ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಯರೋಪ್ ಗೆ ಭೇಟಿ ನೀಡುತ್ತಿದ್ದೇನೆ: ತ್ರಿರಾಷ್ಟ್ರ ಪ್ರವಾಸ ಕುರಿತು ಪ್ರಧಾನಿ

Update: 2022-05-01 15:58 GMT

ಹೊಸದಿಲ್ಲಿ, ಮೇ 1: ಪ್ರದೇಶವು ಹಲವಾರು ಸವಾಲುಗಳು ಮತ್ತು ಆಯ್ಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ತಾನು ಯುರೋಪ್ಗೆ ಭೇಟಿ ನೀಡುತ್ತಿದ್ದೇನೆ ಮತ್ತು ಶಾಂತಿ ಹಾಗೂ ಸಮೃದ್ಧಿಯ ಅನ್ವೇಷಣೆಯಲ್ಲಿ ಭಾರತದ ಸಂಗಾತಿಗಳಾಗಿರುವ ಐರೋಪ್ಯ ಪಾಲುದಾರರೊಂದಿಗೆ ಸಹಕಾರದ ಮನೋಭಾವವನ್ನು ಬಲಗೊಳಿಸಲು ತಾನು ಉದ್ದೇಶಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಜರ್ಮನಿ,ಡೆನ್ಮಾರ್ಕ್ ಮತ್ತು ಫ್ರಾನ್ಸ್ ಪ್ರವಾಸಕ್ಕೆ ಮುನ್ನ ರವಿವಾರ ಇಲ್ಲಿ ಹೇಳಿದರು.

ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಝ್ ಅವರ ಆಹ್ವಾನದ ಮೇರೆಗೆ ಮೇ 2ರಂದು ಬರ್ಲಿನ್ಗೆ ಭೇಟಿ ನೀಡಲಿದ್ದೇನೆ. ಬಳಿಕ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸನ್ ಅವರ ಆಹ್ವಾನದ ಮೇರೆಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲು ಮೇ 3-4ರಂದು ಕೋಪನ್ಹೇಗನ್ಗೆ ತೆರಳಲಿದ್ದೇನೆ ಮತ್ತು ದ್ವಿತೀಯ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿಯೂ ಪಾಲ್ಗೊಳ್ಳಲಿದ್ದೇನೆ ಎಂದು ಮೋದಿ ಹೇಳಿಕೆಯಲ್ಲಿ ತಿಳಿಸಿದರು. ಭಾರತಕ್ಕೆ ಮರಳುವ ದಾರಿಯಲ್ಲಿ ಮೋದಿಯವರು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಮಾತುಕತೆಗಾಗಿ ಫ್ರಾನ್ಸ್ಗೆ ಸಂಕ್ಷಿಪ್ತ ಭೇಟಿಯನ್ನು ನೀಡಲಿದ್ದಾರೆ.

ಹೆಚ್ಚಿನ ಐರೋಪ್ಯ ದೇಶಗಳನ್ನು ರಶ್ಯದ ವಿರುದ್ಧ ಒಗ್ಗೂಡಿಸಿರುವ ಉಕ್ರೇನ್ ಬಿಕ್ಕಟ್ಟಿನ ನಡುವೆಯೇ ಮೋದಿ ಯುರೋಪ್ಗೆ ಭೇಟಿ ನೀಡುತ್ತಿದ್ದಾರೆ.

‘ಬರ್ಲಿನ್ಗೆ ನನ್ನ ಭೇಟಿಯು ಚಾನ್ಸಲರ್ ಸ್ಕೋಲ್ಝ್ ಅವರೊಂದಿಗೆ ವಿವರವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲು ಒಂದು ಅವಕಾಶವಾಗಿದೆ. ಕಳೆದ ವರ್ಷ ಅವರು ಉಪ-ಚಾನ್ಸಲರ್ ಮತ್ತು ವಿತ್ತ ಸಚಿವರಾಗಿದ್ದಾಗ ಅವರನ್ನು ನಾನು ಜಿ20 ಶೃಂಗಸಭೆಯಲ್ಲಿ ಭೇಟಿಯಾಗಿದ್ದೆ. ಭಾರತವು ಜರ್ಮನಿಯೊಂದಿಗೆ ಮಾತ್ರ ನಡೆಸುತ್ತಿರುವ ವಿಶಿಷ್ಟ ದ್ವೈವಾರ್ಷಿಕ ಕಾರ್ಯಕ್ರಮವಾಗಿರುವ ಆರನೇ ಭಾರತ-ಜರ್ಮನಿ ಅಂತರ್ ಸರಕಾರಿ ಸಮಾಲೋಚನೆ (ಐಜಿಸಿ)ಗಳ ಸಹ ಅಧ್ಯಕ್ಷತೆಯನ್ನು ನಾವು ವಹಿಸಲಿದ್ದೇವೆ. ತಮ್ಮ ಜರ್ಮನ್ ಸಹವರ್ತಿಗಳೊಂದಿಗೆ ಮಾತುಕತೆಗಳನ್ನು ನಡೆಸಲು ಹಲವಾರು ಭಾರತೀಯ ಸಚಿವರೂ ಜರ್ಮನಿಗೆ ಪ್ರಯಾಣಿಸುತ್ತಿದ್ದಾರೆ ’ ಎಂದು ತಿಳಿಸಿದ ಮೋದಿ,ಜರ್ಮನಿಯಲ್ಲಿ ನೂತನ ಸರಕಾರವು ರಚನೆಯಾದ ಆರು ತಿಂಗಳಲ್ಲಿ ನಡೆಯಲಿರುವ ಐಸಿಜಿ ಮಧ್ಯಮ ಮತ್ತು ದೀರ್ಘಾವಧಿಗೆ ಆದ್ಯತೆಗಳನ್ನು ಗುರುತಿಸಲು ನೆರವಾಗಲಿದೆ ಎಂದು ಹೇಳಿದರು.

2021ರಲ್ಲಿ ಭಾರತ ಮತ್ತು ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳನ್ನು ಪೂರ್ಣಗೊಳಿಸಿವೆ ಮತ್ತು 2000ರಿಂದ ವ್ಯೆಹಾತ್ಮಕ ಪಾಲುದಾರರಾಗಿವೆ ಎಂದು ಹೇಳಿದ ಮೋದಿ,‘ನಮಗೆ ಸಂಬಂಧಿಸಿದ ವ್ಯೂಹಾತ್ಮಕ,ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಸ್ಕೋಲ್ಝ್ ಅವರೊಂದಿಗೆ ವಿಚಾರ ವಿನಿಮಯವನ್ನು ನಾನು ಎದುರು ನೋಡುತ್ತಿದ್ದೇನೆ ’ಎಂದರು.

‘ಭಾರತ ಮತ್ತು ಜರ್ಮನಿ ನಡುವಿನ ದೀರ್ಘಕಾಲಿಕ ಸಂಬಂಧವು ನಮ್ಮ ವ್ಯೆಹಾತ್ಮಕ ಪಾಲುದಾರಿಕೆಯ ಆಧಾರಸ್ತಂಭಗಳಲ್ಲೊಂದಾಗಿದೆ ’ ಎಂದು ಹೇಳಿದ ಮೋದಿ,‘ಉಭಯ ದೇಶಗಳಲ್ಲಿ ಕೋವಿಡೋತ್ತರ ಆರ್ಥಿಕ ಚೇತರಿಕೆಯನ್ನು ಬಲಗೊಳಿಸಲು ನೆರವಾಗಬಲ್ಲ ನಮ್ಮ ನಡುವಿನ ಕೈಗಾರಿಕಾ ಸಹಕಾರವನ್ನು ವರ್ಧಿಸುವ ಗುರಿಯೊಂದಿಗೆ ನಾನು ಮತ್ತು ಸ್ಕೋಲ್ಝ್ ಜಂಟಿಯಾಗಿ ಉದ್ಯಮ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದೇವೆ ’ ಎಂದು ತಿಳಿಸಿದರು.

‘ಯುರೋಪ್ ಖಂಡವು ಹತ್ತು ಲಕ್ಷಕ್ಕೂ ಅಧಿಕ ಭಾರತ ಮೂಲದ ಜನರ ನೆಲೆಯಾಗಿದ್ದು,ಇದರಲ್ಲಿ ಗಣನೀಯ ಪಾಲನ್ನು ಜರ್ಮನಿಯು ಹೊಂದಿದೆ. ಯುರೋಪ್ ಜೊತೆ ನಮ್ಮ ಸಂಬಂಧಗಳಲ್ಲಿ ಭಾರತೀಯ ಸಮುದಾಯವು ಪ್ರಮುಖ ಪಾತ್ರವನ್ನು ಹೊಂದಿದೆ,ಹೀಗಾಗಿ ಅಲ್ಲಿಯ ನಮ್ಮ ಸೋದರರು ಮತ್ತು ಸೋದರಿಯರನ್ನು ಭೇಟಿಯಾಗಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ’ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News