ಕೆಪಿಎಸ್ಸಿ ನೇಮಕಾತಿಗೆ ಬಾಕಿ ಇರುವ ಹುದ್ದೆಗಳ ತಪ್ಪು ಮಾಹಿತಿ

Update: 2022-05-07 03:35 GMT

ಬೆಂಗಳೂರು: ಅಕ್ರಮಗಳ ಸ್ವರ್ಗ ಸೀಮೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗವು ಇದೀಗ 371 ಜೆ ಅಡಿಯಲ್ಲಿ ನೇರ ನೇಮಕಾತಿಗೆ ಬಾಕಿ ಇರುವ ಇಲಾಖೆವಾರು ನೀಡಿರುವ ಹುದ್ದೆಗಳ ಅಸಲಿ ಸಂಖ್ಯೆಯನ್ನೇ ಮುಚ್ಚಿಟ್ಟಿರುವುದು ಇದೀಗ ಬಹಿರಂಗವಾಗಿದೆ.

ಭಾರತದ ಸಂವಿಧಾನದ ಅನುಚ್ಛೇಧ 371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಗೆ ನೀಡಿರುವ ಇಲಾಖಾವಾರು ನೇರ ನೇಮಕಾತಿಗೆ ಬಾಕಿ ಇರುವ ಹುದ್ದೆಗಳ ಸಂಖ್ಯೆಯನ್ನು ಒದಗಿಸಿರುವ ಆಯೋಗವು 2,161 ಹುದ್ದೆಗಳ ಸಂಖ್ಯೆಯನ್ನೇ ಮುಚ್ಚಿಟ್ಟಿದೆ.

ವಿಕಾಸಸೌಧದ 3ನೇ ಮಹಡಿಯಲ್ಲಿ ಮೇ 7ರ ಇಂದು ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯ ಕಾರ್ಯಸೂಚಿ ಮತ್ತು ವಿಷಯ ಟಿಪ್ಪಣಿಯ ವಿವರಗಳು ‘the-file.in’ಗೆ ಲಭ್ಯವಾಗಿದೆ.

371(ಜೆ) ಅಡಿಯಲ್ಲಿ ಸ್ಥಳೀಯ ವೃಂದದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೆಋ ನೇಮಕಾತಿಗೆ ಬಾಕಿ ಇರುವ ಹುದ್ದೆಗಳ ಮಾಹಿತಿಯನ್ನು ಸಂಪುಟ ಉಪ ಸಮಿತಿಯು ವಿವಿಧ ಇಲಾಖೆಗಳಿಂದ ಪಡೆದಿದೆ. ಇದರ ಪ್ರಕಾರ ಗ್ರೂಪ್ ಎ ನಲ್ಲಿ 55, ಗ್ರೂಪ್ ಬಿ ಯಲ್ಲಿ 541, ಗ್ರೂಪ್ ಸಿ ಯಲ್ಲಿ 2,682 ಸೇರಿ ಒಟ್ಟಾರೆ 3,447 ಹುದ್ದೆಗಳು ನೇರ ನೇಮಕಾತಿ ಪ್ರಕ್ರಿಯೆಗೆ ಬಾಕಿ ಇದೆ. ಆದರೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ವಿವಿಧ ಹಂತಗಳಲ್ಲಿ 1,386 ಹುದ್ದೆಳು ನೇರ ನೇಮಕಾತಿಗೆ ಬಾಕಿ ಇವೆ.

‘ವಿವಿಧ ಇಲಾಖೆಗಳು ನೀಡಿರುವ ಮಾಹಿತಿಯಂತೆ ಒಟ್ಟು 3,447 ಹುದ್ದೆಗಳು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇರ ನೇಮಕಾತಿಗೆ ಬಾಕಿ ಇರುತ್ತದೆ. ವಿವಿಧ ಇಲಾಖೆಗಳು ನೀಡಿರುವ ಮಾಹಿತಿಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಹಿತಿಗೂ 2,161 ಹುದ್ದೆಗಳ ವ್ಯತ್ಯಾಸ ಕಂಡು ಬಂದಿರುತ್ತದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

371 (ಜೆ) ಅಡಿಯಲ್ಲಿ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಗ್ರೂಪ್ ಎ , ಬಿ ಮತ್ತು ಸಿ ಯಲ್ಲಿ ಒಟ್ಟು 408 ಹುದ್ದೆಗಳು ಬಾಕಿ ಇದ್ದರೆ ಕೆಪಿಎಸ್ಸಿಯು ಈ ಇಲಾಖೆಗೆ ಸಂಬಂಧಿಸಿದಂತೆ ನೇರ ನೇಮಕಾತಿಗೆ ಯಾವ ಹುದ್ದೆಗಳೂ ಇಲ್ಲ ಎಂದು ಮಾಹಿತಿ ಒದಗಿಸಿದೆ.

ಅದೇ ರೀತಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 182, ನಗರಾಭಿವೃದ್ಧಿ ಇಲಾಖೆಯಲ್ಲಿ 384, ಪ್ರಾಥಮಿಕ ಪ್ರೌಢಶಿಕ್ಷಣದಲ್ಲಿ 176, ಜಲಸಂಪನ್ಮೂಲ ಇಲಾಖೆಯಲ್ಲಿ 169, ಸಮಾಜ ಕಲ್ಯಾಣ ಇಲಾಖೆಯಲ್ಲಿ 189, ಕಾನೂನು ಇಲಾಖೆಯಲ್ಲಿ 121, ಒಳಾಡಳಿತ ಇಲಾಖೆಯಲ್ಲಿ 70 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇದ್ದರೆ ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿ ಪ್ರಕಾರ ಈ ಇಲಾಖೆಗಳಲ್ಲಿ ಒಂದೇ ಒಂದು ಹುದ್ದೆಯು ಖಾಲಿ ಇಲ್ಲ ಎಂದು ಮಾಹಿತಿ ಒದಗಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಕೇವಲ ಆರೇ ಆರು ಇಲಾಖೆಗಳಲ್ಲಿ ನೇರ ನೇಮಕಾತಿಗೆ ಬಾಕಿ ಇರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಪಿಎಸ್ಸಿ ನೀಡಿರುವ ಮಾಹಿತಿಯಂತೆ ಒಟ್ಟು 1,871 ಹುದ್ದೆಗಳ ವ್ಯತ್ಯಾಸವಿರುವುದು ಕಂಡು ಬಂದಿದೆ.

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 439 ಹುದ್ದೆಗಳು ಖಾಲಿ ಇವೆ ಎಂದು ಇಲಾಖೆಗಳು ಮಾಹಿತಿ ನೀಡಿದ್ದರೆ ಕೆಪಿಎಸ್ಸಿ ಲೆಕ್ಕದ ಪ್ರಕಾರ ಕೇವಲ 149 ಹುದ್ದೆಗಳಷ್ಟೇ ಬಾಕಿ ಇವೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 106 ಹುದ್ದೆಗಳು ಖಾಲಿ ಇದ್ದರೆ ಕೆಪಿಎಸ್ಸಿ ಪ್ರಕಾರ 25, ಸಹಕಾರ ಇಲಾಖೆಯಲ್ಲಿ 92 ಹುದ್ದೆಗಳು ಖಾಲಿ ಇದ್ದರೆ ಕೆಪಿಎಸ್ಸಿ ಪ್ರಕಾರ 5 ಹುದ್ದೆಗಳಷ್ಟೇ ಖಾಲಿ ಇವೆ. 11 ಇಲಾಖೆಗಳಲ್ಲಿ ಒಟ್ಟಾರೆ 2,508 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇದ್ದರೆ ಕೆಪಿಎಸ್ಸಿ ಪ್ರಕಾರ ಕೇವಲ 179 ಹುದ್ದೆಗಳಷ್ಟೇ ಬಾಕಿ ಇವೆ ಎಂದು ಮಾಹಿತಿ ಒದಗಿಸಿದೆ.

ಅದೇ ರೀತಿ ಸಾರಿಗೆ, ವಾಣಿಜ್ಯ ಕೈಗಾರಿಕೆ, ಸಿಬ್ಬಂದಿ ಆಡಳಿತ ಸುಧಾರಣೆ, ಅಲ್ಪಸಂಖ್ಯಾತರ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ನಾಗರಿಕ ಸರಬರಾಜು, ಕಂದಾಯ, ಇಂಧನ, ಮೂಲಸೌಲಭ್ಯ ಅಭಿವೃದ್ಧಿ, ರೇಷ್ಮೆ ಇಲಾಖೆಯಲ್ಲಿ ಒಟ್ಟು 248 ಹುದ್ದೆಗಳು ಖಾಲಿ ಇದ್ದರೂ ಕೆಪಿಎಸ್ಸಿಯು ಈ ಯಾವ ಇಲಾಖೆಗಳಲ್ಲೂ ಒಂದೇ ಒಂದು ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇಲ್ಲವೆಂದು ಮಾಹಿತಿ ಒದಗಿಸಿದೆ.

ಇದಲ್ಲದೆ ಆರ್ಥಿಕ, ಪಶುಸಂಗೋಪನೆ, ಕಾರ್ಮಿಕ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ, ಅರಣ್ಯ ಪರಿಸರ, ಪ್ರವಾಸೋದ್ಯಮ, ಸಿಬ್ಬಂದಿ ಅಡಳಿತ ಸುಧಾರಣೆ( ಆಡಳಿತ), ಯುವ ಸಬಲೀಕರಣ ಕ್ರೀಡಾ, ಯೋಜನಾ, ಹಿಂದುಳಿದ ವರ್ಗಗಳ ಕಲ್ಯಾಣ, ವಸತಿ, ಕನ್ನಡ ಸಂಸ್ಕೃತಿ, ಕೃಷಿ ಇಲಾಖೆಯೂ ಸೇರಿದಂತೆ ಒಟ್ಟಾರೆ 24 ಇಲಾಖೆಗಳ ಪಟ್ಟಿಯಲ್ಲಿ 946 ಹುದ್ದೆಗಳು ಖಾಲಿ ಇದ್ದರೆ ಕೆಪಿಎಸ್ಸಿಯು 646 ಹುದ್ದೆಗಳಷ್ಟೇ ಖಾಲಿ ಇದೆ ಎಂದು ತಿಳಿಸಿದೆ. ಈ ಇಲಾಖೆಗಳು ನೀಡಿರುವ ಮಾಹಿತಿಗೂ ಮತ್ತು ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿ ಮಧ್ಯೆ 300 ಹುದ್ದೆಗಳ ವ್ಯತ್ಯಾಸವಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಹಾಗೆಯೇ 44 ಆಡಳಿತ ಇಲಾಖೆಗಳಲ್ಲಿ ಮುಂಬಡ್ತಿಯಿಂದ ತುಂಬಬೇಕಿರುವ 32,278 ಹುದ್ದೆಗಳಲ್ಲಿ 22,578 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹೀಗಾಗಿ ಇನ್ನೂ ಮುಂಬಡ್ತಿ ನೀಡಲು 9,731 ಹುದ್ದೆಗಳು ಬಾಕಿ ಇವೆ. ಜತೆಗೆ 371 ಜೆ ಅಡಿ 1,431 ಮಂದಿ ಮುಂಭಡ್ತಿಗೆ ಅನರ್ಹರಾಗಿದ್ದಾರೆ. ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ ಗ್ರೂಪ್ ಎ, ಬಿ ಮತ್ತು ಸಿ ಅಡಿಯಲ್ಲಿ ಇನ್ನೂ 2,085, ಇಂಧನ ಇಲಾಖೆಯಲ್ಲಿ 1,419, ನಗರಾಭಿವೃದ್ಧಿಯಲ್ಲಿ 956, ವಾಣಿಜ್ಯ ಕೈಗಾರಿಕೆ ಇಲಾಖೆಯಲ್ಲಿ 653 ಹುದ್ದೆಗಳು ಮುಂಭಡ್ತಿಗೆ ಬಾಕಿ ಇವೆ.

ಬಾಕಿ ಹುದ್ದೆಗಳು

44 ಆಡಳಿತ ಇಲಾಖೆಗಳಲ್ಲಿ ನೇರ ನೇಮಕಾತಿ ಅಡಿಯಲ್ಲಿ 83, 651 ಹುದ್ದೆಗಳನ್ನು ಗುರುತಿಸಲಾಗಿದ್ದರೆ ಈ ಪೈಕಿ 57, 928 ಹುದ್ದೆಗಳು ಭರ್ತಿಯಾಗಿವೆ. ಇನ್ನೂ 25, 723 ಹುದ್ದೆಗಳು ಭರ್ತಿಗೆ ಬಾಕಿ ಇವೆ. ಚಾಲ್ತಿ ನೇರ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಕೆಪಿಎಸ್ಸಿ ಪ್ರಕಾರ 3,454 ಹುದ್ದೆಗಳು ಬಾಕಿ ಇವೆ. ಕೆಇಎ ಮತ್ತು ಇತರ ನೇಮಕಾತಿ ಸಂಸ್ಥೆಗಳಲ್ಲಿ 9,010 ಹುದ್ದೆಗಳು ಬಾಕಿ ಇವೆ ಎಂಬುದು ಯೋಜನೆ ಸಾಂಖ್ಯಿಕ ಇಲಾಖೆಯು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News