ಭಾರತದ ತೆರವು ಕಾರ್ಯಾಚರಣೆ ಮಧ್ಯೆ ಜೆಸಿಬಿ ಫ್ಯಾಕ್ಟರಿಗೆ ಭೇಟಿ ನೀಡಿದ ಬ್ರಿಟನ್‌ ಪ್ರಧಾನಿಯನ್ನು ಪ್ರಶ್ನಿಸಿದ ಸಂಸದೆ

Update: 2022-04-29 14:18 GMT
Photo: Facebook

ಹೊಸದಿಲ್ಲಿ,ಎ.29: ಪ್ರಧಾನಿ ಬೋರಿಸ್ ಜಾನ್ಸನ್ ಅವರ ಇತ್ತೀಚಿನ ಭಾರತ ಭೇಟಿಯು ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಸರಕಾರಗಳು ನಡೆಸುತ್ತಿರುವ ನೆಲಸಮ ಕಾರ್ಯಾಚರಣೆಗಳನ್ನು ಕಾನೂನುಬದ್ಧಗೊಳಿಸಲು ನೆರವಾಗಿದೆಯೇ ಎಂದು ಬ್ರಿಟಿಷ್ ಸಂಸದೆ ನಾಡಿಯಾ ವಿಟಮ್ ಅವರು ಗುರುವಾರ ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ.

ಜಾನ್ಸನ್ ತನ್ನ ಭಾರತ ಭೇಟಿ ಸಂದರ್ಭದಲ್ಲಿ ವಡೋದರಾದಲ್ಲಿಯ ಜೆಸಿಬಿ ಫ್ಯಾಕ್ಟರಿಯಲ್ಲಿ ಜೆಸಿಬಿ ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು ಎಂದು ವಿಟಮ್ ಬೆಟ್ಟು ಮಾಡಿದ್ದಾರೆ. 

ದಿಲ್ಲಿಯ ಜಹಾಂಗೀರ್ಪುರಿಯಲ್ಲಿ ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮಹಾನಗರ ಪಾಲಿಕೆಯು ನೆಲಸಮ ಕಾರ್ಯಾಚರಣೆ ನಡೆಸಿದ್ದ ಮರುದಿನವೇ ಜಾನ್ಸನ್ ಜೆಸಿಬಿಯೊಂದಿಗೆ ಕ್ಯಾಮೆರಾದ ಎದುರು ಕಾಣಿಸಿಕೊಂಡಿದ್ದರು.

ಭಾರತದ ಇತರ ಹಲವಾರು ರಾಜ್ಯಗಳಲ್ಲಿಯೂ ಸ್ಥಳೀಯ ಆಡಳಿತಗಳು ಇಂತಹುದೇ ನೆಲಸಮ ಕಾರ್ಯಾಚರಣೆಗಳನ್ನು ನಡೆಸಿವೆ ಎಂದು ಬ್ರಿಟನ್ ಸಂಸತ್ತಿನಲ್ಲಿ ಹೇಳಿದ ವಿಟಮ್,‘ನಾನು ಮತ್ತೊಮ್ಮೆ ಕೇಳುತ್ತೇನೆ,ಜಾನ್ಸನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರೇ? ಇಲ್ಲವೆಂದಿದ್ದರೆ ಏಕೆ ಪ್ರಸ್ತಾಪಿಸಿರಲಿಲ್ಲ? ಜಾನ್ಸನ್ ಅವರ ಭಾರತ ಭೇಟಿಯು ಮೋದಿಯವರ ತೀವ್ರ ಬಲಪಂಥೀಯ ಸರಕಾರದ ಕ್ರಮಗಳನ್ನು ಕಾನೂನುಬದ್ಧಗೊಳಿಸಲು ನೆರವಾಗಿದೆ ಎನ್ನುವುದನ್ನು ಸಚಿವರು ಒಪ್ಪಿಕೊಳ್ಳುತ್ತಾರೆಯೇ’ ಎಂದು ಪ್ರಶ್ನಿಸಿದರು.

ಕೋಮು ಘರ್ಷಣೆಗಳ ಬಳಿಕ ಬುಲ್ಡೋಜರ್ ಜೊತೆ ಜಾನ್ಸನ್ ಫೋಟೊ ತೆಗೆಸಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅವರ ಈ ನಡವಳಿಕೆ ಅಜ್ಞಾನದಿಂದ ಕೂಡಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಬಣ್ಣಿಸಿದೆ. ಬುಲ್ಡೋಜರ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಜಾನ್ಸನ್ ಅವರು ಭಾರತದ ಇಸ್ಲಾಮೋಫೊಬಿಯಾವನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸಿದ್ದರೇ ಎಂದು ಸ್ವೀಡನ್ನಿನ ಉಪ್ಸಾಲಾ ವಿವಿಯ ಪ್ರೊ.ಅಶೋಕ್ ಸ್ವೈನ್ ಪ್ರಶ್ನಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News