ನಮ್ಮ ಆಹಾರ ಎಷ್ಟು ಸುರಕ್ಷಿತ?

Update: 2022-05-05 05:28 GMT

ಇತ್ತೀಚೆಗೆ ನಮ್ಮ ದೇಶದಲ್ಲಿ ಅಲ್ಲಲ್ಲಿ, ಬೀದಿ ಬೀದಿಗಳಲ್ಲಿ ನಾಯಿ ಕೊಡೆಗಳಂತೆ ‘ಫಾಸ್ಟ್ ಫುಡ್’ ಅಥವಾ ದಿಢೀರ್ ಆಹಾರದ ಅಡ್ಡೆಗಳ ಸಂಖ್ಯೆ ಎರ್ರಾಬಿರ್ರಿಯಾಗಿ ಏರುತ್ತಿದೆ. ಯಾವುದೇ ಆಹಾರ ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಎಲ್ಲಾ ಆಹಾರ ಸುರಕ್ಷಾ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ದಿಢೀರ್ ಜಂಕ್ ಆಹಾರ ತಯಾರಿಸುವ ಈ ಅಡ್ಡೆಗಳು ಮೃತ್ಯುಕೂಪವಾಗಿ ಕಾಡುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಮೊನ್ನೆ ದಿನ ಕೇರಳದ ಕಾಸರಗೋಡಿನ ಸಮೀಪದ ಚೆರ್ವತೂರು ಎಂಬಲ್ಲಿನ ಫಾಸ್ಟ್ ಫುಡ್ ಕೂಲ್ ಬಾರ್ ಎಂಬ ದಿಢೀರ್ ಆಹಾರದ ಅಂಗಡಿಯಲ್ಲಿ, ಶವರ್ಮ ಎಂಬ ಮಾಂಸ ಮಿಶ್ರಿತ ಖಾದ್ಯವನ್ನು ತಿಂದು ಹದಿಹರೆಯದ ಹುಡುಗಿಯೊಬ್ಬಳು ಜೀವ ಕಳೆದುಕೊಂಡ ಘಟನೆ ಮೂಕ ಸಾಕ್ಷಿಯಾಗಿ ನಮ್ಮೆದುರು ಇದೆ. ವಿಪರ್ಯಾಸವೆಂದರೆ ಸುರಕ್ಷಿತವಾದ, ಆಹಾರ ಸುರಕ್ಷಾ ನಿಯಮಗಳನ್ನು ಪಾಲಿಸಿಕೊಂಡು ಸಾಂಪ್ರಾದಾಯಕ ಶೈಲಿಯಲ್ಲಿ ಆಹಾರ ನೀಡುವ ಹೊಟೇಲ್ ಯುವ ಜನರಿಗೆ ಇಷ್ಟವಾಗುವುದಿಲ್ಲ. ಈ ಥರದ ಆಸುರಕ್ಷಿತ ಮತ್ತು ದಿಢೀರ್ ಜಂಕ್ ಆಹಾರ ನೀಡುವ ಆಹಾರ ಅಡ್ಡೆಗಳು ಹೆಚ್ಚು ಆಕರ್ಷಕವಾಗಿ ಕಂಡು ಬರುತ್ತಿದೆ. ಈ ರೀತಿ ಅತೀ ಸುಲಭವಾಗಿ ದಿಢೀರ್ ಆಗಿ ಸಿಗುವ ಬರ್ಗರ್, ಫಿಝ್ಝಿ ಮತ್ತು ಶವರ್ಮ ಮುಂತಾದ ಆಹಾರಗಳು ಸೂಜಿಗಲ್ಲಿನಂತೆ ಯುವಕ ಯುವತಿಯರನ್ನು ಆಕರ್ಷಿಸುವುದು ವಿಪರ್ಯಾಸವೇ ಸರಿ. ಯಾವುದೇ ಸುರಕ್ಷಾ ಮಾನದಂಡ ಮತ್ತು ಸರಕಾರಿ ಅಧಿಸೂಚನೆಗಳನ್ನು ಪಾಲಿಸದೇ ಅತೀ ಕಡಿಮೆ ಜಾಗದಲ್ಲಿ ಕಾರ್ಯಾಚರಣೆ ನಡೆಸಿ ಈ ಆಹಾರ ಅಡ್ಡೆಗಳು ಮೃತ್ಯು ಕೂಪಗಳಾಗಿ ಬದಲಾಗಿರುವುದು ಅತ್ಯಂತ ಖೇದಕರ ವಿಚಾರ.

ಯಾಕಾಗಿ ಆಹಾರ ವಿಷಬಕಾರಕವಾಗುತ್ತದೆ?

1. ಇಂತಹ ದಿಢೀರ್ ಆಹಾರ ತಯಾರಿಸುವಾಗ ಹೆಚ್ಚು ರಾಸಾಯನಿಕ ಮತ್ತು ಬಣ್ಣ ಬರುವ ಪದಾರ್ಥಗಳು ಹಾಗೂ ರುಚಿ ಹೆಚ್ಚಿಸುವ ರಾಸಾಯನಿಕಗಳನ್ನು ಬಳಸುತ್ತಾರೆ. ಹೀಗೆ ಸಿದ್ಧ್ದಪಡಿಸಿದ ಆಹಾರ ಗ್ರಾಹಕರ ಕೊರತೆಯಿಂದ ಉಳಿದಾಗ, ಮರುದಿನದಲ್ಲಿ ಬಳಸಲ್ಪಟ್ಟಾಗ, ಪದೇ ಪದೇ ಬಿಸಿ ಮಾಡಿದಾಗ ಇದೇ ಆಹಾರದ ರಾಸಾಯನಿಕಗಳು ವಿಷಕಾರಕವಾಗಿ ಬದಲಾಗುತ್ತದೆ. ಆಹಾರ ಬೇಯಿಸಿದ ಕ್ರಮ ಮತ್ತು ಸಂಗ್ರಹದ ಸಮಯದಲ್ಲಿ ಉಂಟಾದ ಬೇಜವಾಬ್ದಾರಿಯಿಂದಲೂ ಆಹಾರ ವಿಷಪೂರಿತವಾಗುವ ಸಾಧ್ಯತೆ ಇರುತ್ತದೆ.

2. ಆಹಾರ ತಯಾರಿಸುವಾಗ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವಿಶೇಷವಾಗಿ ಮಾಂಸಾಹಾರ ವಿಷಪೂರಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

3. ಆಹಾರ ಬೇಯಿಸುವಾಗ ಹುಳ ಹುಪ್ಪಟೆಗಳು, ಹಲ್ಲಿಗಳು, ಧೂಳು, ಕಲುಷಿತ ನೀರು, ಸೋಂಕು ಮಿಶ್ರಿತ ನೀರು ಸೇರಿಕೊಂಡು ಆಹಾರ ವಿಷಪೂರಿತವಾಗುವ ಸಾಧ್ಯತೆ ಇರುತ್ತದೆ.

4. ಸಾಮಾನ್ಯವಾಗಿ ಮಾಂಸ, ಮೀನು, ಹಾಲು, ಡೈರಿ ಉತ್ಪನ್ನಗಳು, ಮೊಟ್ಟೆಗಳು ಇವೆಲ್ಲವನ್ನು ಬೇಯಿಸಿದ ಬಳಿಕ ಹೆಚ್ಚು ಜಾಗರೂಕರಾಗಿರಬೇಕು. ಕಲುಷಿತ ನೀರು, ಅಶುಚಿಕರವಾದ ಅಡುಗೆ ಕ್ರಮ, ಶುಚಿಯಿಲ್ಲದ ಪಾತ್ರೆಗಳ ಬಳಕೆ, ಇವೆಲ್ಲವೂ ಆಹಾರವನ್ನು ವಿಷಪೂರಿತವಾಗಿಸುವ ಸಾಧ್ಯತೆ ಇರುತ್ತದೆ. ದಿಢೀರ್ ಆಹಾರಗಳನ್ನು ತಯಾರಿಸಿದ ಕೂಡಲೇ ಬಳಸಬೇಕು. ಬಳಸದೇ ಉಳಿಕೆಯಾದ ಜಂಕ್ ಆಹಾರಗಳಾದ ಶವರ್ಮ, ಬರ್ಗರ್, ಫಿಝ್ಝೆಗಳನ್ನು ವಿಸರ್ಜಿಸಬೇಕು. ಇದನ್ನು ಶೀತಲೀಕರಣ ಯಂತ್ರದಲ್ಲಿ ಇಟ್ಟು ಶೇಖರಣೆ ಮಾಡಿದರೆ ಶಿಲೀಂಧ್ರ (ಫಂಗಸ್) ಬೆಳೆಯುವ ಸಾಧ್ಯತೆ ಇರುತ್ತದೆ.

5. ಶವರ್ಮಗಳನ್ನು ತಯಾರಿಸುವಾಗ ಸುತ್ತಮುತ್ತಲೂ ಶುಚಿಯಾದ ಪರಿಸರ ವಾತಾವರಣ ಇರಬೇಕು. ಈ ಶವರ್ಮ ಯಾವಾಗಲೂ ತೆರೆದ ಜಾಗದಲ್ಲಿ ಗಾಳಿಗೆ ತೆರೆದುಕೊಂಡಿರುತ್ತದೆ. ಗಾಳಿಯಿಂದ ಬ್ಯಾಕ್ಟೀರಿಯಾ ವೈರಾಣುಗಳೂ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

6. ತಾಜಾ ಹಣ್ಣಿನ ರಸ, ತರಕಾರಿ ಬಳಸಿ, ಆಹಾರ ತಯಾರಿಸುವಾಗ ಕೊಳೆತ ಹಣ್ಣುಗಳ ಬಳಕೆ ಮತ್ತು ಸರಿಯಾಗಿ ತೊಳೆಯದೆ ಬಳಸಿದ ತರಕಾರಿಗಳಿಂದಲೂ ಆಹಾರ ವಿಷಪೂರಿತವಾಗಿ ‘ಫುಡ್ ಪಾಯ್ಸನಿಂಗ್’ ಆಗುವ ಸಾಧ್ಯತೆ ಇರುತ್ತದೆ.

7. ಸಿದ್ಧಪಡಿಸಿದ ಆಹಾರ, ಬೇಯಿಸಿದ ಮಾಂಸ ಮುಂತಾದ ವಸ್ತುಗಳನ್ನು ನಿರ್ದಿಷ್ಟ ಅವಧಿ ವರೆಗೆ ಮಾತ್ರ ಬಳಸಬೇಕು. ಅವುಗಳನ್ನು ನಿರ್ದಿಷ್ಟ ನಿಯಂತ್ರಿತ ತಾಪಮಾನದಲ್ಲಿ ಸಂಗ್ರಹಿಸಬೇಕು. ಅವಧಿ ಮೀರಿದ ಆಹಾರ ಸೇವನೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ.

8. ದಿಢೀರ್ ಆಹಾರ ತಯಾರಿಸುವ ವ್ಯಕ್ತಿ ಕೂಡಾ ತನ್ನ ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕು. ಆತ ಸೋಂಕಿತನಾಗಿದ್ದಲ್ಲಿ ಅಥವಾ ಆತನ ಸೋಂಕು ಮಿಶ್ರಿತ ಬಟ್ಟೆಗಳಿಂದಲೂ ಆಹಾರ ವಿಷಪೂರಿತವಾಗುವ ಸಾಧ್ಯತೆ ಇರುತ್ತದೆ. 

ಫುಡ್ ಪಾಯ್ಸನಿಂಗ್ ಲಕ್ಷಣಗಳು ಏನು?

ಸಾಮಾನ್ಯವಾಗಿ ವಿಷಪೂರಿತ ಆಹಾರಕ್ಕೆ ಮುಖ್ಯ ಕಾರಣ ‘ಶಿಗೆಲ್ಲಾ’ ಎಂಬ ಬ್ಯಾಕ್ಟೀರಿಯಾ ಆಗಿರುತ್ತದೆ. ಶಿಗೆಲ್ಲಾ ಎಂಬ ವಿಭಾಗಕ್ಕೆ ಸೇರಿದ ಈ ಬ್ಯಾಕ್ಟೀರಿಯಾಗಳಿಂದ ಶಿಗಲ್ಲೋಸಿಸ್ ಎಂಬ ರೋಗ ಬರುತ್ತದೆ. ಈ ಸೋಂಕಿನಿಂದ ವಿಪರೀತವಾದ ಅತಿಸಾರ ಉಂಟಾಗಿ ಸಾಮಾನ್ಯವಾಗಿ ಮಕ್ಕಳಲ್ಲಿ ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ. ತಕ್ಷಣವೇ ಗುರುತಿಸಿ ನಿರ್ಜಲೀಕರಣವಾಗದಂತೆ ಎಚ್ಚರವಹಿಸಿ ಸೂಕ್ತ ಆ್ಯಂಟಿ ಬಯೋಟಿಕ್ ಬಳಸಿದಲ್ಲಿ ಗುಣಪಡಿಸಬಹುದು. ವಿಪರೀತ ಅತಿಸಾರದಿಂದಾಗಿ ತೀವ್ರವಾದ ಹೊಟ್ಟೆ ನೋವು, ವಾಂತಿ, ವಿಪರೀತ ಸುಸ್ತು, ನಿರ್ಜಲೀಕರಣ, ಮುಖ ಚರ್ಮ ಬಿಳಿಚಿಕೊಳ್ಳುವುದು, ಮಲದೊಂದಿಗೆ ರಕ್ತಸ್ರಾವ, ರಕ್ತದೊತ್ತಡ ಕಡಿಮೆಯಾಗುವುದು ಉಂಟಾಗುತ್ತದೆ. 

ಚಿಕಿತ್ಸೆ ಹೇಗೆ?

ರೋಗದ ತೀವ್ರತೆಯನ್ನು ನೋಡಿಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಾರೆ. ರೋಗ ಲಕ್ಷಣಗಳು ತೀವ್ರವಾಗಿರದೆ ಬರೀ ವಾಂತಿ, ಅತಿಸಾರ ಇದ್ದಲ್ಲಿ ಸುಸ್ತು ನಿವಾರಣೆಗೆ ಒಆರ್‌ಎಸ್ ದ್ರಾವಣ ನೀಡಿ ರಕ್ತದೊತ್ತಡವನ್ನು ಪರೀಕ್ಷಿಸಿ ರೋಗಿಯನ್ನು ನಿಗಾವಹಿಸಿ ಕಾಯುತ್ತಾರೆ. ಆದರೆ ಜ್ವರ, ತೀವ್ರ ಹೊಟ್ಟೆ ನೋವು, ಸುಸ್ತು ಇಳಿಯುತ್ತಿರುವ ರಕ್ತದೊತ್ತಡ ಇದ್ದಲ್ಲಿ ರಕ್ತನಾಳಗಳ ಮುಖಾಂತರ ಗ್ಲೂಕೋಸ್ ಮತ್ತು ಇತರ ಲವಣಾಂಶಯುಕ್ತ ದ್ರಾವಣ ನೀಡುತ್ತಾರೆ. ಒಳರೋಗಿಯಾಗಿ ದಾಖಲು ಮಾಡಿ ರೋಗಿಯ ಬಗ್ಗೆ ತೀವ್ರ ನಿಗಾವಹಿಸುತ್ತಾರೆ ಮತ್ತು ಆ್ಯಂಟಿ ಬಯೋಟಿಕ್ ನೀಡಿ ಸೋಂಕು ಶಮನ ಮಾಡುತ್ತಾರೆ. ರೋಗಿಯ ತೂಕ, ವಯಸ್ಸು, ಲಿಂಗ, ದೇಹ ಪ್ರಕೃತಿ ಮತ್ತು ರೋಗದ ಲಕ್ಷಣಗಳಿಗೆ ಅನುಗುಣವಾಗಿ ರೋಗಿಗೆ ಚಿಕಿತ್ಸೆ ನೀಡುತ್ತಾರೆ. ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಸಿಗದಿದ್ದಲ್ಲಿ 2ರಿಂದ 3 ಶೇಕಡಾ ಮಂದಿಯಲ್ಲಿ ಮಾರಣಾಂತಿಕವಾಗುವ ಸಾಧ್ಯತೆಯೂ ಇರುತ್ತದೆ. ಒಟ್ಟಿನಲ್ಲಿ ಒಆರ್‌ಎಸ್ ದ್ರಾವಣ, ಜ್ವರ ಹಾಗೂ ನೋವು ನಿಯಂತ್ರಣ ಔಷಧಿ, ಪೋಷಕಾಂಶ ಹಾಗೂ ಆ್ಯಂಟಿ ಬಯೋಟಿಕ್‌ಗಳ ಬಳಕೆಯಿಂದ ವಿಷಪೂರಿತ ಆಹಾರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಖಂಡಿತಾ ಸಾಧ್ಯವಿದೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News