×
Ad

ದ.ಕ.ಜಿಲ್ಲೆ : ಹಲವೆಡೆ ಸಿಡಿಲು ಸಹಿತ ಭಾರೀ ಮಳೆ

Update: 2022-05-04 20:11 IST

ಮಂಗಳೂರು : ದ.ಕ.ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಸಿಡಿಲು, ಮಿಂಚು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಆಗಾಗ ಸುರಿಯುತ್ತಿದ್ದ ಸಾಮಾನ್ಯ ಮಳೆಯು ಇದೀಗ ತೀವ್ರತೆ ಪಡೆದುಕೊಂಡಿವೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಮೋಡದ ಚಲನೆ ಜೋರಾಗಿದ್ದು, ಇವು ಮಳೆಯಾಗಿ ಪರಿವರ್ತನೆಯಾಗುತ್ತಿವೆ. ಹಾಗಾಗಿ ಬುಧವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡು ಬಂದಿದೆ.

ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಮಳೆ ಸುರಿಯಲು ಆರಂಭವಾಗಿದ್ದು, ಆಕಾಶದಲ್ಲಿ ದಟ್ಟ ಮೋಡ ಕವಿದಿತ್ತು. ಮಧ್ಯಾಹ್ನದ ಬಳಿಕ ಮಳೆಯ ಅಬ್ಬರ ತುಸು ಹೆಚ್ಚಾಗಿತ್ತು. ಕೆಲವೆಡೆ 2-3 ಗಂಟೆಗಳ ಕಾಲ ಮಳೆಯಾಗಿದೆ.

ಗಾಳಿಯ ಅಬ್ಬರಕ್ಕೆ ಅಲ್ಲಲ್ಲಿ ಮರದ ಕೊಂಬೆ, ಮರಗಳು ಉರುಳಿದ್ದು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿ ಜನರು ಸಂಕಷ್ಟ ಅನುಭವಿಸಿದ್ದಾರೆ.

ಉಳ್ಳಾಲ ತಾಲೂಕಿನ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರಸ್ತೆ ಬದಿಯಲ್ಲಿ ಗ್ಯಾಸ್, ನೀರಿನ ಪೈಪ್‌ಲೈನ್‌ಗಾಗಿ ಅಗೆದಿರುವಲ್ಲಿ ಮಣ್ಣು ರಸ್ತೆಗೆ ಬಂದು ಬಿದಿದ್ದು, ಬದಿಯಲ್ಲಿ ಹೊಂಡಗಳು ಉಂಟಾಗಿವೆ. ಬುಧವಾರ ಮುಂಜಾವದಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಹನಿ ಮಳೆಯಾಗಿದೆ.

ಸುಳ್ಯದ ಕಲ್ಮಡ್ಕ, ಹರಿಹರ ಪಳ್ಳತ್ತಡ್ಕ, ದೇವಚ್ಚಳ್ಳ, ಬಾಳಿಲ, ಉಬರಡ್ಕ ಮಿತ್ತೂರು, ಕನಕ ಮಜಲು, ಪುತ್ತೂರಿನ ಬಡಗನ್ನೂರು, ಅರಿಯಡ್ಕ, ಕೊಳ್ತಿಗೆ, ಕೆದಂಬಾಡಿ, ರಾಮಕುಂಜ, ನೆಕ್ಕಿಲಾಡಿ, ಕಡಬದ ಸುಬ್ರಹ್ಮಣ್ಯ ಸುತ್ತಮುತ್ತ, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಮೂಡುಬಿದಿರೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.

ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗುರುವಾರವೂ ಕರಾವಳಿಗೆ ಯೆಲ್ಲೋ ಅಲರ್ಟ್ ಇದ್ದು, ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News