ತಿರುವಿಗೆ ಬಂದು ನಿಂತ ರಾಜ್ಯ ರಾಜಕಾರಣ!

Update: 2022-05-06 04:46 GMT

ರಾಜ್ಯದಲ್ಲಿ ಸಂಪುಟ ಪುನಾರಚನೆ ಮತ್ತು ಮುಖ್ಯಮಂತ್ರಿಯ ಬದಲಾವಣೆಗಳ ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಸಂಪುಟ ವಿಸ್ತರಣೆಗಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡದ ಮೇಲೆ ಒತ್ತಡಗಳು ಬೀಳುತ್ತಿವೆ. ಆದರೆ ವರಿಷ್ಠರ ಅನುಮತಿಯಿಲ್ಲದೆ ಸಂಪುಟ ವಿಸ್ತರಣೆ ಅಸಾಧ್ಯದ ಮಾತು. ಈ ಹಿಂದೆಲ್ಲ ರಾಜ್ಯ ಬಿಜೆಪಿಯ ನಿಯಂತ್ರಣ ಶೇ. 50ರಷ್ಟು ಯಡಿಯೂರಪ್ಪ ಅವರ ಕೈಯಲ್ಲಿತ್ತು. ಆದರೆ ಮೋದಿ ಯುಗ ಆರಂಭವಾದ ಬಳಿಕ ಯಡಿಯೂರಪ್ಪ ಅವರು ಪಕ್ಷದ ನಿಯಂತ್ರಣವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಇಡೀ ಸರಕಾರ ಕೇಂದ್ರದ ವರಿಷ್ಠರ ಜೀತದಾಳಾಗಿ ಬದಲಾಗಿದೆ. ಮುಖ್ಯಮಂತ್ರಿಯನ್ನೇ ಬದಲಾಯಿಸಬೇಕು ಎನ್ನುವ ಒತ್ತಡವೂ ಪಕ್ಷದೊಳಗಿಂದ ಕೇಳಿ ಬರುತ್ತಿದೆ. ಇದೀಗ ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಪಕ್ಷದೊಳಗೆ ಮಹತ್ತರ ಬದಲಾವಣೆ ನಡೆಯಲಿದೆ ಎನ್ನುವ ವದಂತಿಗಳಿವೆ. ಬೊಮ್ಮಾಯಿಯವರನ್ನು ಕೆಳಗಿಳಿಸುವುದಕ್ಕೆ ಯಡಿಯೂರಪ್ಪ ಅವಕಾಶ ಕೊಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಇದೇ ಸಂದರ್ಭದಲ್ಲಿ ಚುನಾವಣೆಯ ಹೊತ್ತಿಗೆ ಬಿಜೆಪಿಯ ಚುಕ್ಕಾಣಿಯನ್ನು ಸಂಪೂರ್ಣ ತನ್ನ ಕೈಗೆ ತೆಗೆದುಕೊಳ್ಳಲು ಆರೆಸ್ಸೆಸ್ ಸಂಚು ನಡೆಸಿದೆ. ಹಳೆಯ ತಲೆಗಳನ್ನೆಲ್ಲ ಕಸದ ಬುಟ್ಟಿಗೆ ಹಾಕಿ, ಹೊಸ ಮಿಡಿನಾಗರಗಳನ್ನು ಪಕ್ಷದ ಮುನ್ನೆಲೆಗೆ ತರುವುದು ಆರೆಸ್ಸೆಸ್‌ನ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರಕಾರದಲ್ಲಿ ನಡೆಯುವ ಬದಲಾವಣೆಗಳು ಭವಿಷ್ಯದ ರಾಜ್ಯ ರಾಜಕೀಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಲಿದೆ.

ಇಷ್ಟಕ್ಕೂ ಚುನಾವಣೆಗಿರುವುದು ಒಂದೇ ವರ್ಷ. ಆರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೆಲವು ತಿಂಗಳು ರಾಜ್ಯವನ್ನು ಆಳಿತು. ಇದಾದ ಬಳಿಕ ನಡೆದ 'ಕುದುರೆ ವ್ಯಾಪಾರ'ದ ಮೂಲಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ಅಧಿಕಾರ ಹಿಡಿದ ಒಂದಿಷ್ಟು ತಿಂಗಳಾಗುವಷ್ಟರಲ್ಲಿ ಯಡಿಯೂರಪ್ಪರನ್ನು ಬದಲಿಸಿ ಬೊಮ್ಮಾಯಿಯವರನ್ನು ಅಧಿಕಾರಕ್ಕೇರಿಸಲಾಯಿತು. ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಮೂರು ಮುಖ್ಯಮಂತ್ರಿಯನ್ನು ಕಂಡಿತಾದರೂ, ಅವರ ಮೂಲಕ ರಾಜ್ಯಕ್ಕಾದ ಲಾಭವೇನು? ಒಂದು ಸರಕಾರ ಐದು ವರ್ಷ ಪೂರ್ಣಗೊಳಿಸಲು ಅವಕಾಶ ನೀಡಿದಾಗ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ವರ್ಷಕ್ಕೊಮ್ಮೆ ಮುಖ್ಯಮಂತ್ರಿ, ಸರಕಾರ ಬದಲಾದರೆ ರಾಜ್ಯದ ಸ್ಥಿತಿ ಏನಾಗಬೇಕು? ಒಬ್ಬ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಆಡಳಿತದ ಆಳ ಅಗಲ ಅರಿತು ಇನ್ನೇನು ರಾಜ್ಯವನ್ನು ಮುನ್ನಡೆಸಬೇಕು ಎನ್ನುವಷ್ಟರಲ್ಲಿ ಅವರನ್ನು ಕೆಳಗಿಳಿಸಿ ಮತ್ತೊಬ್ಬ ಮುಖ್ಯಮಂತ್ರಿಯನ್ನು ಅಧಿಕಾರಕ್ಕೇರಿಸಲಾಗುತ್ತದೆ. ಹೊಸದಾಗಿ ನೇಮಕವಾದ ಮುಖ್ಯಮಂತ್ರಿ ಮತ್ತೆ ಶುರುವಿನಿಂದಲೇ ಎಲ್ಲವನ್ನು ಆರಂಭಿಸಬೇಕು. ಇಂತಹ ಸಂದರ್ಭವನ್ನು ಅಧಿಕಾರಶಾಹಿ ವ್ಯವಸ್ಥೆ ತಮಗೆ ಪೂರಕವಾಗಿ ಬಳಸಿಕೊಳ್ಳುತ್ತದೆ. ಇಂತಹ ಸರಕಾರ ಅಧಿಕಾರಶಾಹಿಯ ಕೈಗೊಂಬೆಯಾಗುವುದು ಅನಿವಾರ್ಯ.

ಭ್ರಷ್ಟಾಚಾರದ ಆರೋಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಏಕಾಏಕಿ ಕೆಳಗೆ ಇಳಿಸಲಾಯಿತು. ಯಡಿಯೂರಪ್ಪರ ಬದಲಾವಣೆ ರಾಜ್ಯದ ಅಗತ್ಯವಂತೂ ಆಗಿರಲೇ ಇಲ್ಲ. ಬಿಜೆಪಿಯೊಳಗಿನ ಭಿನ್ನಮತೀಯರ ತುರ್ತು ಅಗತ್ಯವಾಗಿತ್ತು. ಯಡಿಯೂರಪ್ಪ ಅವರ ಪುತ್ರ ತನ್ನ ತಂದೆಯ ಪ್ರಭಾವ ಬಳಸಿ ಬೆಳೆಯುತ್ತಿರುವುದು ಬಿಜೆಪಿಯೊಳಗಿರುವ ಒಂದು ಗುಂಪಿನೊಳಗೆ ಅಭದ್ರತೆಯನ್ನು ಸೃಷ್ಟಿಸಿತ್ತು. ಇಲ್ಲಿ ಭ್ರಷ್ಟಾಚಾರ ನೆಪ ಮಾತ್ರ. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಾಕ್ಷಣ ಭ್ರಷ್ಟಾಚಾರ ಇಳಿಕೆಯಾಗುತ್ತದೆ ಎಂದು ಕೆಲವರು ನಂಬಿದ್ದರು. ಆದರೆ ಯಡಿಯೂರಪ್ಪ ಅವರಿಗಿಂತ ದುರ್ಬಲ ಮುಖ್ಯಮಂತ್ರಿಯೊಬ್ಬರನ್ನು ನೇಮಕ ಮಾಡಲಾಯಿತು. ಆವರೆಗೆ ಭ್ರಷ್ಟಾಚಾರಕ್ಕಷ್ಟೇ ಸುದ್ದಿಯಾಗಿದ್ದ ಕರ್ನಾಟಕ, ಕೋಮುಗಲಭೆಗಳಿಗಾಗಿ ವಿಶ್ವ ಮಟ್ಟದಲ್ಲಿ ಸುದ್ದಿಯಾಯಿತು. ಹಿಜಾಬ್, ಹಲಾಲ್ ಕಟ್, ಧ್ವನಿವರ್ಧಕ ಎಂಬಿತ್ಯಾದಿ ಅನಗತ್ಯ ವಿಷಯಗಳನ್ನು ಮುಂದಿಟ್ಟು ಕರ್ನಾಟಕದ ಶಾಂತಿಯನ್ನು ಸಂಪೂರ್ಣವಾಗಿ ಕೆಡಿಸಲಾಯಿತು. ಮುಖ್ಯಮಂತ್ರಿಯ ವೌನ ದುಷ್ಕರ್ಮಿಗಳಿಗೆ ಇನ್ನಷ್ಟು ಕುಮ್ಮಕ್ಕನ್ನು ನೀಡಿತು. ರಾಜ್ಯ ಶೇ. 40 ಕಮಿಷನ್‌ಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಬಿಜೆಪಿಯೊಳಗಿನ ಹಿರಿಯ ನಾಯಕ ಈ ಶ್ವರಪ್ಪ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಈಗ ಮತ್ತೆ ಬೊಮ್ಮಾಯಿಯವರನ್ನು ಇಳಿಸುವ ಮಾತುಗಳು ಕೇಳಿ ಬರುತ್ತಿದೆ. ಹಾಗೆಯೇ ಹಲವರನ್ನು ಬದಲಿಸಿ ಆ ಜಾಗಕ್ಕೆ ಹೊಸಬರನ್ನು ತುಂಬುವ ಪ್ರಯತ್ನ ನಡೆಯುತ್ತಿದೆ. ಈ ಬದಲಾವಣೆಯನ್ನೂ ನಾಡಿನ ಜನರು ಬಯಸಿಯೇ ಇಲ್ಲ. ಅವರು ಸರಕಾರದ ಮೇಲೆ ಸಂಪೂರ್ಣ ಭರವಸೆಯನ್ನು ಕಳೆದುಕೊಂಡಿದ್ದಾರೆ. ಯಾರು ಬಂದರೂ ಏನು ಬದಲಾವಣೆಯಾಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಇರುವ ನೆಮ್ಮದಿಯನ್ನು ಕೆಡಿಸದೇ ಇದ್ದರೆ ಅಷ್ಟೇ ಸಾಕು ಎನ್ನುವುದು ಜನಸಾಮಾನ್ಯರ ನಿರೀಕ್ಷೆಯಾಗಿದೆ.

ಒಂದಂತೂ ಸತ್ಯ. ಮತ್ತೆ ಸರಕಾರದಲ್ಲಿ ಮಹತ್ತರ ಬದಲಾವಣೆಗಳಾದರೆ, ಬಿಜೆಪಿಯೊಳಗಿರುವ ಭಿನ್ನಮತ ಇನ್ನಷ್ಟು ವಿಕೋಪಕ್ಕೆ ತಿರುಗಿ ರಾಜ್ಯದ ಅಳಿದುಳಿದ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಬೀರಲಿದೆ. ಸಚಿವರು, ಶಾಸಕರೆಲ್ಲ ನಾಡಿನ ನೆಮ್ಮದಿಯನ್ನು ಮರೆತು, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗುಂಪುಗಾರಿಕೆಗಳನ್ನು ನಡೆಸಬಹುದು. ಈಗಾಗಲೇ ಯಡಿಯೂರಪ್ಪ ಬಣಕ್ಕೆ ಸಾಕಷ್ಟು ಅವಮಾನಗಳಾಗಿವೆ. ಮುಂದಿನ ಚುನಾವಣೆಯ ಬಳಿಕ ತನ್ನನ್ನೂ ತನ್ನ ಪುತ್ರನನ್ನೂ ಬಿಜೆಪಿ ಸಂಪೂರ್ಣ ಮೂಲೆಗುಂಪು ಮಾಡುವ ಸಣ್ಣ ಸೂಚನೆ ಸಿಕ್ಕಿದರೂ ಯಡಿಯೂರಪ್ಪ ಗುಂಪು ಚುನಾವಣೆಯ ಬಳಿಕ ಬಿಜೆಪಿಯಿಂದ ಸಿಡಿದು ಪ್ರತ್ಯೇಕ ಗುಂಪಾಗಲಿದೆ. ಇತ್ತ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆಯೂ ಅಧಿಕಾರಕ್ಕಾಗಿ ಶೀತಲ ಸಮರ ನಡೆಯುತ್ತಿದೆ. ಸಿದ್ದರಾಮಯ್ಯ ವರ್ಚಸ್ಸು ಕಾಂಗ್ರೆಸ್‌ಗೆ ಅಗತ್ಯವಿದೆ. ಆದರೆ ಡಿಕೆಶಿ ಅವರ ಬೆನ್ನಿಗಿರುವ ಹಣ ಮತ್ತು ಜನ ಇಲ್ಲದೆ ಇದ್ದರೆ ಕಾಂಗ್ರೆಸ್ ಚುನಾವಣೆಯನ್ನು ಗೆಲ್ಲುವುದು ಕಷ್ಟ. ಮುಖ್ಯಮಂತ್ರಿಯಾಗುವ ಅವಕಾಶವನ್ನು ಈ ಬಾರಿ ಡಿಕೆಶಿ ಕೈ ಬಿಡುತ್ತಾರೆ ಎಂದೆನಿಸುವುದಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರನ್ನೇ ಕೇಂದ್ರ ವರಿಷ್ಠರು ಆಯ್ಕೆ ಮಾಡಿದ್ದೇ ಆದರೆ ಡಿಕೆಶಿ ಬಣವೂ ಕಾಂಗ್ರೆಸ್‌ನಿಂದ ಸಿಡಿಯುವ ಸಾಧ್ಯತೆಗಳಿವೆ. ಉಳಿದಂತೆ ಕುಮಾರಸ್ವಾಮಿ ತಂಡ ಯಾರ ಜೊತೆಗಾದರೂ ಹೊಂದಾಣಿಕೆಗೆ ಸಿದ್ಧವಾಗಿಯೇ ಕುಳಿತಿದೆ. ಅವರೀಗಾಗಲೇ ಯಡಿಯೂರಪ್ಪ ಮತ್ತು ಡಿಕೆಶಿ ಬಣದ ಜೊತೆಗೆ ಸಂಬಂಧ ಕುದುರಿಸಿ ಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಷ್ಟ್ರೀಯ ಪಕ್ಷಗಳಿಂದ ಸಿಡಿದ ಪ್ರಾದೇಶಿಕ ಗುಂಪುಗಳೇ ಜೊತೆಯಾಗಿ ಸರಕಾರ ರಚಿಸಿ ಹೊಸ ಇತಿಹಾಸ ನಿರ್ಮಿಸುವ ಸಾಧ್ಯತೆಗಳಿವೆ.

 ಮುಂದಿನ ಚುನಾವಣೆಯಲ್ಲಿ ಮೋದಿಯ ವರ್ಚಸ್ಸು ಕೆಲಸ ಮಾಡುವ ಸಾಧ್ಯತೆಗಳು ರಾಜ್ಯದಲ್ಲಿ ತೀರಾ ಕಡಿಮೆ. ಅದೆಷ್ಟು ಅಸಹನೆ, ದ್ವೇಷಗಳನ್ನು ಹರಡಿದರೂ ಜನರು ದೈನಂದಿನ ಬದುಕಿನಲ್ಲಿ ದಣಿದು ಹೋಗಿದ್ದಾರೆ. ಮುಂದಿನ ಒಂದು ವರ್ಷದ ಕಾಲಾವಧಿ ಬಿಜೆಪಿಯ ಪಾಲಿಗೆ ಅತ್ಯಮೂಲ್ಯವಾದುದು. ಈ ಸಂದರ್ಭದಲ್ಲಿ ಬಿಜೆಪಿಯೊಳಗೆ ಒಳಜಗಳಗಳು ತೀವ್ರವಾದರೆ ಅದರ ಪರಿಣಾಮ ಖಂಡಿತವಾಗಿಯೂ ಮುಂದಿನ ಚುನಾವಣಾ ಫಲಿತಾಂಶದ ಮೇಲೆ ಬೀಳುತ್ತದೆ. ರಾಜ್ಯ ರಾಜಕಾರಣದ ದಿಕ್ಕು ಬದಲಾಗುವುದಕ್ಕೆ ಅದಷ್ಟು ಧಾರಾಳ ಸಾಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News