ಪಿಎಸ್ಸೈ ನೇಮಕಾತಿ ಹಗರಣ | ದಿವ್ಯಾ ಹಾಗರಗಿಯಷ್ಟೆ ಅಲ್ಲ, ಇದರಲ್ಲಿ ಇನ್ನೂ ಹಲವರಿದ್ದಾರೆ: ಸಿಎಂ ಬೊಮ್ಮಾಯಿ

Update: 2022-05-05 06:23 GMT

ಬೆಂಗಳೂರು, ಮೇ 5: ಪಿಎಸ್ಸೈ ನೇಮಕಾತಿ ಹಗರಣದಲ್ಲಿ ‘ದಿವ್ಯಾ ಹಾಗರಗಿಯಷ್ಟೆ ಅಲ್ಲ. ಇನ್ನೂ ಹಲವರು ಈ ಪ್ರಕರಣದಲ್ಲಿ ಇದ್ದಾರೆ. ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಬೆಳಗ್ಗೆ ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಪಿಎಸ್ಸೈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಯಾವ ಯಾವ ದೂರು ಬರುತ್ತದೆ, ಯಾರು ಕೊಡುತ್ತಾರೆ ಎಲ್ಲವನ್ನೂ ಪರಿಗಣಿಸುತ್ತೇವೆ. ದಾಖಲೆಗಳನ್ನು ಪರಿಶೀಲಿಸಿ, ಅದನ್ನೂ ತನಿಖೆ ಮಾಡುತ್ತೇವೆ. ಮುಕ್ತವಾದ, ನಿಷ್ಪಕ್ಷಪಾತವಾದ, ನಿಷ್ಠುರವಾದ ತನಿಖೆ ಆಗಬೇಕು ಎನ್ನುವುದು ಸರ್ಕಾರ ನಿಲುವು. ಹಲವು ಅಧಿಕಾರಗಳ ಸಮೇತ ಕಾರ್ಯಾಚರಣೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ಆಧಾರರಹಿತ ಆರೋಪ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಬಗ್ಗೆ ಕಾಂಗ್ರೆಸ್‌ನವರು ಆಧಾರರಹಿತವಾದ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವಾಗ ಸಣ್ಣ ಸಾಕ್ಷ್ಯವಾದರೂ ಬೇಕು. ಆದರೆ, ಜವಾಬ್ದಾರಿಯುತ ಪಕ್ಷವಾದ ಕಾಂಗ್ರೆಸ್‌ ಹಿಟ್‌ ಆ್ಯಂಡ್‌ ರನ್‌ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಅವಧಿಯಲ್ಲಿ ಹಲವು ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಆ ಸಂದರ್ಭದಲ್ಲಿ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಪಕ್ಷದ ಕೆಲವರ ಬಂಧನ ಆಗಿದೆ. ಎಲ್ಲಿ ಅವರ ಬಣ್ಣ ಬಯಲಾಗುತ್ತದೊ ಎಂದು ಹೆದರಿ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.

'2 ಲಕ್ಷ ಟನ್‌ ರಾಗಿ ಹೆಚ್ಚುವರಿ ಖರೀದಿಗೆ ಆದೇಶ:

ರಾಜ್ಯದಲ್ಲಿ ರೈತರಿಂದ 2 ಲಕ್ಷ ಟನ್‌ ರಾಗಿ ಹೆಚ್ಚುವರಿಯಾಗಿ ಖರೀದಿಸಲು ಆದೇಶ ಹೊರಡಿಸಲಾಗಿದೆ. ರಾಗಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಶುಕ್ರವಾರದಿಂದಲೇ ನೋಂದಣಿ ಆರಂಭಿಸಲು ಆದೇಶ ನೀಡಲಾಗಿದೆ. ನೋಂದಣಿಯ ಬಳಿಕ ಖರೀದಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬಜೆಟ್‌ ಘೋಷಣೆಯ ಯೋಜನೆಗಳ ಬಗ್ಗೆ ಇವತ್ತು ಕೂಡಾ ಸಭೆ ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನಕ್ಕೆ ಹಲವು ಸಲಹೆ, ಸೂಚನೆಗಳನ್ನು ಮತ್ತು ಕಾಲಮಿತಿಯನ್ನು ಕೊಟ್ಟಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News