ತೀವ್ರ ವಾಯು ಪ್ರಕ್ಷುಬ್ಧತೆಯಿಂದ ಕುಲುಕಾಡಿದ ಸ್ಪೈಸ್‌ಜೆಟ್ ವಿಮಾನ: ಪ್ರಯಾಣಿಕರಿಗೆ ಗಾಯ

Update: 2022-05-02 15:25 GMT

ಹೊಸದಿಲ್ಲಿ,ಮೇ 2: ರವಿವಾರ ಮುಂಬೈನಿಂದ ಪ್ರಯಾಣ ಆರಂಭಿಸಿದ್ದ ಸ್ಪೈಸ್‌ಜೆಟ್ ವಿಮಾನವು ಪಶ್ಚಿಮ ಬಂಗಾಳದ ದುರ್ಗಾಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ವಾಯು ಪ್ರಕ್ಷುಬ್ಧತೆಗೆ ಸಿಲುಕಿದ ಪರಿಣಾಮ 12 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಗಳು ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು,ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ವಿಮಾನವು ತೀವ್ರವಾಗಿ ಕುಲುಕಾಡಿದ ಪರಿಣಾಮ ಪ್ರಯಾಣಿಕರ ಸೊತ್ತುಗಳು ಕೆಳಕ್ಕೆ ದಿಕ್ಕಾಪಾಲಾಗಿ ಬಿದ್ದಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಮೇಲ್ಭಾಗದಲ್ಲಿದ್ದ ಲಗೇಜ್‌ಗಳೂ  ಪ್ರಯಾಣಿಕರ ಮೇಲೆ ಬಿದ್ದಿದ್ದವು.
ಕೆಲವರಿಗೆ ತಲೆಗೆ ಗಾಯಗಳಾಗಿದ್ದು,ಹೊಲಿಗೆಗಳನ್ನು ಹಾಕಲಾಗಿದೆ. ಓರ್ವ ಪ್ರಯಾಣಿಕರು ಬೆನ್ನುಮೂಳೆಗೆ ಪೆಟ್ಟು ಬಿದ್ದಿರುವುದಾಗಿ ದೂರಿದ್ದಾರೆ ಎಂದು ಡಿಜಿಸಿಐ ತಿಳಿಸಿದೆ.
ದುರ್ಗಾಪುರ ನಿಲ್ದಾಣದಲ್ಲಿ ವಿಮಾನವು ಇಳಿದ ತಕ್ಷಣ ಪ್ರಯಾಣಿಕರಿಗೆ ವೈದ್ಯಕೀಯ ನೆರವು ಒದಗಿಸಲಾಗಿತ್ತು ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದರು.
ವಿಮಾನವು ಕೆಳಕ್ಕಿಳಿಯುವಾಗ ಮೂರು ಜರ್ಕ್‌ ಗಳು ಸಂಭವಿಸಿದ್ದವು ಮತ್ತು ಅವು ಕಾರಿನಲ್ಲಿ ಉಂಟಾಗುವ ಜರ್ಕ್‌ಗಳು ತೀವ್ರವಾಗಿದ್ದವು ಎಂದು ಪ್ರಯಾಣಿಕರೋರ್ವರು ತಿಳಿಸಿದರು.
ಘಟನೆಯ ಕುರಿತು ಸ್ಪೈಸ್ ಜೆಟ್ ವಿಷಾದವನ್ನು ವ್ಯಕ್ತಪಡಿಸಿದೆ.

ವಾಯು ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಬೆಲ್ಟ್‌ಗಳನ್ನು ಧರಿಸುವಂತೆ ಮತ್ತು ಆಸನಗಳಲ್ಲಿಯೇ ಕುಳಿತಿರುವಂತೆ ಪ್ರಯಾಣಿಕರನ್ನು ಪದೇ ಪದೇ ಕೋರಲಾಗಿತ್ತು ಎಂದು ಅದು ಸೋಮವಾರ ತಿಳಿಸಿದೆ. ದುರ್ಗಾಪುರದಲ್ಲಿ ವಿಮಾನವು ಇಳಿಯುತ್ತಿದ್ದಾಗ ಉಂಟಾಗಿದ್ದ ವಾಯು ಪ್ರಕ್ಷುಬ್ಧತೆ ಮತ್ತು ಪ್ರಯಾಣಿಕರು ಗಾಯಗೊಂಡಿದ್ದು ದುರದೃಷ್ಟಕರವಾಗಿದೆ. ಘಟನೆಯ ಕುರಿತು ತನಿಖೆಗಾಗಿ ಡಿಜಿಸಿಎ ತಂಡವೊಂದನ್ನು ನಿಯೋಜಿಸಿದೆ ಎಂದು ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News