ರಾಜ್ಯಗಳಿಗೆ ಪ್ರಧಾನಿಯ 'ಸಲಹೆ ಭಾಗ್ಯ'

Update: 2022-04-29 04:03 GMT

ಸಂಕಷ್ಟದ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗದೆ ಪ್ರಧಾನಿ ಮೋದಿಯವರು ರಾಜ್ಯಗಳ ಮೇಲೆ ಗೂಬೆ ಕೂರಿಸುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೊರೋನ ಸಂದರ್ಭದಲ್ಲಿ ರಾಜ್ಯಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸುವಲ್ಲಿ ಹೆಗಲು ಜಾರಿಸಿಕೊಂಡಾಗ, ಸುಪ್ರೀಂಕೋರ್ಟ್‌ನಿಂದ ಕೇಂದ್ರ ಸರಕಾರ ಛೀಮಾರಿ ಹಾಕಿಸಿಕೊಂಡಿತು. ಆ ಬಳಿಕವಷ್ಟೇ ರಾಜ್ಯಗಳಿಗೆ ಹೆಚ್ಚುವರಿ ಸಿಲಿಂಡರ್‌ಗಳನ್ನು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾದರು. ಇದಾದ ಬಳಿಕ, ಕೇಂದ್ರ ಸರಕಾರ ಲಸಿಕೆಗಳನ್ನು ರಾಜ್ಯಗಳಿಗೆ ಮಾರಾಟ ಮಾಡಲು ಯತ್ನಿಸಿತು. ಇದರ ವಿರುದ್ಧ ಎಲ್ಲ ರಾಜ್ಯಗಳು ಒಂದಾಗಿ ಧ್ವನಿಯೆತ್ತಿದ ಬಳಿಕ, ಲಸಿಕೆಗಳನ್ನು ಉಚಿತವಾಗಿ ನೀಡುವುದಕ್ಕೆ ಮುಂದಾಯಿತು. ಅದಾಗಲೇ ಹಲವು ರಾಜ್ಯಗಳು ಲಸಿಕೆಗಳಿಗಾಗಿ ಸಾಕಷ್ಟು ವೆಚ್ಚ ಮಾಡಿ ನಷ್ಟ ಅನುಭವಿಸಿತ್ತು. ಇದೀಗ ದಿನದಿಂದ ದಿನಕ್ಕೆ ಏರುತ್ತಿರುವ ತೈಲ ಬೆಲೆಯನ್ನು ನಿಯಂತ್ರಿಸಲಾಗದೆ, ಕಟ್ಟ ಕಡೆಗೆ ಪ್ರಧಾನಿ ಮೋದಿ ರಾಜ್ಯಗಳ ಹೆಗಲಿಗೆ ಹೊಣೆಗಾರಿಕೆಯನ್ನು ಜಾರಿಸುತ್ತಿದ್ದಾರೆ. ಕೇಂದ್ರ ಸರಕಾರ ಕಳೆದ ವರ್ಷದ ನವೆಂಬರ್‌ನಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟನ್ನು ಕಡಿಮೆ ಮಾಡಿಲ್ಲ. ಆದುದರಿಂದ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಮೋದಿಯವರು ದೇಶದ ಮುಂದೆ ತೋಡಿಕೊಂಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಗೆ ರಾಜ್ಯಗಳು ಕಾರಣವೇ ಹೊರತು, ಕೇಂದ್ರ ಸರಕಾರವಲ್ಲ ಎಂದು ವಾದಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ.

 ರಾಜ್ಯಗಳ ಒಂದೊಂದೇ ಅಧಿಕಾರಗಳನ್ನು, ಆರ್ಥಿಕ ಸ್ವಾಯತ್ತಗಳನ್ನು ಕೈವಶ ಮಾಡಿಕೊಂಡು, ಒಕ್ಕೂಟವ್ಯವಸ್ಥೆಯನ್ನೇ ಇಲ್ಲವಾಗಿಸಲು ಹೊರಟಿರುವ ಕೇಂದ್ರ ಸರಕಾರದ ಸರ್ವಾಧಿಕಾರದ ವಿರುದ್ಧ ಈಗಾಗಲೇ ದಕ್ಷಿಣ ಮತ್ತು ಈಶಾನ್ಯದ ರಾಜ್ಯಗಳು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಜಿಎಸ್‌ಟಿಯ ಬಳಿಕ ಕೇಂದ್ರ ಸರಕಾರ ಸಹಸ್ರಾರು ಕೋಟಿ ರೂಪಾಯಿ ಪರಿಹಾರಧನವನ್ನು ರಾಜ್ಯಗಳಿಗೆ ನೀಡುವಲ್ಲಿ ಬಾಕಿ ಉಳಿಸಿದೆ. ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಪರಿಹಾರವನ್ನು ಪೂರ್ಣವಾಗಿ ರಾಜ್ಯಗಳಿಗೆ ನೀಡುವ ಯಾವ ಭರವಸೆಯನ್ನೂ ನೀಡಿಲ್ಲ. ಬದಲಿಗೆ 'ಗಾಡ್ಸ್ ಆ್ಯಕ್ಟ್' ಎಂದು ಹೇಳಿ ಎಲ್ಲವನ್ನೂ ದೇವರ ತಲೆಗೆ ಕಟ್ಟಿದರು. ಇಷ್ಟೇ ಅಲ್ಲ, ಯೋಜನಾಕಾಮಗಾರಿಗಳಿಗಾಗಿ ಕೇಂದ್ರ ಸರಕಾರ ನೀಡಬೇಕಾದ ಅನುದಾನಗಳನ್ನೂ ಪೂರ್ಣ ಪ್ರಮಾಣದಲ್ಲಿ ಒದಗಿಸಿಲ್ಲ. ಜೊತೆಗೇ ತನಗೆ ಆಪ್ತವಾದ ರಾಜ್ಯಗಳಿಗೆ ಹೆಚ್ಚು ಅನುದಾನಗಳನ್ನು ನೀಡುತ್ತಾ, ಕರ್ನಾಟಕದಂತಹ ರಾಜ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬಂದಿದೆ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಹಿನ್ನಡೆ ಅನುಭವಿಸಿವೆ. ಇವೆಲ್ಲಕ್ಕೂ ನೇರ ಹೊಣೆ ಕೇಂದ್ರ ಸರಕಾರ. ತನ್ನ ಹೊಣೆಗಾರಿಕೆಗಳನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ಮೋದಿಯವರು, ಇದೀಗ ರಾಜ್ಯಗಳಿಗೆ 'ತೈಲದ ಮೇಲಿನ ವ್ಯಾಟ್‌ನ್ನು ತಗ್ಗಿಸಿ' ಎಂದು ಸಲಹೆ ನೀಡುತ್ತಿರುವುದು ವಿಪರ್ಯಾಸವಾಗಿದೆ.

ಇಂದು ರಾಜ್ಯಗಳು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ವ್ಯಾಟ್ ತೆರಿಗೆ ಹಣದಿಂದ. ತೈಲ ಬೆಲೆಯೇರಿಕೆಯ ಸುಂಕದ ದೊಡ್ಡ ಪಾಲನ್ನು ಈಗಾಗಲೇ ಕೇಂದ್ರ ಸರಕಾರ ತನ್ನದಾಗಿಸಿಕೊಂಡಿದೆ. ಜಾಗತಿಕವಾಗಿ ತೈಲ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿದಾಗ ಅದರ ಲಾಭವನ್ನು ಕೊರೋನ ಸಂತ್ರಸ್ತ ಭಾರತಕ್ಕೆ ನೀಡಬೇಕಾಗಿತ್ತು. ಆದರೆ ಕೇಂದ್ರ ಸರಕಾರ ಬೆಲೆ ನಿಗದಿಯಲ್ಲಿ ಏಕಾಏಕಿ ಮಧ್ಯ ಪ್ರವೇಶಿಸಿತು. ಆಮದು ತೈಲದ ಮೇಲೆ ದೊಡ್ಡ ಪ್ರಮಾಣದ ಸುಂಕವನ್ನು ವಿಧಿಸಿ ಬೆಲೆ ಇಳಿಕೆಯನ್ನು ತಡೆಯಿತು. ಇದರಿಂದಾಗಿ ದೇಶದಲ್ಲಿ ತೈಲ ಬೆಲೆ ಇನ್ನಷ್ಟು ದುಬಾರಿಯಾಯಿತು. ಈ ಹಿಂದೆಲ್ಲ ಜಾಗತಿಕವಾಗಿ ತೈಲ ಬೆಲೆ ಹೆಚ್ಚಳವಾದಾಗ 'ಬೆಲೆಯೇರಿಕೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ' ಎಂದು ಹೇಳಿದ್ದ ಕೇಂದ್ರ ಸರಕಾರ, ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯ ಏರಿಕೆ-ಇಳಿಕೆಯ ಆಧಾರದಲ್ಲಿ ಭಾರತದ ತೈಲ ಬೆಲೆ ನಿಗದಿಯಾಗಲಿದೆ ಎಂದಿತ್ತು. ಆದರೆ ಯಾವಾಗ ಕಚ್ಚಾ ತೈಲ ಬೆಲೆ ಇಳಿಕೆಯಾಯಿತೋ ಆಗ, ಕೇಂದ್ರ ಸರಕಾರ ತನ್ನ ಮಾತಿನಿಂದ ಹಿಂದೆ ಸರಿದು, ಜನರಿಗೆ ವಂಚಿಸಿತು. ಈ ಸುಂಕ ಏರಿಕೆಯ ಮೂಲಕ, ದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ಹಣವನ್ನು ಕೇಂದ್ರ ಸರಕಾರ ದೋಚಿಕೊಂಡಿತು ಮತ್ತು ಅದನ್ನು ಸಮರ್ಥಿಸಲು 'ಉಚಿತ ಲಸಿಕೆಯ' ಕಡೆಗೆ ಬೆರಳು ಮಾಡಿತು. ತೈಲ ಬೆಲೆಯೇರಿಕೆಯಿಂದಾಗಿ ಸರಕಾರ 26 ಲ. ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದೆ. ಅದನ್ನು ರಾಜ್ಯಗಳ ಜೊತೆಗೇನು ಹಂಚಿಕೊಂಡಿಲ್ಲ ಮತ್ತು ಇದೀಗ ರಾಜ್ಯಗಳ ಸಕಲ ಬಾಕಿಗಳನ್ನು ಉಳಿಸಿಕೊಂಡು, 'ರಾಜ್ಯಗಳು ವ್ಯಾಟ್ ಕಡಿಮೆಗೊಳಿಸದೆ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ' ಎಂದು ರಾಜ್ಯಗಳ ಮೇಲೆ ಪ್ರಧಾನಿ ಮೋದಿ ಗೂಬೆ ಕೂರಿಸಲು ಮುಂದಾಗಿದ್ದಾರೆ.

ರಾಜ್ಯಗಳ ಜನಸಾಮಾನ್ಯರ ಸಮಸ್ಯೆಗಳಿಗೆ ಕಿವುಡಾಗಿರುವ ಕೇಂದ್ರ ಸರಕಾರ 'ಲಸಿಕೆ ಮಾರಾಟ'ದ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದೆ. ಜನಸಾಮಾನ್ಯರು ಇಂದು ಲಸಿಕೆಗಾಗಿ ಹಾಹಾಕಾರ ಮಾಡುತ್ತಿದ್ದಾರೆ ಎಂಬಂತೆ ಅದು ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ. ಬೂಸ್ಟರ್ ಲಸಿಕೆಯನ್ನು ದೊಡ್ಡ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಮತ್ತು ಅದನ್ನು ಕೊಳ್ಳುವುದಕ್ಕಾಗಿ ಜನರನ್ನು 'ಬ್ಲಾಕ್‌ಮೇಲ್' ಮಾಡಲಾಗುತ್ತಿದೆ. ಈಗಾಗಲೇ ಮಾಧ್ಯಮಗಳಲ್ಲಿ ಕೊರೋನದ ಬಗ್ಗೆ ಭಯಭೀತಿಗಳನ್ನು ತುಂಬುವ ಪ್ರಯತ್ನ ನಡೆಯುತ್ತಿದೆ. ನಾಲ್ಕನೆಯ ಅಲೆಯ ಕುರಿತಂತೆ ಸರಕಾರವೇ ತಮಟೆ ಬಾರಿಸುತ್ತಿದೆ.ಈ ಮೂಲಕ ಬೂಸ್ಟರ್ ಲಸಿಕೆಗೆ ಮಾರುಕಟ್ಟೆಯನ್ನು ಹೆಚ್ಚಿಸುವುದು ಮತ್ತು ಅದನ್ನು ಜನರ ಮೇಲೆ ಬಲವಂತವಾಗಿ ಹೇರುವ ದುರುದ್ದೇಶವನ್ನು ಸರಕಾರ ಹೊಂದಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಜನರು ಬೆಲೆಯೇರಿಕೆಯ ಬಗ್ಗೆ ಆತಂಕದಲ್ಲಿದ್ದಾರೆ. ಅತ್ತ ಇಂಡೋನೇಶ್ಯ ಅಡುಗೆ ಎಣ್ಣೆ ರಫ್ತನ್ನು ನಿಲ್ಲಿಸಿದೆ. ಭಾರತ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯೂ ದುಬಾರಿಯಾಗಲಿದೆ. ಇದು ಹೊಟೇಲ್ ಆಹಾರಗಳು ದುಬಾರಿಯಾಗಲು ಕಾರಣವಾಗಲಿದೆ. ಅಷ್ಟೇ ಅಲ್ಲ, ಏರುತ್ತಿರುವ ತೈಲ ಬೆಲೆ ಇತರ ಸಾಗಾಟ ವೆಚ್ಚವನ್ನು ತೀವ್ರವಾಗಿ ಹೆಚ್ಚಿಸಿದೆ. ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿದೆ. ಸದ್ಯಕ್ಕೆ ಕೇಂದ್ರ ಸರಕಾರ ತೈಲ ಬೆಲೆಯೇರಿಕೆಯ ಮೇಲೆ ಹಾಕಿದ ತೆರಿಗೆಯನ್ನು ಇಳಿಸಲಿ. ಜೊತೆಗೆ ಸುಂಕ ಏರಿಕೆಯಿಂದ ಪಡೆದ ಲಾಭಗಳನ್ನು ಕೇಂದ್ರವು ರಾಜ್ಯಗಳ ಜೊತೆಗೆ ಹಂಚಿಕೊಳ್ಳಲಿ. ಬಾಕಿ ಉಳಿಸಿದ ಜಿಎಸ್‌ಟಿ ಪರಿಹಾರಗಳನ್ನು ರಾಜ್ಯಗಳಿಗೆ ನೀಡಲಿ. ಯೋಜನೆಗಳಿಗಾಗಿ ಮೀಸಲಿಟ್ಟ ಅನುದಾನಗಳನ್ನು, ಪರಿಹಾರ ನಿಧಿಗಳನ್ನು ಕೊಟ್ಟು ಆ ಬಳಿಕ 'ಏನು ಮಾಡಬೇಕು, ಏನು ಮಾಡಬಾರದು' ಎನ್ನುವ ಬಗ್ಗೆ ರಾಜ್ಯಗಳಿಗೆ ಪ್ರಧಾನಿ ಮೋದಿಯವರು ಸಲಹೆ ನೀಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News