ಲಸಿಕೆಯ ಹೆಸರಲ್ಲಿ ‘ಬ್ಲಾಕ್‌ಮೇಲ್’ ನಿಲ್ಲಲಿ

Update: 2022-05-05 05:39 GMT

ಕೋವಿಡ್ ಲಸಿಕೆ ಪಡೆಯುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಅಷ್ಟೇ ಅಲ್ಲ, ‘‘ಲಸಿಕೆ ಹಾಕಿಸಿಕೊಳ್ಳದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಿರುವ ರಾಜ್ಯ ಸರಕಾರಗಳು ಮತ್ತು ಸಂಸ್ಥೆಗಳ ಕ್ರಮ ಸಮರ್ಪಕವಲ್ಲ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ಸ್ಥಿತಿಗಳಲ್ಲಿ ಅದನ್ನು ಹಿಂದೆಗೆದುಕೊಳ್ಳಬೇಕು’’ ಎಂದೂ ಸೂಚನೆ ನೀಡಿದೆ. ತೀರಾ ತಡವಾಗಿಯಾದರೂ, ವಿವೇಕದಿಂದ ಕೂಡಿದ ಆದೇಶವೊಂದು ಸುಪ್ರೀಂಕೋರ್ಟ್‌ನಿಂದ ಹೊರ ಬಿದ್ದಿದೆ. ಸರಕಾರ ಮತ್ತು ಲಸಿಕೆ ಮಾಫಿಯಾ ನಡುವಿನ ಅನೈತಿಕ ಸಂಬಂಧಕ್ಕೆ ಈ ಆದೇಶದಿಂದ ತೀವ್ರ ಮುಖಭಂಗವಾಗಿದೆ. ಲಸಿಕೆಯ ಕುರಿತಂತೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯವಾಗದೆ, ಬ್ಲಾಕ್‌ಮೇಲ್ ಮೂಲಕ ಜನಸಾಮಾನ್ಯರ ಮೇಲೆ ಲಸಿಕೆಯನ್ನು ಹೇರಲು ಹೊರಟ ಸರಕಾರಕ್ಕೆ ಅಂಕುಶ ಬಿದ್ದಂತಾಗಿದೆ.

ಈ ಆದೇಶದ ಹೊರತಾಗಿಯೂ ಲಸಿಕೆ ಹೇರಿಕೆ ಪೂರ್ಣ ಪ್ರಮಾಣದಲ್ಲಿ ನಿಲ್ಲುತ್ತದೆ ಎಂದು ಹೇಳುವಂತಿಲ್ಲ. ಯಾಕೆಂದರೆ ಲಸಿಕೆಯನ್ನು ಪಡೆಯುವಂತೆ ಒತ್ತಾಯಿಸುವುದಿಲ್ಲ ಎಂದು ಹೇಳುತ್ತಲೇ ಸರಕಾರ ಈಗಾಗಲೇ ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ಸಂಸ್ಥೆಗಳ ಮೂಲಕ ಜನರ ಮೇಲೆ ಲಸಿಕೆಯನ್ನು ಹೇರುತ್ತಾ ಬಂದಿದೆ. ಸುಪ್ರೀಂಕೋರ್ಟ್‌ನ ಆದೇಶ ಹೊರಬೀಳುವ ಹೊತ್ತಿಗೆ, ಸರಕಾರದ ವಿವಿಧ ಸಂಸ್ಥೆಗಳ ಒತ್ತಡಕ್ಕೆ ಮಣಿದು ಲಕ್ಷಾಂತರ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಸರಕಾರದ ವಿವಿಧ ಸಂಸ್ಥೆಗಳ ಒತ್ತಡದ ಕಾರಣಗಳಿಂದಲೇ ಈಗಾಗಲೇ ಲಸಿಕೆ ಹಾಕಿಸಿಕೊಂಡವರಿಗೆ ಯಾವ ರೀತಿಯ ಪರಿಹಾರವನ್ನು ಒದಗಿಸಲಾಗುತ್ತದೆ? ಲಸಿಕೆಗಳಿಂದ ಅದೆಷ್ಟೋ ಮಂದಿ ಅಸ್ವಸ್ಥರಾಗಿರುವ ಉದಾಹರಣೆಗಳಿವೆ. ಇದೇ ಸಂದರ್ಭದಲ್ಲಿ ಲಸಿಕೆ ಹಾಸಿಕೊಂಡವರಿಗೆ ಮತ್ತೆ ಕೊರೋನ ಕಾಡಿರುವ ಪ್ರಕರಣಗಳೂ ವರದಿಯಾಗಿವೆ. ಈ ದೇಶದ ಕೋಟ್ಯಂತರ ಮಂದಿ ಲಸಿಕೆ ಹಾಕಿಸಿಕೊಂಡ ಬಳಿಕವೂ ಸರಕಾರ ‘ನಾಲ್ಕನೆಯ ಅಲೆ’ಯ ಬಗ್ಗೆ ಹೆದರಿಸುತ್ತದೆಯಾದರೆ, ಲಸಿಕೆಯಿಂದ ನಿಜಕ್ಕೂ ಜನರಿಗಾಗಿರುವ ಪ್ರಯೋಜನವೇನು?

 ಲಸಿಕೆ ಹಾಕಲು ಜನರು ಯಾಕೆ ಹಿಂಜರಿಯುತ್ತಿದ್ದಾರೆ ಎನ್ನುವುದರ ಬಗ್ಗೆ ಸರಕಾರ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಬಲವಂತದ ಲಸಿಕೆಯ ವಿರುದ್ಧ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಹೋರಾಟಗಳು ನಡೆಯುತ್ತಿವೆ. ಲಸಿಕೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸುವಲ್ಲಿ ವಿಫಲಗೊಂಡಿವೆ ಎನ್ನುವುದು ಹಲವು ವೈದ್ಯರು, ತಜ್ಞರ ಆರೋಪವಾಗಿದೆ. ಭಾರತದಲ್ಲೂ ಲಸಿಕೆಯನ್ನು ಅತ್ಯಂತ ಅವಸರದಲ್ಲಿ ಮಾರುಕಟ್ಟೆಗೆ ಇಳಿಸಲಾಯಿತು. ಅಷ್ಟೇ ಅಲ್ಲ, ಆರಂಭದಲ್ಲಿ ಲಸಿಕೆಗಳಿಗೆ ರಾಜ್ಯಗಳು ಹಣವನ್ನು ತೆರಬೇಕಾಯಿತು. ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುತ್ತಿದ್ದಂತೆಯೇ, ಕೇಂದ್ರ ಸರಕಾರ ಎಚ್ಚರಗೊಂಡು, ಉಚಿತವಾಗಿ ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಲಸಿಕೆ ನೀಡುವ ಆರಂಭದಲ್ಲೇ ಸರಕಾರ ಎಡವಿತ್ತು. ಆ ಹೊತ್ತಿಗೆ ಜನ ಸಾಮಾನ್ಯರ ಮುಖ್ಯ ಬೇಡಿಕೆ ಲಸಿಕೆ ಆಗಿರಲಿಲ್ಲ. ‘ನಮ್ಮನ್ನು ದುಡಿಯಲು ಬಿಡಿ. ನಮಗೆ ಲಸಿಕೆ ಬೇಡ, ಆಹಾರ ಬೇಕು’ ಎಂದು ತಳಸ್ತರದ ಜನರು ಸರಕಾರವನ್ನು ಕೇಳುತ್ತಿದ್ದ ಸಮಯ. ಸರಕಾರದಿಂದ ಭಾರೀ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಸರಕಾರ ದೊಡ್ಡ ಪ್ರಮಾಣದ ಹಣವನ್ನು ಸುರಿದದ್ದು, ಲಸಿಕೆ ಕಂಪೆನಿಗಳಿಗೆ. ಕೊರೋನವನ್ನೇ ಗಂಭೀರವಾಗಿ ಸ್ವೀಕರಿಸದ ಬಡವರು, ಶ್ರೀಸಾಮಾನ್ಯರು ಲಸಿಕೆಯನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ ಎನ್ನುವುದು ದೂರದ ಮಾತು. ಇಷ್ಟಕ್ಕೂ ಈ ಲಸಿಕೆಯಿಂದಾಗಿ ಕೊರೋನದಿಂದ ಪಾರಾಗಬಹುದು ಎನ್ನುವುದನ್ನು ನಂಬುವ ಜನರ ಸಂಖ್ಯೆ ತೀರಾ ಕಡಿಮೆ. ಇಂತಹ ಹೊತ್ತಿನಲ್ಲಿ ಸರಕಾರ, ಲಸಿಕೆ ಹಾಕದೇ ಇದ್ದಲ್ಲಿ ರೇಷನ್ ನೀಡುವುದಿಲ್ಲ, ಮಕ್ಕಳಿಗೆ ಶಾಲೆಗಳಿಗೆ ಪ್ರವೇಶ ನೀಡುವುದಿಲ್ಲ ಎನ್ನುವ ಬ್ಲಾಕ್‌ಮೇಲ್‌ಗೆ ಇಳಿಯಿತು.

ದೊಡ್ಡ ಸಂಖ್ಯೆಯ ಜನರು ಕೊರೋನದ ಬದಲು, ಜಿಲ್ಲಾಡಳಿತದ ಬ್ಲಾಕ್‌ಮೇಲ್‌ಗೆ ಹೆದರಿ ಲಸಿಕೆ ಹಾಕಿಕೊಂಡವರು. ಇದೀಗ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಆಂದೋಲನಕ್ಕೆ ಸರಕಾರ ಇಳಿದಿದೆ. ಹಿರಿಯರಿಗೆ ಲಸಿಕೆ ಹಾಕುವ ಆಂದೋಲನವೇ ಭಾಗಶಃ ವಿಫಲವಾಗಿರುವಾಗ ವಿದ್ಯಾರ್ಥಿಗಳಿಗೆ ಲಸಿಕೆ ಆಂದೋಲನವನ್ನು ತುರ್ತಾಗಿ ಯಾಕೆ ಆರಂಭಿಸಿತು.? ಯಾಕೆಂದರೆ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದಿಟ್ಟು ಬ್ಲಾಕ್‌ಮೇಲ್ ಮಾಡುವುದು ಅತಿ ಸುಲಭ. ಆರಂಭದಲ್ಲಿ ಲಸಿಕೆ ಹಾಕದ ಪೋಷಕರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶಾತಿ ಇಲ್ಲ ಎಂಬ ಆದೇಶವನ್ನು ಹೊರಡಿಸಿತು. ಇದರ ಬಗ್ಗೆ ತೀವ್ರ ಟೀಕೆ ಆರಂಭವಾದಂತೆ, ತನ್ನ ಆದೇಶವನ್ನು ಹಿಂದೆಗೆದುಕೊಂಡಿತು. ಆ ಬಳಿಕ ಮಕ್ಕಳು ಪರೀಕ್ಷೆ ಕೂರಬೇಕಾದರೆ ಲಸಿಕೆ ಕಡ್ಡಾಯ ಎನ್ನುವ ವದಂತಿಯನ್ನು ಹರಡಿತು. ಎಸೆಸೆಲ್ಸಿ ಮತ್ತು ಪಿಯುಸಿಯ ಮಕ್ಕಳು ಅನಿವಾರ್ಯವಾಗಿ ಲಸಿಕೆ ತೆಗೆದುಕೊಳ್ಳಬೇಕಾಯಿತು. ಪರೀಕ್ಷೆಗೆ ಕೂರುವ ಸಂದರ್ಭದಲ್ಲಿ ಸಮಸ್ಯೆ ಎದುರಾಗುವುದು ಬೇಡ ಎನ್ನುವ ಕಾರಣಕ್ಕೆ ಇಷ್ಟ ವಿಲ್ಲದಿದ್ದರೂ ಪೋಷಕರೂ ತಮ್ಮ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸಿದರು. ಇದೀಗ ಸುಪ್ರೀಂಕೋರ್ಟ್ ಲಸಿಕೆ ಪಡೆಯಲು ಒತ್ತಾಯಿಸುವಂತಿಲ್ಲ ಎಂದು ಆದೇಶ ನೀಡಿದೆ. ಆದರೆ ಈಗಾಗಲೇ ಸಹಸ್ರಾರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಹೆದರಿ ಲಸಿಕೆಗಳನ್ನು ಪಡೆದೂ ಆಗಿದೆ. ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ಹಲವು ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ, ಜಿಲ್ಲಾಡಳಿತದ ಮೂಲಕ ಜನ ಸಾಮಾನ್ಯರನ್ನು ಬೆದರಿಸಿ ಲಸಿಕೆಗಳನ್ನು ಹಾಕಿಸಲಾಗುತ್ತಿದೆ.

 ಇತ್ತೀಚಿನ ದಿನಗಳಲ್ಲಿ ಲಸಿಕೆಗಳನ್ನು ಹಾಕಲು ಇನ್ನೊಂದು ತಂತ್ರವನ್ನು ಸರಕಾರ ಅನುಸರಿಸುತ್ತಿದೆ. ಬೂಸ್ಟರ್ ಲಸಿಕೆ ಮಾರುಕಟ್ಟೆಗೆ ಬಂದ ಮರುದಿನವೇ ‘ನಾಲ್ಕನೆ ಅಲೆ’ಯ ಕುರಿತಂತೆ ವ್ಯಾಪಕ ಚರ್ಚೆಗಳು ಆರಂಭವಾದವು. ಸರಕಾರ ಏಕಾಏಕಿ ಲಾಕ್‌ಡೌನ್ ಸಾಧ್ಯತೆಗಳ ಬಗ್ಗೆ ಮಾತನಾಡತೊಡಗಿತು. ಪ್ರಧಾನಮಂತ್ರಿಯವರು ರಾಜ್ಯಗಳ ಜೊತೆಗೆ ಮಾತುಕತೆ ನಡೆಸಿ ‘ಕೊರೋನ ಮುಂಜಾಗೃತಿ’ಯನ್ನು ಮೂಡಿಸಲು ಕರೆ ನೀಡುತ್ತಾರೆ. ಇವೆಲ್ಲವೂ ಜನರನ್ನು ಲಸಿಕೆ ಪಡೆಯುವಂತೆ ಮಾನಸಿಕವಾಗಿ ಒತ್ತಡ ಹೇರುವ ತಂತ್ರವೇ ಆಗಿದೆ. ಇಂದಿಗೂ ಜನರು ಕೇಳುತ್ತಿರುವುದು ಉದ್ಯೋಗ ಮತ್ತು ಆಹಾರವನ್ನು. ಅಷ್ಟೇ ಅಲ್ಲ ಇತರ ಮಾರಕ ರೋಗಗಳಿಗೆ ಔಷಧಿಗಳಿಲ್ಲದೆ ಜನರು ಕಂಗಾಲಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಬೇರೆ ಬೇರೆ ತಂತ್ರಗಳ ಮೂಲಕ ಲಸಿಕೆಗಳನ್ನು ಹೇರುವುದು ಎಷ್ಟು ಸರಿ? ಸರಕಾರ ಕೊರೋನದ ಬಗ್ಗೆ ತಲೆಕೆಡಿಸಿಕೊಂಡಿದ್ದು ಅತಿಯಾಯಿತು. ಬಡತನ, ನಿರುದ್ಯೋಗ ಇತ್ಯಾದಿಗಳ ಕಾರಣದಿಂದ ಇನ್ನಿತರ ರೋಗಗಳು ವಿಜೃಂಭಿಸತೊಡಗಿವೆ. ಕ್ಷಯದಂತಹ ಮಾರಕ ರೋಗಗಳು ಜನರನ್ನು ಹೆಚ್ಚು ಕಾಡುತ್ತಿವೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ‘ಹಾವು ಸಾಯಬಾರದು-ಕೋಲು ಮುರಿಯಬಾರದು’ ಎಂಬಂತೆ ಲಸಿಕೆಯನ್ನು ಮುಂದಿಟ್ಟು ಸರಕಾರ ಆಡುತ್ತಿರುವ ಕೊರೋನ ಆಟಕ್ಕೆ ಇನ್ನಾದರೂ ಪೂರ್ಣ ವಿರಾಮ ಬೀಳಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News