×
Ad

ಜಹಾಂಗೀರಪುರಿಯಲ್ಲಿ ಬುಲ್ಡೋಝರ್‌ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ: ಸುಪ್ರೀಂ ಕೋರ್ಟ್‌ಗೆ ಬೃಂದಾ ಕಾರಟ್‌ ಅಫಿಡವಿಟ್

Update: 2022-05-06 22:02 IST

ಹೊಸದಿಲ್ಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕಿ ಬೃಂದಾ ಕಾರಟ್ ಅವರು ಜಹಾಂಗೀರ್‌ಪುರಿಯಲ್ಲಿ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌ ನಡೆಸಿರುವ ಧ್ವಂಸ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು livelaw.com ಶುಕ್ರವಾರ ವರದಿ ಮಾಡಿದೆ.

ಅತಿಕ್ರಮಣಗಳನ್ನು ತೆಗೆಯುವ ನೆಪದಲ್ಲಿ ಈ ಪ್ರದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಅಧಿಕಾರಿಗಳು ಬುಲ್ಡೋಜರ್‌ಗಳನ್ನು ಬಳಸಿದ್ದಾರೆ ಎಂದು ಕಾರಟ್ ಹೇಳಿದ್ದಾರೆ.

"ಇದು [ಉತ್ತರ ದಿಲ್ಲಿ] ಮುನ್ಸಿಪಲ್ ಕಾರ್ಪೊರೇಶನ್ ಅನ್ನು ಆಳುವ ರಾಜಕೀಯ ಪಕ್ಷದ ದುರುದ್ದೇಶಪೂರಿತ ಕ್ರಮವಾಗಿದೆ" ಎಂದು ಕಾರಟ್ ಬಿಜೆಪಿ ವಿರುದ್ಧ ಆರೋಪಿಸಿದ್ದು,  “ಕಾನೂನು ಮತ್ತು ಸಂವಿಧಾನವನ್ನು ಬುಲ್ಡೋಝರ್ ಮಾಡಲಾಗಿದೆ. ಕನಿಷ್ಠ ಸುಪ್ರೀಂ ಕೋರ್ಟ್ ಮತ್ತು ಅದರ ಆದೇಶವನ್ನು ಬುಲ್ಡೋಝರ್ ಮಾಡಬಾರದು." ಎಂದು ಮನವಿ ಮಾಡಿದ್ದಾರೆ. 

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಏಪ್ರಿಲ್ 20 ರಂದು ಜಹಾಂಗೀರ್ಪುರಿಯಲ್ಲಿ ಒಂದು ಗಂಟೆಗಳ ಕಾಲ ನಡೆದ ನೆಲಸಮ ಕಾರ್ಯಾಚರಣೆಯನ್ನು ನಿಲ್ಲಿಸುವಲ್ಲಿ ಬೃಂದಾ ಕಾರಟ್ ಪ್ರಮುಖ ಪಾತ್ರ ವಹಿಸಿದ್ದರು.

 ಜಹಾಂಗಿರ್‌ಪುರಿಯಲ್ಲಿ ಕೋಮು ಹಿಂಸಾಚಾರಕ್ಕೆ ತುತ್ತಾದ ನಾಲ್ಕು ದಿನಗಳ ಬಳಿಕ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.  
ಕಟ್ಟಡಗಳನ್ನು ಕೆಡವುವ ಮೂಲಕ "ಆಪಾದಿತ ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ" ಬಿಜೆಪಿಯ ದಿಲ್ಲಿ ಘಟಕದ ಅಧ್ಯಕ್ಷರು ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಅವರಿಗೆ ಸೂಚಿಸಿದ್ದಾರೆ ಎಂದು ಕಾರಟ್ ತಮ್ಮ ಅರ್ಜಿಯಲ್ಲಿ ವಾದಿಸಿರುವುದಾಗಿ ಲೈವ್ ಲಾ ವರದಿ ಮಾಡಿದೆ.
 
ನಿಯಮಾನುಸಾರ ಪೂರ್ವ ಸೂಚನೆ ನೀಡದೇ ನೆಲಸಮವನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಅಧಿಕಾರಿಗಳು ಇದೇ ರೀತಿಯ ಧ್ವಂಸ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದನ್ನು ತಡೆಯಬೇಕೆಂದು ಕಾರಟ್ ನ್ಯಾಯಾಲಯವನ್ನು ಕೋರಿದ್ದು,  ಜಹಾಂಗೀರ್‌ಪುರಿ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News