ಮುಚ್ಚಿಟ್ಟ ಗಾಯಗಳು ಒಣಗುವುದಿಲ್ಲ!

Update: 2022-05-07 04:18 GMT

ಗಾಯಗಳಿಗೆ ಔಷಧಿ ಹಚ್ಚಬೇಕಾದರೆ ಮೊತ್ತ ಮೊದಲು ಗಾಯಗಳಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಅದಕ್ಕೆ ಬೇಕಾದ ಔಷಧಿಯನ್ನು ಗುರುತಿಸಲು ಸಾಧ್ಯ. ಗಾಯಗಳನ್ನು ಮುಚ್ಚಿಟ್ಟರೆ ಅದು ನಿಧಾನಕ್ಕೆ ಕೊಳೆತು ಇನ್ನಷ್ಟು ಭೀಕರ ಪರಿಣಾಮಗಳಿಗೆ ಕಾರಣವಾಗುತ್ತದೆ. ಸದ್ಯಕ್ಕೆ ಭಾರತ ಮೈತುಂಬಾ ಗಾಯಗಳನ್ನು ಹೊತ್ತುಕೊಂಡಿದೆ. ಅದನ್ನು ವಿಶ್ವ ಬೆರಗಾಗಿ ನೋಡುತ್ತಿದ್ದರೂ, ಭಾರತ ತನ್ನ ಮೈಮೇಲೆ ಗಾಯಗಳೇ ಇಲ್ಲ ಎಂದು ಸಮರ್ಥಿಸಿ ಕೊಳ್ಳುತ್ತಿದೆ. ನೋಟು ನಿಷೇಧ ಆರ್ಥಿಕತೆಯ ಮೇಲೆ ಮಾಡಿದ ಭಾರೀ ಗಾಯಗಳು , ಜಿಎಸ್‌ಟಿ ವ್ಯಾಪಾರಗಳ ಮೇಲೆ ಮಾಡುತ್ತಿರುವ ಗಾಯಗಳು, ಕೊರೋನ ಲಾಕ್‌ಡೌನ್ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ಮಾಡುತ್ತಿರುವ ಆಳವಾದ ಗಾಯಗಳನ್ನು ಭಾರತ ಮುಚ್ಚಿಟ್ಟು ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೊರಟಿದೆ. ಆದರೆ ಒಂದಲ್ಲ ಒಂದು ದಿನ ಈ ಗಾಯಗಳು ತೀರಾ ಉಲ್ಬಣಿಸಿ ಅದಕ್ಕಾಗಿ ನಾವು ಬಹುದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ.

ಇತ್ತೀಚೆಗೆ ಭಾರತಕ್ಕೆ ಭೇಟಿನೀಡಿದ ಐರೋಪ್ಯ ಒಕ್ಕೂಟದ ನಿಯೋಗವೊಂದರ ಜೊತೆಗೆ ಮಾತುಕತೆ ನಡೆಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ''ಕಳೆದ 7-8 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಮು ಹಿಂಸಾಚಾರದ ಘಟನೆಗಳು ಸಂಭವಿಸಿಲ್ಲ'' ಎಂದು ಮಾಹಿತಿ ನೀಡಿದ್ದರು. ಈ ನಿಯೋಗದಲ್ಲಿ ಐರೋಪ್ಯ ಒಕ್ಕೂಟದ ವಿಶೇಷ ಮಾನವಹಕ್ಕುಗಳ ಪ್ರತಿನಿಧಿ ಈಮಾನ್ ಗಿಲ್‌ಮೋರ್ ಕೂಡ ಉಪಸ್ಥಿತರಿದ್ದರು. ಭಾರತದಲ್ಲಿನ ಮಾನವಹಕ್ಕುಗಳ ಸ್ಥಿತಿಗತಿಗಳ ಬಗ್ಗೆ ಆರು ಸದಸ್ಯರ ಐರೋಪ್ಯ ಒಕ್ಕೂಟದ ನಿಯೋಗದ ಜೊತೆಗೆ ಚರ್ಚೆ ನಡೆಸುತ್ತಿದ್ದಾಗ ಅವರು ಈ ಮಾತುಗಳನ್ನು ಹೇಳಿದ್ದರು.

 ''ಅಲ್ಲಲ್ಲಿ ಕೆಲವು ಘಟನೆಗಳು ನಡೆದಿವೆ. ಈ ಪ್ರಕರಣಗಳಲ್ಲಿ, ಮೋದಿ ಸರಕಾರವು ಮತ, ಜಾತಿ ಅಥವಾ ಸಮುದಾಯವನ್ನು ಪರಿಗಣಿಸದೆ, ಹಿಂಸಾಚಾರವನ್ನು ಹುಟ್ಟು ಹಾಕಿದವರ ವಿರುದ್ಧ ಪ್ರಬಲ ಹಾಗೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ'' ಎಂಬುದಾಗಿ ನಖ್ವಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದಲ್ಲಿ ಆಗಿರುವ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿ 108 ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಎಪ್ರಿಲ್ 26ರಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದ ಬಗ್ಗೆ ನಿಯೋಗವು ಆತಂಕ ವ್ಯಕ್ತಪಡಿಸಿದಾಗ ನಖ್ವಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯವಾಗಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ 'ಅಕ್ರಮ ಕಟ್ಟಡ'ಗಳನ್ನು ಕೆಡವಲು ಆಡಳಿತಾರೂಢ ಪಕ್ಷವು ಇತ್ತೀಚೆಗೆ ನಡೆಸಿದ ಧ್ವಂಸ ಕಾರ್ಯಾಚರಣೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಈ ದೇಶದ ಅಖಂಡತೆಗೆ, ಅಭಿವೃದ್ಧಿಗೆ, ಭವಿಷ್ಯಕ್ಕೆ ಅತ್ಯಂತ ದೊಡ್ಡ ಸವಾಲಾಗಿರುವ ಕೋಮುಗಲಭೆಗಳು ದೇಶದಲ್ಲಿ ನಡೆದೇ ಇಲ್ಲ ಮತ್ತು ನಡೆದ ಗಲಭೆಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಸರಕಾರ ನಂಬಿರುವಾಗ, ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಂದ ಆಗುತ್ತಿರುವ ಅನಾಹುತಗಳಿಗೆ ಸರಕಾರದಿಂದ ಪರಿಹಾರ ನಿರೀಕ್ಷಿಸುವುದು ಸಾಧ್ಯವೆ? ಸರಕಾರದ ಮಾತಿನಲ್ಲಿ ಒಂದಿಷ್ಟಾದರೂ ನಿಜವಿದೆಯೆ? 2020 ಫೆಬ್ರವರಿ 23 ಮತ್ತು 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ ನಡೆದ ಸಂಘರ್ಷ. ಈ ಹಿಂಸಾಚಾರದಲ್ಲಿ 52 ಮಂದಿ ಮೃತಪಟ್ಟಿದ್ದಾರೆ ಮತ್ತು 545 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಸ್ವತಃ ಸರಕಾರ ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. 52 ಮಂದಿಯ ಸಾವಿಗೆ ಕಾರಣವಾದ, ಅದರಲ್ಲೂ ಅಲ್ಪಸಂಖ್ಯಾತರ ಮೇಲೆ ನಡೆದ ಏಕಮುಖ ದಾಳಿ ಸರಕಾರಕ್ಕೆ ದೊಡ್ಡಮಟ್ಟದ ಕೋಮುಗಲಭೆಯೆಂದು ಅನ್ನಿಸಿಲ್ಲ ಎಂದಾಯಿತು. ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ 755 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಪೈಕಿ 62 ಗಂಭೀರ ಪ್ರಕರಣಗಳ ತನಿಖೆಯನ್ನು ಕ್ರೈಮ್ ಬ್ರಾಂಚ್‌ನಲ್ಲಿರುವ ವಿಶೇಷ ತನಿಖಾ ತಂಡಗಳು ಮಾಡಿವೆ. ಗಲಭೆಗಳ ಹಿಂದಿನ ಕ್ರಿಮಿನಲ್ ಪಿತೂರಿಯನ್ನು ಬಯಲಿಗೆಳೆಯುವುದಕ್ಕಾಗಿ ಒಂದು ಪ್ರಕರಣದ ತನಿಖೆಯನ್ನು ವಿಶೇಷ ಘಟಕ ಮಾಡಿದೆ. ಉಳಿದ 693 ಪ್ರಕರಣಗಳ ವಿಚಾರಣೆಯನ್ನು ಈಶಾನ್ಯ ದಿಲ್ಲಿ ಪೊಲೀಸರು ನಡೆಸಿದ್ದಾರೆ. ಒಟ್ಟು 1,829 ಮಂದಿಯನ್ನು ಬಂಧಿಸಲಾಗಿದೆ ಮತ್ತು 353 ಪ್ರಕರಣಗಳಲ್ಲಿ ವಿಚಾರಣೆಗಾಗಿ ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂಬುದಾಗಿ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿರುವ ಕಿಶನ್ ರೆಡ್ಡಿ 2021 ಮಾರ್ಚ್ 10ರಂದು ರಾಜ್ಯಸಭೆಗೆ ತಿಳಿಸಿದ್ದಾರೆ. ಈ ಗಲಭೆಯಲ್ಲಿ ಸಂತ್ರಸ್ತರೇ ಆರೋಪಿಗಳಾಗಿ ಮತ್ತೊಮ್ಮೆ ಶಿಕ್ಷೆಗೊಳಗಾಗುತ್ತಿದ್ದಾರೆ ಮತ್ತು ತನಿಖೆ ನಡೆಸುತ್ತಿರುವ ಪೊಲೀಸರೇ ಈ ಗಲಭೆಯಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಇನ್ನೊಂದು ಗಂಭೀರ ಆರೋಪ. ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ದೇಶಾದ್ಯಂತ ಸರಕಾರದ ನೇತೃತ್ವದಲ್ಲೇ ನಡೆದ ಹತ್ಯೆಗಳನ್ನು ಇಲ್ಲಿ ಕೋಮುಗಲಭೆಗಳ ಪಟ್ಟಿಗೆ ಸೇರಿಸುವಂತಿಲ್ಲ. ಆದರೆ ಅಂತಿಮವಾಗಿ, ಒಂದು ನಿರ್ದಿಷ್ಟ ಕೋಮನ್ನು ಉದ್ದೇಶಿಸಿಯೇ ಈ ಹಿಂಸಾಚಾರ ನಡೆದಿವೆ ಎನ್ನುವುದು ವಾಸ್ತವ. 2020 ಆಗಸ್ಟ್ 12ರಂದು, ಪ್ರವಾದಿ ಮುಹಮ್ಮದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಎನ್ನಲಾದ ಸಂದೇಶವೊಂದನ್ನು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಹಿಂಸಾಚಾರ ನಡೆಯಿತು. ಗಲಭೆಯಲ್ಲಿ ಮೂವರು ಪ್ರಾಣ ಕಳೆದುಕೊಂಡರು ಮತ್ತು 60 ಮಂದಿ ಗಾಯಗೊಂಡರು. ನಗರದ ಎರಡು ಪೊಲೀಸ್ ಠಾಣೆಗಳು ಈ ಗುಂಪು ಹಿಂಸಾಚಾರದ ಗುರಿಯಾದವು.ಹಿಂಸಾಚಾರದಲ್ಲಿ ಕೆಲವು ಪತ್ರಕರ್ತರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಕೆಲವರು ಉದ್ರಿಕ್ತ ಗುಂಪುಗಳ ಆಕ್ರೋಶಕ್ಕೆ ಗುರಿಯಾದರೆ, ಹಿಂಸಾಚಾರವನ್ನು ಚಿತ್ರೀಕರಿಸುತ್ತಿದ್ದ ಜನರ ಮೇಲೆ ಪೊಲೀಸರು ದಾಳಿ ನಡೆಸಿದರು ಎಂಬುದಾಗಿ 'ದ ನ್ಯೂಸ್ ಮಿನಿಟ್' ವರದಿ ಮಾಡಿದೆ.

ಇತ್ತೀಚೆಗೆ, ಅಂದರೆ ಎಪ್ರಿಲ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ನಡೆದ ರಾಮ ನವಮಿ ಮತ್ತು ಹನುಮಾನ್ ಜಯಂತಿ ಮೆರವಣಿಗೆಗಳ ವೇಳೆ ಹಿಂದೂಗಳು ಮತ್ತು ಮುಸ್ಲಿಮರ ಗುಂಪುಗಳ ನಡುವೆ ಕೋಮು ಹಿಂಸಾಚಾರ ನಡೆಯಿತು. ಈ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟರು ಮತ್ತು ಹಲವಾರು ಮಂದಿ ಗಾಯಗೊಂಡರು. 2014 ಮತ್ತು 2020ರ ನಡುವಿನ ಅವಧಿಯಲ್ಲಿ ದೇಶದಲ್ಲಿ 5,415 ಕೋಮು ಗಲಭೆಗಳು ನಡೆದಿವೆ ಎಂಬುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಸಂಖ್ಯೆಗಳು ಹೇಳುತ್ತವೆ.

2014 ಮತ್ತು 2017ರ ನಡುವಿನ ಅವಧಿಯಲ್ಲಿ ಕೋಮು ಗಲಭೆಗಳಲ್ಲಿ 389 ಮಂದಿ ಮೃತಪಟ್ಟಿದ್ದಾರೆ ಮತ್ತು 8,890 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಮಾಹಿತಿಯಲ್ಲಿ ತಿಳಿಸಿದೆ. ಅದೇ ಕೊನೆ. ಆ ಬಳಿಕ, 'ಗಲಭೆಗಳಲ್ಲಿ ಸಂಭವಿಸಿದ ಸಾವು-ನೋವು'ಗಳ ಬಗ್ಗೆ ಯಾವಾಗ ಮಾಹಿತಿ ಕೇಳಿದರೂ ಕೇಂದ್ರ ಸರಕಾರ ನೀಡುತ್ತಿರುವ ಉತ್ತರ ಒಂದೇ: ''ಕೋಮು ಗಲಭೆಗಳೊಂದಿಗೆ ವ್ಯವಹರಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಕಾಪಿಡುವುದು ಸೇರಿದಂತೆ ಕಾನೂನು ಮತ್ತು ವ್ಯವಸ್ಥೆ ಪಾಲನೆಯ ಹೊಣೆಗಾರಿಕೆಯು ಸಂಬಂಧಪಟ್ಟ ರಾಜ್ಯ ಸರಕಾರಗಳದ್ದು''.

ಆದರೂ, ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಕೋಮು ಗಲಭೆ ಘಟನೆಗಳ ಒಟ್ಟು ಸಂತ್ರಸ್ತರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ದಾಖಲಿಸಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ, ಅಂದರೆ 2015ರಿಂದ 2020ರವರೆಗೆ 5,875 ಮಂದಿ ಕೋಮು ಗಲಭೆಗಳಿಗೆ ಬಲಿಯಾಗಿದ್ದಾರೆ. ಅದೂ ಅಲ್ಲದೆ, ಈ ಸಂಖ್ಯೆಯು ಕೊನೆಯ ವರ್ಷದಲ್ಲಿ ಶೇ.79.5ದಷ್ಟು ಜಿಗಿತವನ್ನು ಕಂಡಿದೆ. ಅಂದರೆ 2019ರಲ್ಲಿ ಕೋಮುಗಲಭೆಗಳಿಗೆ ಬಲಿಯಾದವರ ಸಂಖ್ಯೆ 593 ಆದರೆ, 2020ರಲ್ಲಿ ಈ ಸಂಖ್ಯೆ 1,065ಕ್ಕೆ ಜಿಗಿದಿದೆ.

 ಇವೆಲ್ಲವನ್ನೂ ಮುಚ್ಚಿಟ್ಟು ಭಾರತದಲ್ಲಿ ಕೋಮುಗಲಭೆಗಳು ನಡೆದೇ ಇಲ್ಲ ಎನ್ನುವ ಮೂಲಕ ಭಾರತದ ವರ್ಚಸ್ಸನ್ನು ಉಳಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಕೇಂದ್ರ ಸರಕಾರಕ್ಕೆ ಅರಿವಿರಬೇಕು. ಸುಳ್ಳುಗಳಿಂದ ಕಟ್ಟಿದ ಭಾರತದ ಬಣ್ಣ ಒಂದೇ ಮಳೆಗೆ ಕರಗಿ ಹೋಗಲಿದೆ. ಭಾರತದ ತೆರೆದ ಗಾಯಗ ಳನ್ನು ವಿಶ್ವ ಗಮನಿಸುತ್ತಿದೆ. ನಾವೆಷ್ಟೇ ಅದನ್ನು ಮುಚ್ಚಿಟ್ಟರೂ ಗಾಯದ ಆಳವನ್ನು ಮರೆಮಾಚುವಲ್ಲಿ ವಿಫಲರಾಗಿದ್ದೇವೆ. ಈ ಪ್ರಯತ್ನವನ್ನು ನಿಲ್ಲಿಸಿ, ದೇಶದ ಗಾಯಗಳಿಗೆ ಅವುಗಳಿಗೆ ಔಷಧಿ ಹಚ್ಚುವ ಬಗೆಯನ್ನು ಕಂಡುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News