ಟ್ವಿಟರ್‌ ಖಾತೆಯಿಂದ ʼಕಾಂಗ್ರೆಸ್‌ ಹೆಸರನ್ನು ಅಳಿಸಿ ಹಾಕಿದ ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್

Update: 2022-05-02 16:26 GMT
‌Photo: SS/HardikPatel/twitter

ಅಹಮದಾಬಾದ್:‌ ಗುಜರಾತ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ತಮ್ಮ ಟ್ವಿಟರ್ ಖಾತೆಯ ಮಾಹಿತಿ ವಿಭಾಗದಿಂದ ತಮ್ಮ ಪಕ್ಷದ ಹೆಸರನ್ನು ಕೈಬಿಟ್ಟಿದ್ದಾರೆ. ಆ ಮೂಲಕ ಪಕ್ಷ ತೊರೆಯುವ ಆರಂಭಿಕ ಸೂಚನೆಗಳನ್ನು ಪರೋಕ್ಷವಾಗಿ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಇತ್ತೀಚೆಗೆ, ಕಾಂಗ್ರೆಸ್‌ ಪಕ್ಷ ತನ್ನನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದ ಹಾರ್ದಿಕ್‌ ಪಟೇಲ್‌ ಅವರ ಈ ನಡೆಯು ಅವರು ಕಾಂಗ್ರೆಸ್‌ ಅನ್ನು ನಿರ್ಗಮಿಸುವುದನ್ನು ಬಹುತೇಕ ಖಚಿತಪಡಿಸಿದೆ ಎಂಬ ಚರ್ಚೆಗೆ ಕಾರಣವಾಗಿದೆ.

ಮಾಹಿತಿ ವಿಭಾಗದಲ್ಲಿ ಈ ಹಿಂದೆ ಬರೆದಿದ್ದ "ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ" ಎಂಬ ಅಂಶವನ್ನು ಅಳಿಸಿ ಹಾಕಿರುವ ಹಾರ್ದಿಕ್‌, ಈ ಬಗ್ಗೆ ಅಧಿಕೃತ ಸ್ಪಷ್ಟಣೆಯನ್ನು ಇದುವರೆಗೆ ನೀಡಿಲ್ಲ.

  

ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಚಳುವಳಿಯಲ್ಲಿ ಮುಂಚೂಣಿಯಲ್ಲ ಬಂದಿದ್ದ ಹಾರ್ದಿಕ್‌ ಪಟೇಲ್‌ ಬಳಿಕ ಕಾಂಗ್ರೆಸ್‌ ಸೇರಿಕೊಂಡಿದ್ದರು. ಆದರೆ, ಇತ್ತೀಚೆಗೆ ಗುಜರಾತ್‌ ಕಾಂಗ್ರೆಸ್ ಮತ್ತು ಅದರ ಉನ್ನತ ನಾಯಕರು ತನ್ನನ್ನು "ನಿರ್ಲಕ್ಷಿಸಿದ್ದಾರೆ" ಎಂದು ದೂರಿದ್ದರು.  ಆದಾಗ್ಯೂ, ಅವರು ಪಕ್ಷದಿಂದ ಹೊರಬರುವ ಸಿದ್ದತೆಯಲ್ಲಿದ್ದಾರೆ ಎಂಬುದನ್ನು ಇಲ್ಲಿಯವರೆಗೆ ನಿರಾಕರಿಸುತ್ತಾ ಬಂದಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಅವರು, ಬಿಜೆಪಿಯ ಬಗ್ಗೆ ಉತ್ತಮ ಮಾತುಗಳನ್ನಾಡಿ ಹೊಸ ಚರ್ಚೆಯನ್ನು ಸೃಷ್ಟಿಸಿದ್ದರು. ಅದಾಗ್ಯೂ, ಬಿಜೆಪಿಗೆ ಯಾವುದೇ ಕಾರಣಕ್ಕೂ ನಾನು ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಇದೀಗ ಲಭ್ಯವಿರುವ ಮಾಹಿತಿ ಪ್ರಕಾರ, ಪಟೇಲ್‌ ಎಎಪಿ ಹಾಗೂ ಅರವಿಂದ್‌ ಕೇಜ್ರೀವಾಲ್‌ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಪಂಜಾಬ್‌ ನ ಗೆಲುವಿನ ಬಳಿಕ ಎಎಪಿ ಕರ್ನಾಟಕ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಿಗೆ ತನ್ನನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News