ದಲಿತ ಮಹಿಳೆಯರು ಇತರರಿಗಿಂತ 14 ವರ್ಷಗಳಷ್ಟು ಬೇಗ ಮರಣ ಹೊಂದುತ್ತಿದ್ದಾರೆ?

Update: 2022-04-29 06:32 GMT

ಇಂದಿಗೂ ಬಜೆಟ್‌ನಲ್ಲಿ ಆರೋಗ್ಯಕ್ಕೆ ಬಹಳ ಕಡಿಮೆ ಹಣವನ್ನು ನಿಗದಿಪಡಿಸಿರುವುದನ್ನು ಅನೇಕ ತಜ್ಞರು ಟೀಕಿಸುತ್ತಿದ್ದಾರೆ. ಜಿಡಿಪಿಯ ಕನಿಷ್ಠ 2.5ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಬೇಕು. ದೇಶದ ಮುನ್ನಡೆ ಪ್ರಜೆಗಳ ಆರೋಗ್ಯದ ಮೇಲೆ ನಿಂತಿರುವುದರಿಂದ ಪ್ರಜೆಗಳ ಆರೋಗ್ಯ ಅದರಲ್ಲೂ ಶೋಷಿತ ಮಹಿಳೆಯರ ಆರೋಗ್ಯದ ವಿಚಾರವು ಸರಕಾರಗಳ ಪ್ರಥಮಾದ್ಯತೆ ಆಗಬೇಕಾಗುತ್ತದೆ.

ಮಹಿಳೆಯರ ಸಬಲೀಕರಣ, ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳು, ಮಹಿಳಾ ವಿಮೋಚನೆ ಇತ್ಯಾದಿ ರೀತಿಯ ಸವಕಲು ಪದಗಳನ್ನು ನಾವು ಬಹಳಷ್ಟು ಸಲ ಸುದ್ದಿ ಪತ್ರಿಕೆಗಳಲ್ಲಿ ಓದಿರುತ್ತೇವೆ. ಇಂತಹ ಹೆಚ್ಚಿನ ಹೇಳಿಕೆಗಳು ಕೇವಲ ಬಿಳಿಹಾಳೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಇದ್ದು, ರಾಜಕೀಯ ಪಕ್ಷಗಳಿಗೆ ಚುನಾವಣೆಗಳು ಬಂದಾಗ ಮಾತ್ರ ಇವರು ನೆನಪಾಗುತ್ತಾರೆ. ದಲಿತ ಮತ್ತು ಆದಿವಾಸಿ ಮಹಿಳಾ ವಿಮೋಚನೆ ಕಾರ್ಯಕ್ರಮ ಜಾರಿಗೆ ಬಂದರೂ ಪುರುಷಪ್ರಧಾನ ಸಮಾಜದಲ್ಲಿ ಮಹಿಳೆ ಇಂದಿಗೂ ದ್ವಿತೀಯ ದರ್ಜೆಯ ಪ್ರಜೆಯಾಗಿ ಬದುಕುತ್ತಿರುವುದು ಸುಳ್ಳಲ್ಲ. ಹೆಚ್ಚಿನ ಬಾರಿ ಕುಟುಂಬದಲ್ಲೇ ಆಕೆ ಸುರಕ್ಷಿತವಾಗಿ ಇರುವುದಿಲ್ಲ. ಹೆಣ್ಣು ಮಕ್ಕಳು ಹುಟ್ಟಿದರೆ ಚಿಂತಿಸುವ ಜನರು ಇಂದು ಲಕ್ಷಾಂತರ ಮಂದಿ ನಮ್ಮ-ನಿಮ್ಮ ನಡುವೆ ಇದ್ದಾರೆ. ನಮ್ಮಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಯಾವುದೇ ಅವಘಡಗಳು ಸಂಭವಿಸಿದರೆ ಮೊದಲು ಆಕೆಯೇ ಬಲಿಯಾಗುವುದು. ಸಾಮಾಜಿಕ-ಆರ್ಥಿಕ ಸಮಸ್ಯೆಗಳಿರಲಿ, ಕೋಮುಗಲಭೆ, ಆರೋಗ್ಯ, ಯುದ್ಧಗಳು, ಪರಿಸರ ಅವಘಡಗಳು ಇತ್ಯಾದಿಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ, ಮುಖ್ಯವಾಹಿನಿಯಿಂದ ಹೊರಗುಳಿದ, ಮೂಲಸೌಕರ್ಯಗಳಿಂದ ದೂರವಿರುವ ಮಹಿಳೆಯರೇ ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ. ವಿಶ್ವಸಂಸ್ಥೆಯ ‘‘ಯುಎನ್ ವುಮೆನ್‌ಟರ್ನಿಂಗ್ ಪ್ರಾವಿಸಸ್‌ಇನ್ ಟೂ ಆಕ್ಷನ್: ಜೆಂಡರ್‌ಇಕ್ವಾಲಿಟಿ ಇನ್-2030’’ ವರದಿಯಲ್ಲಿ ಬಹಳ ಆತಂಕಕಾರಿ ಅಂಶಗಳು ಹೊರಬಂದಿದ್ದು, ಅದರ ಪ್ರಕಾರ ಭಾರತದಲ್ಲಿ ಶೋಷಣೆಗೊಳಗಾದ ದಲಿತ ಹೆಣ್ಣುಮಕ್ಕಳು ಸರಾಸರಿ 39.5 ವರ್ಷಕ್ಕೆ ಮರಣ ಹೊಂದುತ್ತಿದ್ದಾರೆ ಮತ್ತು ಇತರ ಮಹಿಳೆಯರು 54.1 ವರ್ಷಕ್ಕೆ ಮರಣ ಹೊಂದುತ್ತಿರುವುದನ್ನು ಸೂಕ್ಷ್ಮ್ಮವಾಗಿ ಗಮನಿಸಲಾಗಿದೆ. ಈ ವರದಿಯನ್ನು ಸರಕಾರಗಳು ಅಷ್ಟಾಗಿಗಂಭೀರವಾಗಿ ಪರಿಗಣಿಸಿರುವುದು ಅನುಮಾನ. ಈ ವರದಿ ಪ್ರಕಾರ ಭಾರತದಲ್ಲಿ ಶೋಷಿತದಲಿತ ಹೆಣ್ಣುಮಕ್ಕಳು ಕನಿಷ್ಠ ಮೂಲಸೌಕರ್ಯ, ಗುಣಾತ್ಮಕ ಆರೋಗ್ಯ ಸೇವೆ, ಉದ್ಯೋಗ, ಶಿಕ್ಷಣ ಮುಂತಾದ ವಿಚಾರದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದುಇಂತಹ ಮಹಿಳೆಯರು ಇತರೆ ಮಹಿಳೆಯರಿಗಿಂತ ಬಹಳ ಬೇಗ ಅಕಾಲಿಕವಾಗಿ ಮರಣ ಹೊಂದಿದ್ದಾರೆ ಎಂಬುದನ್ನು ವರದಿ ಕಂಡುಕೊಂಡಿದೆ. ಕಳೆದ 75 ವರ್ಷಗಳಲ್ಲಿ ಬಿಲಿಯನ್‌ಗಟ್ಟಲೆ ಹಣ ಖರ್ಚು ಮಾಡಿದರೂ ತಲುಪಬೇಕಾದವರನ್ನು ಇನ್ನೂ ಕಾರ್ಯಕ್ರಮಗಳು ತಲುಪದಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನಬಹುದು?

  ಭಾರತದಲ್ಲಿ ದಲಿತ ಮಹಿಳೆಯರ ಪರಿಸ್ಥಿತಿ ಹೇಗಿದೆ ಎಂದು ವಿಶ್ಲೇಷಣೆ ಮಾಡುತ್ತಾ ಹೋದಂತೆ ಹತ್ತು ಹಲವಾರು ಬೆಚ್ಚಿ ಬೀಳಿಸುವಂತಹ ಸಂಗತಿಗಳು ಈ ವರದಿಯ ಮೂಲಕ ಹೊರಬಂದಿದೆ. ಸ್ವಾತಂತ್ರ ಬಂದು ಎಪ್ಪತ್ತು ವರ್ಷ ಕಳೆದರೂ ಮಹಿಳೆಯರ ಅಭಿವೃದ್ಧಿಗೆ ಮತ್ತು ಮಹಿಳೆಯರಿಗೆ ಸಾವಿರಾರು ಯೋಜನೆಗಳು ಜಾರಿಗೆ ಬಂದರೂ ಸಹ ಜಾತಿ, ಧರ್ಮದ ವಿಚಾರದಲ್ಲಿದಲಿತ ಮಹಿಳೆಯರ ಮೇಲೆ ತಾರತಮ್ಯ ಮತ್ತು ಶೋಷಣೆಗಳು ಇನ್ನೂ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಈ ವರದಿಯ ಪ್ರಕಾರದೇಶದಲ್ಲಿಅರ್ಧಕ್ಕಿಂತಲೂ ಹೆಚ್ಚಿನ ಮಹಿಳೆಯರು ಮೂಲಸೌಕರ್ಯಗಳ ಕೊರತೆಯಿಂದ ಜೀವಕ್ಕೆ ಕುತ್ತುಉಂಟಾಗುತ್ತಿರುವುದನ್ನು ವರದಿಯು ನೇರವಾಗಿ ದಾಖಲಿಸಿದೆ. ಸರಕಾರಗಳು ಎಷ್ಟೇ ಕಾರ್ಯಕ್ರಮ ಮಾಡಿದರೂ ಮಹಿಳೆಯರಿಗೆ ಸರಿಯಾಗಿತಲುಪದಿರುವುದು ನಿಜಕ್ಕೂ ಸೋಜಿಗವೇ ಸರಿ. ಈ ವರದಿ ಪ್ರಕಾರ ಇಂದಿಗೂ ಲಕ್ಷಾಂತರ ಶೋಷಿತದಲಿತ ಮಹಿಳೆಯರು ಪೋಷಣಯುಕ್ತ ಆಹಾರ ಶುದ್ಧ ನೈರ್ಮಲ್ಯತೆ, ಆರೋಗ್ಯ, ಆಹಾರ ಶಿಕ್ಷಣ, ಸಬಲೀಕರಣ, ಸಾಮಾಜಿಕ ಒಳಗೊಳ್ಳುವಿಕೆ ಮುಂತಾದ ವಿಚಾರಗಳಲ್ಲಿ ಬಹಳಷ್ಟು ಹಿನ್ನಡೆಯನ್ನುಅನುಭವಿಸುತ್ತಿದ್ದಾರೆ ಅಥವಾ ಅವುಗಳನ್ನು ಒಂದು ಹಕ್ಕನ್ನಾಗಿ ಪಡೆಯುವುದರಲ್ಲಿ ಸಂಪೂರ್ಣವಾಗಿ ವಂಚಿತರಾಗುತ್ತಿದ್ದಾರೆ ಎಂದು ಮೇಲಿನ ವರದಿ ದಾಖಲಿಸಿದೆ. ಇಂದಿಗೂ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಗ್ರಾಮೀಣ ಬಡ ಅಥವಾ ದಲಿತ ಮಹಿಳೆಯ ಮೇಲೆ ಎಗ್ಗಿಲ್ಲದೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಮರ್ಯಾದೆ ಹತ್ಯೆಗಳಂತಹ ಅತಿ ಹೆಚ್ಚಿನ ಪ್ರಮಾಣದಲ್ಲಿ ದಲಿತ ಮಹಿಳೆಯ ಮೇಲೆ ನಡೆಯುತ್ತಿರುವುದನ್ನು ಈ ವರದಿ ಸಾಬೀತು ಪಡಿಸಿದೆ. ಅಂದ ಮಾತ್ರಕ್ಕೆ ಮೇಲ್ವರ್ಗದ ಮಹಿಳೆಯರ ಮೇಲೆ ಶೋಷಣೆ ಅಥವಾ ತಾರತಮ್ಯ ಇಲ್ಲ ಎಂದರ್ಥವಲ್ಲ. ಆದರೆ ಎಲ್ಲ ವಿಚಾರಗಳನ್ನು ಹೋಲಿಸಿ ನೋಡಿದರೆ ಕೆಳವರ್ಗದ ಮಹಿಳೆಯರ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ತಾರತಮ್ಯ ನಡೆಯುತ್ತಿರುವುದನ್ನು ಮತ್ತು ಸಮಾಜ ಈ ವಿಚಾರದಲ್ಲಿ ದಿವ್ಯ ಮೌನವಹಿಸಿರುವುದನ್ನು ವರದಿ ಕಟುವಾಗಿ ಟೀಕಿಸಿದೆ. ಬಡತನದಿಂದ ಶಿಕ್ಷಣದ ಕೊರತೆ, ಉತ್ತಮ ಆರೋಗ್ಯ ಪಡೆಯುವುದರಲ್ಲಿ ವಿಫಲತೆ, ಬಾಲ್ಯವಿವಾಹ ಮುಂತಾದ ಸಮಸ್ಯೆಗಳಿಂದ ಇಂದು ದಲಿತ ಮಹಿಳೆ ಅತಿಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕವಾಗಿ ಹೊರಗುಳಿದಿದ್ದಾಳೆ. ಇಂದಿಗೂ ಲಕ್ಷಾಂತರ ದಲಿತ ಗ್ರಾಮೀಣ ಮಹಿಳೆಯರು ಅನೈರ್ಮಲ್ಯ, ಋತುಸ್ರಾವ ಸಮಸ್ಯೆಯನ್ನು ಅನುಭವಿಸುತ್ತಿರುವುದನ್ನು ನಾವು ಗಮನಿಸದಿರುವುದು ನಿಜಕ್ಕೂ ಚಿಂತಿಸಬೇಕಾದ ವಿಚಾರ ಎಂದು ವರದಿ ಕಂಡುಕೊಂಡಿದೆ.

   ಹಾಗೆ ನೋಡಿದರೆ ಕರ್ನಾಟಕದ ಉತ್ತರ ಭಾಗದಲ್ಲಿ ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಹಿಳೆಯರಲ್ಲಿರುವ ಸಮಸ್ಯೆಗಳ ಕುರಿತು ಈ ಹಿಂದೆ ಬಹಳಷ್ಟು ಸಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನವನ್ನು ವಿವಿಧ ರೀತಿಯಲ್ಲಿ, ವಿವಿಧ ಸಂಘಸಂಸ್ಥೆಗಳು ಸೆಳೆದಿವೆ. ಆದರೂ ಫಲಿತಾಂಶ ಇನ್ನೂ ಸಹ ಶೂನ್ಯ. ಪ್ರಸ್ತುತ ಮೇಲಿನ ವರದಿಯಲ್ಲಿ ರಾಜ್ಯದ ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಮಹಿಳೆಯರ ಸ್ಥಿತಿಗತಿಗಳು ನಮೂದಿಸಿರುವುದು ದೇಶವೇ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿದೆ. ಇಂದಿಗೂ ಕರ್ನಾಟಕದ ಕೊಪ್ಪಳದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ತಾಯಿ ಮತ್ತು ಶಿಶುಗಳ ಮರಣ ಸಂಭವಿಸುತ್ತಿವೆ. ಈ ಭಾಗದಲ್ಲಿ ನಡೆಸಿದ ಹಲವಾರು ಸಂಶೋಧನೆಗಳ ಪ್ರಕಾರ ಇಲ್ಲಿನ ಹೆಚ್ಚಿನ ದಲಿತ ಮಹಿಳೆಯರಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಚಿಕ್ಕವಯಸ್ಸಿಗೆ ಮದುವೆಯಾಗುವುದು ಮತ್ತು ಮಕ್ಕಳ ನಡುವೆ ಅಂತರಇಲ್ಲದಿರುವುದು, ಮೂಢನಂಬಿಕೆಯಿಂದ ಕೂಡಿದ ಆರೋಗ್ಯ ವರ್ತನೆಗಳು ಮುಂತಾದ ವಿಚಾರಗಳ ಬಗ್ಗೆ ವರದಿಗಳು ಬೆಳಕು ಚೆಲ್ಲಿವೆ. ಮಹಿಳೆಯರ ಸಾಮಾಜಿಕ ಒಳಗೊಳ್ಳುವಿಕೆಯ ಕಾರ್ಯಕ್ರಮಗಳು ಜಾರಿಗೆ ಬಂದಿದ್ದರೂ ಹತ್ತು ಹಲವಾರು ಕಾರಣಗಳಿಂದ ಈಗ ಯೋಜನೆಗಳು ಮಹಿಳೆಯರನ್ನು ಅದರಲ್ಲೂ ವಿಶೇಷವಾಗಿ ಈ ಭಾಗಗಳ ದಲಿತ ಮಹಿಳೆಯರನ್ನು ಗಮನಾರ್ಹವಾಗಿ ತಲುಪದಿರುವುದನ್ನು ವಿಶ್ವಸಂಸ್ಥೆಯ ಈ ವರದಿಯು ಸೂಕ್ಷ್ಮವಾಗಿ ಗಮನಿಸಿದೆ. ಉತ್ತರಕರ್ನಾಟಕದಲ್ಲಿ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆ ಹೇಗಿದೆ ಎಂದರೆ ಸಣ್ಣಪುಟ್ಟ ಕಾಯಿಲೆಗಳು ಬಂದರೂ ಮಹಿಳೆಯರು ಅರಿವಿನ ಕೊರತೆಯಿಂದ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ. ಇನ್ನು ಕೆಲ ಸಂದರ್ಭಗಳಲ್ಲಿ ಮಹಿಳೆಯ ಆರೋಗ್ಯವನ್ನು ಕುಟುಂಬದ ಪುರುಷರು ಅಥವಾ ಆಕೆಯ ಅತ್ತೆ ನಿಯಂತ್ರಿಸುವ ವಿಚಾರಕುರಿತು ಈ ವರದಿಯು ಮಹತ್ವದ ಅಂಶವನ್ನು ಹೊರ ಹಾಕಿರುವುದನ್ನು ಸಾಮಾಜಿಕ ವಿಜ್ಞಾನಿಗಳು ಗಮನಿಸಬೇಕಾಗುತ್ತದೆ. ಯಾವುದೇ ಕಾರ್ಯಕ್ರಮಗಳು ಜನರಿಗೆ ತಲುಪುವ ವಿಚಾರದಲ್ಲಿ ಅವುಗಳನ್ನು ಭವಿಷ್ಯದ ಚುನಾವಣೆಗಳಲ್ಲಿ ಮತಗಳನ್ನಾಗಿ ಪರಿವರ್ತಿಸಲು ಭಾರತ ದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳು ನಡೆಸುವ ಅನೈತಿಕ ಹುನ್ನಾರಗಳನ್ನು ವರದಿಯು ಬಟಾಬಯಲುಗೊಳಿಸಿದೆ.

      ಮಹಿಳೆಯರ ಅದರಲ್ಲೂ ವಿಶೇಷವಾಗಿ ಹಿಂದುಳಿದ ದಲಿತರ ಮಹಿಳೆಯರ ಆರೋಗ್ಯ ವಿಚಾರದಲ್ಲಿ ಇರುವ ವಿವಿಧ ಸಮಸ್ಯೆಗಳನ್ನು ಈ ವರದಿ ವಿಶ್ಲೇಷಣೆ ಮಾಡಿದೆ. ದೇಶದ ಹಲವಾರು ಸಂಶೋಧನೆಗಳ ಪ್ರಕಾರ ವಿವಿಧ ಕಾರಣಗಳಿಂದ ಮಹಿಳೆಯರು ಅದರಲ್ಲೂ ಶೋಷಿತ ದಲಿತ ಮಹಿಳೆಯರು ಹೆಚ್ಚಾಗಿ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಏರುತ್ತಿರುವ ಆರೋಗ್ಯ ವೆಚ್ಚವು ಸಹ ಈ ವರದಿಯ ಪ್ರಕಾರ ಇತ್ತೀಚೆಗೆ ಭಾರತದಲ್ಲಿ ಹೆಣ್ಣುಮಕ್ಕಳ ಋತುಸ್ರಾವದ ವಯಸ್ಸು ಅತ್ಯಂತ ಕಡಿಮೆಯಾಗುತ್ತಿದೆ. ಇಂತಹ ತಂದೆ-ತಾಯಿಗಳು ಬಡತನದಿಂದ ಬಳಲುತ್ತಿರುವುದರಿಂದ ಆದಷ್ಟು ಬೇಗ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಲುಇಚ್ಛಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಬಡ ಮಹಿಳೆಯರು ಬೇಗ ಮದುವೆಯಾಗಿ ಅತಿಚಿಕ್ಕ ವಯಸ್ಸಿನಲ್ಲೇ ಗರ್ಭಧರಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳನ್ನು ವರಿಸಲು ಪುರುಷರು ಸಹ ಮುಂದೆ ನಿಂತಿರುವುದು ದೇಶದ ಸಾಮಾಜಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಲ್ಲ. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕನಿಷ್ಠ ಪ್ರಮಾಣದ ವೈದ್ಯಕೀಯ ಸೌಲಭ್ಯಗಳ ಕೊರತೆ, ಗರ್ಭಧಾರಣೆಯ ನಂತರ ಉಂಟಾಗುವ ಅನೇಕ ವೈದ್ಯಕೀಯ ಸಮಸ್ಯೆಗಳಿಂದ ಮಹಿಳೆಯರು ಅಕಾಲಿಕ ಮರಣ ಹೊಂದುತ್ತಿದ್ದಾರೆ. ಸರಕಾರವು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಆ ಸೌಲಭ್ಯವನ್ನು ಪಡೆದುಕೊಳ್ಳುವುದರಲ್ಲಿ ದಲಿತ ಮಹಿಳೆಯರು ಬಹಳ ಹಿಂದೆ ಬಿದ್ದಿರುವುದನ್ನು ವರದಿಯು ಗಮನಿಸಿದೆ. ಇಂದಿಗೂ ಉತ್ತರ ಕರ್ನಾಟಕದಲ್ಲಿ ಆದಿವಾಸಿ ಮಹಿಳೆಯರು ಮನೆಯಲ್ಲೇ ಹೆರಿಗೆಗೆ ಒಳಗಾಗುತ್ತಿರುವುದನ್ನು ಈ ವರದಿಯು ಗಮನಿಸಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಮನೆಯಲ್ಲಿ ಅನುಸರಿಸುವ ಅವೈಜ್ಞಾನಿಕ ಪದ್ಧತಿ ಮತ್ತು ಹೆರಿಗೆ ನಂತರದ ಪದ್ಧತಿಗಳು ಸಹ ಬಡ ಮಹಿಳೆಯರ ಮೃತ್ಯುವಿಗೆ ಕಾರಣವಾಗುತ್ತಿದೆ.

         ಇವೆಲ್ಲವನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ನಾವು ಯಾವ ಪ್ರಯತ್ನ ಮಾಡಬಹುದು?. ಇದಕ್ಕಿರುವ ಏಕೈಕ ಮಾರ್ಗವೆಂದರೆ ಇಂತಹ ಸಮುದಾಯದಲ್ಲಿ ಜಾಗೃತಿ ಉಂಟು ಮಾಡುವುದು ಮತ್ತು ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಕುರಿತಾಗಿ ಯೋಚಿಸಬಹುದಾಗಿದೆ. ಮುಖ್ಯವಾಗಿ ಒಳಗೊಳ್ಳುವಿಕೆಯ ಕಾರ್ಯಕ್ರಮಗಳು ಸಮಾಜದ ಅತ್ಯಂತ ತಳವರ್ಗದ ಮಹಿಳೆಯರಿಗೆ ವಿಶೇಷವಾಗಿ ಗ್ರಾಮೀಣ ವರ್ಗದ ದಲಿತ ಮಹಿಳೆಯರಿಗೆ ಸಾಧ್ಯವಾದಷ್ಟು ಬೇಗ ತಲುಪುವ ವಿಚಾರದಲ್ಲಿ ಸರಕಾರವು ವ್ಯವಸ್ಥೆಯನ್ನು ಪುನಃ ರೂಪಿಸಬೇಕಾಗುತ್ತದೆ ಅಥವಾ ಮರು ಸೃಷ್ಟಿಸಬೇಕಾಗುತ್ತದೆ. ಗ್ರಾಮೀಣ ಭಾಗದ ಸ್ವಯಂ ಸೇವಾಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ತಜ್ಞರು ಸರಕಾರಗಳೊಂದಿಗೆ ಕೈಜೋಡಿಸಬೇಕಾಗುತ್ತದೆ. ಗ್ರಾಮ ಪಂಚಾಯತ್‌ಗಳು ರಾಜಕೀಯ ಕೇಂದ್ರಗಳಾಗದೆ ಸಮಾಜಮುಖಿ ಕೇಂದ್ರಗಳಾಗಬೇಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜನರನ್ನು ಗುರುತಿಸಿ ಸರಕಾರದ ಕಾರ್ಯಕ್ರಮಗಳು ಆದಷ್ಟು ಬೇಗ ಅವರಿಗೆ ತಲುಪಲು ಗ್ರಾಮಪಂಚಾಯತ್‌ಗಳು ವಿಶೇಷವಾದ ಕಾರ್ಯಪಡೆಯನ್ನು ಹೊಂದಬೇಕಾಗುತ್ತದೆ. ಇಂತಹ ಎಲ್ಲ ಕಾರ್ಯಕ್ರಮಗಳು ಮಹಾ ಯಜ್ಞದ ರೀತಿಯಲ್ಲಿ ಮತ್ತು ಸಮರೋಪಾದಿಯಲ್ಲಿ ನಡೆಯಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳು ಎಂದಿಗೂ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕಿನ ಪರಿಕಲ್ಪನೆಯನ್ನು ಹೊಂದಿರಬಾರದು. ಸರಕಾರದ ಇಂತಹ ಕಾರ್ಯಕ್ರಮಗಳಿಂದ ರಾಜಕೀಯ ಪಕ್ಷಗಳು ಲಾಭವನ್ನು ಪಡೆದುಕೊಳ್ಳುವ ವಿಚಾರದಲ್ಲಿ ಪೈಪೋಟಿ ನಡೆಸುವುದನ್ನು ಮೊದಲು ನಿಲ್ಲಿಸಬೇಕು. ಇಂದಿಗೂ ಬಜೆಟ್‌ನಲ್ಲಿ ಆರೋಗ್ಯಕ್ಕೆ ಬಹಳ ಕಡಿಮೆ ಹಣವನ್ನು ನಿಗದಿಪಡಿಸಿರುವುದನ್ನು ಅನೇಕ ತಜ್ಞರು ಟೀಕಿಸುತ್ತಿದ್ದಾರೆ. ಜಿಡಿಪಿಯ ಕನಿಷ್ಠ2.5ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಬೇಕು. ದೇಶದ ಮುನ್ನಡೆ ಪ್ರಜೆಗಳ ಆರೋಗ್ಯದ ಮೇಲೆ ನಿಂತಿರುವುದರಿಂದ ಪ್ರಜೆಗಳ ಆರೋಗ್ಯ ಅದರಲ್ಲೂ ಶೋಷಿತ ಮಹಿಳೆಯರ ಆರೋಗ್ಯದ ವಿಚಾರವು ಸರಕಾರಗಳ ಪ್ರಥಮಾದ್ಯತೆ ಆಗಬೇಕಾಗುತ್ತದೆ.

Writer - ಡಾ.ಡಿ.ಸಿ. ನಂಜುಂಡ

contributor

Editor - ಡಾ.ಡಿ.ಸಿ. ನಂಜುಂಡ

contributor

Similar News