಇರಲಾರದು, ಅದು ಕೂಡ ಬಾಲಿವುಡ್ (ಉತ್ತರ) ಹಾಗೂ ಸ್ಯಾಂಡಲ್‌ವುಡ್ (ದಕ್ಷಿಣ)ನ ನಡುವೆ ಯುದ್ಧದಂತಹ ಪರಿಸ್ಥಿತಿ ಇರುವ ಸಂದರ್ಭ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News