ಮಧ್ಯಪ್ರದೇಶ | ಗೋವಧೆ ಶಂಕೆ: ಬುಡಕಟ್ಟು ಜನಾಂಗದ ಇಬ್ಬರ ಹತ್ಯೆ

Update: 2022-05-03 16:37 GMT
ಸಾಂದರ್ಭಿಕ ಚಿತ್ರ

ಸಿಯೋನಿ (ಮಧ್ಯಪ್ರದೇಶ): ಗೋ ಹತ್ಯೆ ಶಂಕೆಯಿಂದ ಸುಮಾರು 15-20 ಮಂದಿಯ ಗುಂಪು ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರನ್ನು ಹೊಡೆದು ಸಾಯಿಸಿದ ಅಮಾನುಷ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ. ದಾಳಿಕೋರರು ಬಜರಂಗ ದಳ ಕಾರ್ಯಕರ್ತರು ಎಂದು ಪ್ರಕರಣದ ಬಗ್ಗೆ ದೂರು ನೀಡಿದವರು ಹಾಗೂ  ವಿರೋಧ ಪಕ್ಷವಾದ ಕಾಂಗ್ರೆಸ್ ಮುಖಂಡರು ಅಪಾದಿಸಿದ್ದಾರೆ.

ಕುರಾಯಿ ಠಾಣೆ ವ್ಯಾಪ್ತಿಯ ಸಿಮರಿಯಾ ಎಂಬಲ್ಲಿ ಸೋಮವಾರ ನಸುಕಿನ 2.30  ರಿಂದ 3.೦೦ ಗಂಟೆಯ ನಡುವೆ ನಡೆದ ಈ ಘಟನೆ ಸಂಬಂಧ 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರು ಮಂದಿಯ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ನೇತೃತ್ವದಲ್ಲಿ ಸಾರ್ವಜನಿಕರು ಜಬಲ್ಪುರ- ನಾಗ್ಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಸಿಯೋನಿ ಪೊಲೀಸ್ ಅಧೀಕ್ಷಕ ಹಾಗೂ ಇತರ  ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

"ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮೃತಪಟ್ಟಿದ್ದಾರೆ. 15-20 ಮಂದಿಯ ಗುಂಪು ಸಂತ್ರಸ್ತರ ಮನೆಗೆ ತೆರಳಿ, ಗೋವನ್ನು ಹತ್ಯೆ ಮಾಡಿದ ಆರೋಪ ಹೊರಿಸಿ ಹಲ್ಲೆ ನಡೆಸಿದೆ, ಇಬ್ಬರೂ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರು. ಇನ್ನಷ್ಟೇ ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದೆ ಎಂದು ಹೆಚ್ಚುವರಿ ಎಸ್ಪಿ ಎಸ್.ಕೆ.ಮರವಿ ಹೇಳಿದ್ದಾರೆ.

ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. 2-3  ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತರ ಮನೆಯಲ್ಲಿ 12 ಕೆಜಿ ಮಾಂಸ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News