ಹಲವಾರು ಸವಾಲುಗಳು ನಮ್ಮ ಮುಂದಿವೆ: ನೂತನ ಸೇನಾ ಮುಖ್ಯಸ್ಥ ಜ.ಪಾಂಡೆ

Update: 2022-05-01 17:02 GMT

ಹೊಸದಿಲ್ಲಿ, ಮೇ 1: ಸಂಘರ್ಷದ ಸಮಗ್ರ ವ್ಯಾಪ್ತಿಯಾದ್ಯಂತ ಪ್ರಚಲಿತ, ಸಮಕಾಲೀನ ಮತ್ತು ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ಅತ್ಯುನ್ನತ ಯುದ್ಧ ಸನ್ನದ್ಧತೆಯನ್ನು ಖಚಿತಪಡಿಸುವುದು ತನ್ನ ಅಗ್ರ ಆದ್ಯತೆಯಾಗಿರಲಿದೆ ಎಂದು ಭೂಸೇನೆಯ ನೂತನ ಮುಖ್ಯಸ್ಥ ಜ.ಮನೋಜ್ ಪಾಂಡೆ ಅವರು ರವಿವಾರ ಇಲ್ಲಿ ತಿಳಿಸಿದರು.

‘ಜಾಗತಿಕ ಭೂರಾಜಕೀಯ ಸ್ಥಿತಿಯು ತ್ವರಿತವಾಗಿ ಬದಲಾಗುತ್ತಿದೆ ಮತ್ತು ಇದರ ಪರಿಣಾಮವಾಗಿ ನಮ್ಮ ಮುಂದೆ ಹಲವಾರು ಸವಾಲುಗಳಿವೆ ’ ಎಂದು ಹೇಳಿದ ಅವರು, ‘ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳ ಸಮನ್ವಯ ಹಾಗೂ ಸಹಕಾರದೊಂದಿಗೆ ಯಾವುದೇ ಸ್ಥಿತಿಯನ್ನು ನಾವು ಒಗ್ಗಟ್ಟಿನಿಂದ ಎದುರಿಸುತ್ತೇವೆ’ ಎಂದರು.

ಸೇನೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಿಸಲು ಕೈಗೊಳ್ಳಲಾಗಿರುವ ಸುಧಾರಣೆಗಳು,ಪುನರ್ರಚನೆ ಮತ್ತು ಪರಿವರ್ತನೆಯ ಮೇಲೆ ತಾನು ಗಮನವನ್ನು ಕೇಂದ್ರೀಕರಿಸುವುದಾಗಿ ತಿಳಿಸಿದ ಜ.ಪಾಂಡೆ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲೂ ಮಹತ್ವವನ್ನು ನೀಡುವುದಾಗಿ ಹೇಳಿದರು.

ಜ.ಪಾಂಡೆ ರವಿವಾರ ಸೌಥ್ ಬ್ಲಾಕ್ ಹುಲ್ಲುಗಾವಲಿನಲ್ಲಿ ಸಾಂಪ್ರದಾಯಿಕ ಗೌರವ ರಕ್ಷೆಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News