ಎಪ್ರಿಲ್ ನಲ್ಲಿ ಶೇ. 7.83 ಕ್ಕೇರಿದ ಭಾರತದ ನಿರುದ್ಯೋಗ ದರ: ಸೆಂಟರ್ ಫಾರ್ ಇಂಡಿಯನ್ ಇಕಾನಮಿ ವರದಿ

Update: 2022-05-02 14:44 GMT

ಹೊಸದಿಲ್ಲಿ,ಮೇ 2: ಮಾರ್ಚ್ ನಲ್ಲಿ ಶೇ.7.60 ರಷ್ಟಿದ್ದ ಭಾರತದ ನಿರುದ್ಯೋಗ ದರವು ಎಪ್ರಿಲ್ ನಲ್ಲಿ ಶೇ.7.83ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಇಂಡಿಯನ್ ಇಕಾನಮಿ (ಸಿಎಂಐಇ) ತನ್ನ ವರದಿಯಲ್ಲಿ ತಿಳಿಸಿದೆ. ಮಾರ್ಚ್ ನಲ್ಲಿ ಶೇ.8.28ರಷ್ಟಿದ್ದ ನಗರ ನಿರುದ್ಯೋಗ ದರವು ಎಪ್ರಿಲ್ ನಲ್ಲಿ ಶೇ.9.22ಕ್ಕೇರಿದ್ದರೆ, ಶೇ.7.29ರಷ್ಟಿದ್ದ ಗ್ರಾಮೀಣ ನಿರುದ್ಯೋಗ ದರವು ಶೇ.7.18ಕ್ಕೆ ಇಳಿಕೆಯಾಗಿದೆ.

 ಶೇ.34.5ರಷ್ಟು ಅತ್ಯಂತ ಹೆಚ್ಚಿನ ನಿರುದ್ಯೋಗ ದರವು ಹರ್ಯಾಣದಲ್ಲಿ ದಾಖಲಾಗಿದ್ದರೆ ರಾಜಸ್ಥಾನ (ಶೇ.28.8) ನಂತರದ ಸ್ಥಾನದಲ್ಲಿದೆ. ಬೆಲೆ ಏರಿಕೆಯ ನಡುವೆ ದೇಶಿಯ ಬೇಡಿಕೆಯಲ್ಲಿ ಕುಸಿತ ಮತ್ತು ಆರ್ಥಿಕ ಚೇತರಿಕೆಯ ಮಂದಗತಿ ಉದ್ಯೋಗಾವಕಾಶಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿವೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರವು ಕಳೆದ 17 ತಿಂಗಳುಗಳಲ್ಲಿ ಅಧಿಕ ಮಟ್ಟವಾದ ಶೇ.6.95 ಕ್ಕೆ ಏರಿಕೆಯಾಗಿದ್ದು,ಈ ವರ್ಷದ ಉತ್ತರಾರ್ಧದಲ್ಲಿ ಸುಮಾರು ಶೇ.7.5 ರಷ್ಟು ಉತ್ತುಂಗಕ್ಕೆ ಏರುವ ಸಾಧ್ಯತೆಯಿದೆ ಎಂದು ಸಿಂಗಾಪುರದ ಕ್ಯಾಪಿಟಲ್ ಇಕನಾಮಿಕ್ಸ್ ನ ಅರ್ಥಶಾಸ್ತ್ರಜ್ಞ ಶಿಲಾನ್ ಶಾ ಅವರು ಅಂದಾಜಿಸಿದ್ದಾರೆ. ಆರ್ಬಿಐ ಜೂನ್ ನಲ್ಲಿ ರೆಪೊ ದರವನ್ನು ಹೆಚ್ಚಿಸಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.

ಸರಕಾರವು ತನ್ನದೇ ಆದ ಮಾಸಿಕ ಅಂಕಿಅಂಶಗಳನ್ನು ಬಿಡುಗಡೆಗೊಳಿಸುವುದಿಲ್ಲ,ಹೀಗಾಗಿ ಅರ್ಥಶಾಸ್ತ್ರಜ್ಞರು ಮತ್ತು ನೀತಿರೂಪಕರು ಸಿಎಂಐಇ ದತ್ತಾಂಶಗಳನ್ನು ನಿಕಟವಾಗಿ ಗಮನಿಸುತ್ತಿರುತ್ತಾರೆ.

ಅವರು ಕುಸಿಯುತ್ತಿರುವ ಕಾರ್ಮಿಕ ಪಾಲ್ಗೊಳ್ಳುವಿಕೆ ದರ, ಅಂದರೆ ದುಡಿಯುವ ಜನಸಂಖ್ಯೆಯಲ್ಲಿ ಉದ್ಯೋಗದಲ್ಲಿರುವವರು ಮತ್ತು ಉದ್ಯೋಗಗಳನ್ನು ಹುಡುಕುತ್ತಿರುವವರ ನಡುವಿನ ಅನುಪಾತದ ಮೇಲೂ ನಿಗಾ ಇರಿಸಿದ್ದಾರೆ. ಸಾಂಕ್ರಾಮಿಕದ ಸಂದರ್ಭ ಮಿಲಿಯಗಟ್ಟಲೆ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದರಿಂದ 2019, ಮಾರ್ಚ್ ನಲ್ಲಿ ಶೇ.43.7ರಷ್ಟಿದ್ದ ಈ ದರವು 2022, ಮಾರ್ಚ್ ನಲ್ಲಿ ಶೇ.39.5 ಕ್ಕೆ ಕುಸಿದಿದೆ.ʼ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News