ಹಿಪೊಕ್ರಾಟಿಕ್ ಪ್ರಮಾಣದ ಬದಲು ಚರಕ ಶಪಥ ಸ್ವೀಕರಿಸಿದ ವಿದ್ಯಾರ್ಥಿಗಳು:‌ ಮದುರೈ ಮೆಡಿಕಲ್ ಕಾಲೇಜು ಡೀನ್ ವಜಾ

Update: 2022-05-01 17:01 GMT

ಚೆನ್ನೈ, ಮೇ 1: ಮದುರೈ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು ಹಿಪ್ಪೊಕ್ರಾಟಿಕ್ ಪ್ರಮಾಣ ವಚನದ ಬದಲು ‘ಮಹರ್ಷಿ ಚರಕ ಶಪಥ ’ವನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಡೀನ್ ಎ.ರತ್ನವೇಲ್ ಅವರನ್ನು ತಮಿಳುನಾಡು ಆರೋಗ್ಯ ಇಲಾಖೆಯು ರವಿವಾರ ಹುದ್ದೆಯಿಂದ ವಜಾಗೊಳಿಸಿದ್ದು,ಅವರನ್ನು ಕಾಯುವಿಕೆ ಪಟ್ಟಿಯಲ್ಲಿರಿಸಲಾಗಿದೆ.

ರತ್ನವೇಲ್ ಅವರ ಕ್ರಮವು ಖಂಡನೀಯವಾಗಿದೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯಲಿದೆ ಎಂದು ರಾಜ್ಯದ ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ತಿಳಿಸಿದರು. ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೊಕ್ರೇಟಿಸ್ ಹೆಸರಿನಲ್ಲಿರುವ ಹಿಪ್ಪೊಕ್ರಾಟಿಕ್ ಪ್ರಮಾಣವು ನೈತಿಕ ಸಂಹಿತೆಯಾಗಿದ್ದು,ತಾವು ವೃತ್ತಿಯನ್ನು ಕೈಗೊಂಡಾಗ ಅದನ್ನು ಎತ್ತಿ ಹಿಡಿಯುವುದಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರಮಾಣ ಮಾಡುತ್ತಾರೆ.

ಚರಕ ಶಪಥ ಅಥವಾ ಚರಕ ಪ್ರಮಾಣವು ಆಯುರ್ವೇದ ಕುರಿತು ಸಂಸ್ಕೃತ ಗ್ರಂಥ ಚರಕ ಸಂಹಿತೆಯಿಂದ ತೆಗೆದುಕೊಳ್ಳಲಾಗಿರುವ ಭಾಗವಾಗಿದೆ. ಅದು ವೈದ್ಯಕೀಯ ವಿದ್ಯಾರ್ಥಿಗಳು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದನ್ನು ಹೇಳುತ್ತದೆ.

ಎಂಬಿಬಿಸ್ ಕೋರ್ಸ್ಗಳಿಗೆ ಹಿಪ್ಪೊಕ್ರಾಟಿಕ್ ಪ್ರಮಾಣದ ಬದಲು ಚರಕ ಶಪಥವನ್ನು ಅನುಷ್ಠಾನಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗವು ಎ.2ರಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು,ಚರಕ ಶಪಥವು ಐಚ್ಛಿಕವಾಗಿರುತ್ತದೆ ಮತ್ತು ಅದನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುವುದಿಲ್ಲ ಎಂದು ಸಂಸತ್ತಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News