ಬ್ರಾಹ್ಮಣ ವ್ಯಕ್ತಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು: ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ

Update: 2022-05-05 13:05 GMT

ಮುಂಬೈ: ಬ್ರಾಹ್ಮಣನೊಬ್ಬನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತೇನೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ವಿಧಾನಸಭೆಯಲ್ಲಿ 145 ಶಾಸಕರ ಬೆಂಬಲವಿದ್ದರೆ ತೃತೀಯಲಿಂಗಿ ಅಥವಾ ಯಾವುದೇ ಜಾತಿಗೆ ಸೇರಿದ ವ್ಯಕ್ತಿ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದಾರೆ. 

ಜಲ್ನಾದಲ್ಲಿ ಮಂಗಳವಾರ ರಾತ್ರಿ ಪರಶುರಾಮ ಜಯಂತಿಯಂದು ಬ್ರಾಹ್ಮಣ ಸಮುದಾಯ ಆಯೋಜಿಸಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾವ್ ಸಾಹೇಬ್ ದಾನ್ವೆ ಬ್ರಾಹ್ಮಣ ಮುಖ್ಯಮಂತ್ರಿಯಾಗಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ರ್ಯಾಲಿಯಲ್ಲಿ ಉಪಸ್ಥಿತರಿದ್ದ ಅತಿಥಿಯೊಬ್ಬರು ಆಗ್ರಹಿಸಿದರು ಎಂದು ndtv.com ವರದಿ ಮಾಡಿದೆ. 

ಇದಕ್ಕೆ ಪ್ರತಿಕ್ರಿಯಿಸಿದ ದಾನ್ವೆ, "ನಾನು ಬ್ರಾಹ್ಮಣರನ್ನು ಕಾರ್ಪೊರೇಟರ್‌ಗಳಾಗಿ ಅಥವಾ ನಾಗರಿಕ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ನೋಡಲು ಬಯಸುವುದಿಲ್ಲ, ಬ್ರಾಹ್ಮಣರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸಿದ್ದೇನೆ. ರಾಜಕೀಯಕ್ಕೆ ಜಾತೀಯತೆ ಬಂದಿದ್ದು, ಅದನ್ನು ಕಡೆಗಣಿಸುವಂತಿಲ್ಲ. ಆದರೆ ಸಮುದಾಯಗಳನ್ನು ಒಗ್ಗೂಡಿಸಬಲ್ಲ ನಾಯಕರಿರಬೇಕು ಎಂದು ಅವರು ಹೇಳಿದ್ದಾರೆ.


ಗುರುವಾರ, ದಾನ್ವೆ ಅವರ ಹೇಳಿಕೆಗಳ ಕುರಿತು ವರದಿಗಾರರು ಮುಂಬೈನಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಕೇಳಿದಾಗ,  “145 ಶಾಸಕರ ಬಹುಮತ ಗಳಿಸುವ  ಮೂಲಕ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ತೃತೀಯಲಿಂಗಿ (ಟ್ರಾನ್ಸ್ಜೆಂಡರ್) ಅಥವಾ ಯಾವುದೇ ಜಾತಿ ಮತ್ತು ಧರ್ಮದ ವ್ಯಕ್ತಿ ಅಥವಾ ಯಾವುದೇ ಮಹಿಳೆ ಮುಖ್ಯಮಂತ್ರಿಯಾಗಬಹುದು " ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News