ಉಷ್ಣಮಾರುತದಿಂದ ಕೃಷಿ ಇಳುವರಿಯಲ್ಲಿ ಭಾರೀ ಕುಸಿತ
ನಿರಂತರ ಎರಡನೇ ತಿಂಗಳು ಭಾರತ ತೀವ್ರ ಉಷ್ಣ ಮಾರುತದ ಹೊಡೆತಕ್ಕೆ ಸಿಲುಕಿದೆ. ಇದು ದೇಶದ ಕೃಷಿ ಕ್ಷೇತ್ರದ ಮೇಲೆ, ಅದರಲ್ಲೂ ಮುಖ್ಯವಾಗಿ ಗೋಧಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.
ಕಡಿಮೆ ಫಸಲಿನ ಕಾರಣದಿಂದಾಗಿ ಆಹಾರ ಧಾನ್ಯಗಳ ಬೆಲೆಗಳಲ್ಲಿ ಹೆಚ್ಚಳವಾಗುವುದು ಸಹಜ. ಹಾಗಾಗಿ, ಸರಕಾರವು ಆಹಾರ ಧಾನ್ಯಗಳ ರಫ್ತನ್ನು ಮರೆತು, ಇರುವ ಎಲ್ಲ ಧಾನ್ಯಗಳನ್ನು ದೇಶಿ ಬಳಕೆಗೆ ಬಿಡುಗಡೆ ಮಾಡಬೇಕಾಗುತ್ತದೆ. ಇದು ಜಗತ್ತಿಗೆ ಉಣಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿರುವ ಕೊಡುಗೆಗೆ ಹಿನ್ನಡೆಯಾಗಬಹುದಾಗಿದೆ.
ಅತ್ಯಂತ ಬಿಸಿಯ ತಿಂಗಳುಗಳು
ಭಾರತದಲ್ಲಿ ಈ ವರ್ಷದ ಮಾರ್ಚ್ ತಿಂಗಳು 122 ವರ್ಷಗಳಲ್ಲೇ ಅತ್ಯಂತ ಬಿಸಿಯ ಮಾರ್ಚ್ ಆಗಿತ್ತು. ಈಗ ಎಪ್ರಿಲ್ ಕೂಡ 100ಕ್ಕೂ ಹೆಚ್ಚಿನ ವರ್ಷಗಳಲ್ಲಿ ಅತ್ಯಂತ ಬಿಸಿಯ ಎಪ್ರಿಲ್ ಆಗಿದೆ. ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದೆ. ಹಾಗಾಗಿ, ಭಾರತೀಯ ಹವಾಮಾನ ಇಲಾಖೆಯು ಎಪ್ರಿಲ್ 27ರಂದು ‘ಹಳದಿ’ ಎಚ್ಚರಿಕೆಯನ್ನು ಹೊರಡಿಸಿದೆ. ಈಗ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನೊಳಗೊಂಡ ಪ್ರದೇಶವು ಕಾದ ಬಾಣಲೆಯಾಗಲಿದೆ.
ಹೊಸದಿಲ್ಲಿಯಲ್ಲಿ, ಗರಿಷ್ಠ ಉಷ್ಣತೆಯು ಇತ್ತೀಚಿನ ದಿನಗಳಲ್ಲಿ 42 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿದೆ. ಒಂದು ದಶಕದ ಅವಧಿಯಲ್ಲಿ, ಒಂದು ತಿಂಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಉಷ್ಣ ಮಾರುತ ದಿನಗಳು ಹೊಸದಿಲ್ಲಿಯಲ್ಲಿ ದಾಖಲಾಗಿವೆ. ಹವಾಮಾನ ಬದಲಾವಣೆಯ ಕಾರಣದಿಂದಾಗಿ, ಇತ್ತೀಚಿನ ವರ್ಷಗಳಲ್ಲಿ ಆಗ್ನೇಯ ಏಶ್ಯದಲ್ಲಿ ತೀವ್ರ ಉಷ್ಣ ಮಾರುತ ಮತ್ತು ಬಿರುಸಿನ ಮಳೆಗಾಲ ಸಾಮಾನ್ಯವಾಗಿದೆ. ಇದರ ಮಾನವ ಮತ್ತು ಆರ್ಥಿಕ ವೆಚ್ಚಗಳು ಅಗಾಧವಾಗಿವೆ.
ಕೃಷಿಯ ಮೇಲೆ ಪರಿಣಾಮ
ರಶ್ಯ-ಉಕ್ರೇನ್ ಯುದ್ಧವನ್ನು ಬಳಸಿಕೊಂಡು ತನ್ನ ಗೋಧಿ ರಫ್ತನ್ನು ಹೆಚ್ಚಿಸುವ ಯೋಜನೆಯನ್ನು ಭಾರತ ಹಾಕಿಕೊಂಡಿತ್ತು. ವಿಶ್ವ ವ್ಯಾಪಾರ ಸಂಘಟನೆಯು ಅನುಮತಿ ನೀಡಿದರೆ ಭಾರತದ ಗೋಧಿಯು ‘‘ಜಗತ್ತಿನ ಹೊಟ್ಟೆ ತುಂಬಿಸಬಲ್ಲದು’’ ಎಂಬುದಾಗಿ ಎಪ್ರಿಲ್ 11ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೆ ನಡೆಸಿದ ಮಾತುಕತೆಯ ವೇಳೆ ಮೋದಿ ಹೇಳಿದ್ದರು. ಆದರೆ, ತೀವ್ರ ಉಷ್ಣತೆ ಮತ್ತು ಮಾರ್ಚ್ ತಿಂಗಳ ಶುಷ್ಕ ಹವಾಮಾನದಿಂದಾಗಿ ಕೃಷಿ ಇಳುವರಿಯಲ್ಲಿ ನಿರೀಕ್ಷೆಗಿಂತ ಭಾರೀ ಕಡಿತವಾಗಿದೆ.
ಪಂಜಾಬ್‌ನ ಕೃಷಿ ಮಾರುಕಟ್ಟೆಗಳಿಗೆ ಈವರೆಗೆ ಬಂದಿರುವ ಗೋಧಿಯು 2021ರಲ್ಲಿ ಈ ಅವಧಿಯಲ್ಲಿ ಬಂದಿರುವ ಗೋಧಿಗಿಂತ ಕನಿಷ್ಠ 20 ಶೇಕಡ ಕಡಿಮೆಯಾಗಿದೆ ಎಂಬುದಾಗಿ ‘ದ ಹಿಂದೂ’ ಪತ್ರಿಕೆಯ ಅಂಕಿಅಂಶಗಳ ವಿಶ್ಲೇಷಣೆಯು ತಿಳಿಸಿದೆ. ಪಂಜಾಬ್ ದೇಶದ ಅತಿ ದೊಡ್ಡ ಆಹಾರ ಉತ್ಪಾದಕ ರಾಜ್ಯವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಇಳುವರಿಯೂ ಈ ವರ್ಷ ಕಡಿಮೆಯಾಗಿದೆ. 2021ರಲ್ಲಿ ಪ್ರತಿ ಎಕರೆಗೆ ಸರಾಸರಿ 19.8 ಕ್ವಿಂಟಾಲ್ ಗೋಧಿ ಉತ್ಪಾದನೆಯಾಗಿತ್ತು. ಈ ಬಾರಿ ಅದು ಎಕರೆಗೆ 17.8 ಕ್ವಿಂಟಾಲ್‌ಗೆ ಇಳಿಕೆಯಾಗಿದೆ ಎಂದು ‘ದ ಹಿಂದೂ’ ವರದಿ ಮಾಡಿದೆ.
ಮಾರ್ಚ್‌ನಲ್ಲಿ ಉಷ್ಣತೆಯು ಹೆಚ್ಚಿದ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಬೇಗನೆ ಕಟಾವು ಮಾಡುವ ಬಲವಂತಕ್ಕೆ ಒಳಗಾದರು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆಯ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹೇಳಿದರು. ಕೆಲವು ಪ್ರಕರಣಗಳಲ್ಲಿ ಇಳುವರಿಯು ಉತ್ತಮ ಬೆಳೆ ಬಂದ ವರ್ಷದ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ಅವರು ಸಂಸತ್‌ನಲ್ಲಿ ಹೇಳಿದರು.
ಅತೀವ ಉಷ್ಣತೆಯು ಕೆಲಸದ ಅವಧಿಯ ಕಡಿತಕ್ಕೂ ಕಾರಣವಾಗಿದೆ. ಉಷ್ಣ ಮಾರುತವು ಇದೇ ರೀತಿಯಲ್ಲಿ ಮುಂದುವರಿದರೆ, ಭಾರತವು ಪ್ರತಿ ವರ್ಷ 10,000 ಕೋಟಿ ಕೆಲಸದ ಗಂಟೆಗಳನ್ನು ಕಳೆದುಕೊಳ್ಳುತ್ತದೆ ಎಂದು ವಿಜ್ಞಾನ ಪತ್ರಿಕೆ ‘ನೇಚರ್’ನಲ್ಲಿ 2021ರಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಹೇಳಿದೆ.
(ಕೃಪೆ: qz.com)