×
Ad

ಮುಂಬೈ ಮಸೀದಿ ಬಳಿ ಹನುಮಾನ್ ಚಾಲೀಸಾ ಮೊಳಗಿಸಿದ ಎಂಎನ್ಎಸ್ ಕಾರ್ಯಕರ್ತರು‌

Update: 2022-05-04 23:33 IST

ಸಾಂದರ್ಭಿಕ ಚಿತ್ರ
 

ಮುಂಬೈ,ಮೇ 4: ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಕಾರ್ಯಕರ್ತರು ಬುಧವಾರ ಮುಂಬೈನ ಚಾರ್ಕೋಪ್ ಪ್ರದೇಶದಲ್ಲಿನ ಮಸೀದಿಯ ಬಳಿ ನಸುಕಿನ ನಮಾಝ್ ಸಮಯದಲ್ಲಿ ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸಾವನ್ನು ಮೊಳಗಿಸಿದ್ದಾರೆ.

ಎಂಎನ್ಎಸ್ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಬೀಸುತ್ತಿದ್ದನ್ನು ಮತ್ತು ಹನುಮಾನ ಚಾಳೀಸಾವನ್ನು ಧ್ವನಿವರ್ಧಕದ ಮೂಲಕ ಮೊಳಗಿಸುತ್ತಿದ್ದನ್ನು ತೋರಿಸುವ ವೀಡಿಯೊ ವ್ಯಾಪಕವಾಗಿ ಶೇರ್ ಆಗಿದ್ದು,ಹಿನ್ನೆಲೆಯಲ್ಲಿ ಅಝಾನ್ ಅನ್ನು ಆಲಿಸಬಹುದಾಗಿದೆ. ಧ್ವನಿವರ್ಧಕಗಳ ಮೂಲಕ ಹನುಮಾನ ಚಾಲೀಸಾವನ್ನು ಮೊಳಗಿಸಿದ್ದಕ್ಕಾಗಿ ರಾಜ್ಯಾದ್ಯಂತ 250ಕ್ಕೂ ಅಧಿಕ ಎಂಎನ್ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.ಮಹಾರಾಷ್ಟ್ರ ಸರಕಾರವು ಅಝಾನ್ ಕರೆ ನೀಡಲು ಬಳಸಲಾಗುವ ಧ್ವನಿವರ್ಧಕಗಳನ್ನು ಮಸೀದಿಗಳಿಂದ ತೆಗೆಸದಿದ್ದರೆ ಅವುಗಳ ಬಳಿ ದೊಡ್ಡದಾಗಿ ಹನುಮಾನ ಚಾಲೀಸಾವನ್ನು ಮೊಳಗಿಸುವಂತೆ ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆ ಕಳೆದೊಂದು ತಿಂಗಳಿನಿಂದಲೂ ಜನರಿಗೆ ಕರೆ ನೀಡುತ್ತಿದ್ದರು.ಮಂಗಳವಾರ ಠಾಕ್ರೆ ತನ್ನ ಕರೆಯನ್ನು ಟ್ವಿಟರ್‌ನಲ್ಲಿ ಪುನರುಚ್ಚರಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ಮೇ 1ರಂದು ಔರಂಗಾಬಾದ್‌ನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದಕ್ಕಾಗಿ ಮತ್ತು ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.

ಸಂಭಾವ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಎಂಎನ್ಎಸ್ ಸಕ್ರಿಯವಾಗಿರುವ ರಾಜ್ಯದ ವಿವಿಧೆಡೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಬೈನಲ್ಲಿ ರಾಜ್ ಠಾಕ್ರೆ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.ಈ ನಡುವೆ ಬುಧವಾರ ಠಾಕ್ರೆ ನಿವಾಸದ ಹೊರಗೆ ಜಮಾಯಿಸಿದ ಎಂಎನ್ಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News