ಬಾಂಗ್ಲಾದೇಶಿ ಎಂದು ಬಂಧಿತನಾಗಿದ್ದ ಅಸ್ಸಾಂ ಯುವಕ 6 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ

Update: 2022-04-29 17:56 GMT
Photo: Twitter/@gauhatibench

ಹೊಸದಿಲ್ಲಿ, ಎ. 29: ದಾಖಲೆ ರಹಿತ ಬಾಂಗ್ಲಾದೇಶಿ ವಲಸಿಗನೆಂದು ಬಂಧನಕ್ಕೊಳಗಾಗಿದ್ದ 22 ವರ್ಷದ ಅಸ್ಸಾಂ ನಿವಾಸಿಯನ್ನು ಸಿಲ್ಚಾರ್ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ. ಗುವಾಹತಿ ಉಚ್ಚ ನ್ಯಾಯಾಲಯದ ಆದೇಶದಂತೆ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಯುವಕ 15 ವರ್ಷದವನಾಗಿದ್ದಾಗ ಗುವಾಹತಿಯಲ್ಲಿರುವ ತನ್ನ ಮನೆಯಿಂದ 2015ರಲ್ಲಿ ಓಡಿ ಹೋಗಿದ್ದ. ವಾಗ್ವಾದದ ಸಂದರ್ಭ ಈತನ ತಂದೆ ‘‘ನಮ್ಮನ್ನು ಬಿಡು, ಬಾಂಗ್ಲಾದೇಶಕ್ಕೆ ಹೋಗು’’ ಎಂದು ಹೇಳಿರುವುದು ಇದಕ್ಕೆ ಕಾರಣವಾಗಿತ್ತು. ಅಲ್ಲದೆ, ಈತ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ.

ಮನೆಯಿಂದ ಓಡಿ ಹೋದ ಬಾಲಕ ಗುವಾಹತಿ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದ. ಆದರೆ, ರೈಲ್ವೆ ಅಧಿಕಾರಿಗಳು ಎಂದಿನಂತೆ ಪರಿಶೀಲನೆ ನಡೆಸುವಾಗ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಆತ ತಾನು ಬಾಂಗ್ಲಾದೇಶಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಅವರು ಬಾಲಕನಿಗೆ ಸೂಚಿಸಿದ್ದರು. 

ದಾಖಲೆಗಳನ್ನು ಸಲ್ಲಿಸಲು ವಿಫಲವಾದುದುರಿಂದ ಹಾಗೂ ತನ್ನ ಕುಟುಂಬದ ಯಾವುದೇ ಮಾಹಿತಿ ನೀಡದೇ ಇರುವುದರಿಂದ ಕರೀಂಗಂಜ್ ನ್ಯಾಯಾಲಯ 2016 ಜನವರಿ 21ರಂದು ಆತನನ್ನು ವಿದೇಶಿ ಎಂದು ಘೋಷಿಸಿತ್ತು. ಅನಂತರ ಅಧಿಕಾರಿಗಳು ಈ ಬಾಲಕನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲು ಪ್ರಯತ್ನಿಸಿದ್ದರು. ಆದರೆ, ಸರಕಾರ ಪೌರತ್ವವನ್ನು ದೃಢಪಡಿಸದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಗಡಿಪಾರನ್ನು ತಡೆ ಹಿಡಿದಿತ್ತು. ತನ್ನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಗಡಿಪಾರು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಚಾರ ಬಾಲಕನ ತಂದೆಗೆ ತಿಳಿಯಿತು. ಅವರು ಬಾಲಕನ ಬಿಡುಗಡೆಗಾಗಿ ಗುವಾಹತಿ ಉಚ್ಚ ನ್ಯಾಯಾಲಯ ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ವಕೀಲರು ಪ್ರತಿ ವಿಚಾರಣೆಗೆ 1 ಲಕ್ಷ ರೂಪಾಯಿ ನೀಡುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಪುತ್ರನ ಬಿಡುಗಡೆಯ ಪ್ರಯತ್ನವನ್ನು ಕೈಬಿಟ್ಟಿದ್ದರು. ಮೇ 5ರಂದು ಗುವಾಹತಿ ಉಚ್ಚ ನ್ಯಾಯಾಲಯ 22 ವರ್ಷದ ಯುವಕನ ಪೌರತ್ವದ ಬಗ್ಗೆ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News