ರಾಜ್ಯದ ಜನರ ಆಶೀರ್ವಾದವಿದ್ದರೆ ನಾನೂ ಸಿಎಂ ಆಗ್ತೇನೆ: ಉಮೇಶ ಕತ್ತಿ

Update: 2022-05-07 13:17 GMT

ನೀಲಾವರ (ಬ್ರಹ್ಮಾವರ) : ನನಗೀಗ 61 ವರ್ಷ ವಯಸ್ಸು. ರಾಜಕೀಯವಾಗಿ ನಾನು ಈಗಲೂ ಯುವಕ. 75 ವರ್ಷದ ತನಕ ಎಲ್ಲರೂ ಯುವಕರೇ. ಹೀಗಾಗಿ ನನಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ. ದೇವರ ದಯೆ ಇದೆ. ರಾಜ್ಯದ ಎಲ್ಲಾ ಜನರ ಆಶೀರ್ವಾದ ಇದ್ದರೆ ನಾನು ಮುಂದೊಂದು ದಿನ ಮುಖ್ಯಮಂತ್ರಿ ಆಗೇ ಆಗ್ತೇನೆ. ಹಾಗಂತ ನಾನು ಸಿಎಂ ಆಗುವ ಅವಸರದಲ್ಲಿ ಇಲ್ಲ. ನಾನು ಸಿಎಂ ಆಗಬೇಕೆಂದು ಕೇಳೊಲ್ಲ. ಸಿಎಂ ಆದರೆ ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯ ನನಗಿದೆ.

ಹೀಗೆಂದು ಹೇಳಿದವರು ರಾಜ್ಯ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಹಾರ ಸಚಿವ ಉಮೇಶ ಕತ್ತಿ ಅವರು. ಹಿಂದೊಮ್ಮೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯವನ್ನು ಆಗ್ರಹಿಸಿ ಅದಕ್ಕೆ ತಾವು ಮುಖ್ಯಮಂತ್ರಿಯಾಗುತ್ತೇನೆ ಎಂದು ಘೋಷಿಸಿದ್ದ ಉಮೇಶ್ ಕತ್ತಿ, ಇಂದು ಅಖಂಡ ಕರ್ನಾಟಕದ ಜನರ ಆಶೀರ್ವಾದವಿದ್ದರೆ ತಾವು ಮುಖ್ಯಮಂತ್ರಿಯಾಗುತ್ತೇನೆ ಎಂದು ಇಲ್ಲಿ ನುಡಿದರು.

ಕರ್ನಾಟಕ ಅರಣ್ಯ ಇಲಾಖೆ ಹಾಗೂ ಶ್ರೀಪೇಜಾವರ ಮಠದ ಸಹಯೋಗದಲ್ಲಿ ಬ್ರಹ್ಮಾವರ ತಾಲೂಕು ನೀಲಾವರದಲ್ಲಿ  ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಗೌರವಾರ್ಥ ನಿರ್ಮಾಣಗೊಳ್ಳುವ ‘ಸ್ಮತಿವನ’ಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದರು.

ರಾಜ್ಯ ಬಿಜೆಪಿಯಲ್ಲಿ ಹೊಸತನದ ವಿಚಾರ ಮುಂಚೂಣಿಗೆ ಬಂದಿರುವ ಕುರಿತು ಅವರನ್ನು ಪ್ರಶ್ನಿಸಿದಾಗ, ಹಲವಾರು ಮಂದಿ ಯುವಕರು ಬಿಜೆಪಿಯಲ್ಲಿದ್ದಾರೆ. ನಾನು ಕೂಡಾ ಯುವಕನೇ. ನನಗೀಗ 61 ವರ್ಷ ಪ್ರಾಯ. ಮೊದಲ ಬಾರಿ ಶಾಸಕನಾದಾಗ ನನಗೆ 24 ವರ್ಷ ಪ್ರಾಯವಾಗಿತ್ತು. 75ರ ತನಕ ಎಲ್ಲರೂ ಯುವಕರೇ. ನಾನು ಸೀನಿಯರ್ ಎಂಎಲ್‌ಎ. 10ಬಾರಿ ಸ್ಪರ್ಧಿಸಿದ್ದೇನೆ. 9 ಬಾರಿ ಗೆದ್ದಿದ್ದೇನೆ. ಎಂಟು ಅವಧಿಗೆ ಅಧಿಕಾರ ಮಾಡಿದ್ದೇನೆ. ಹೀಗಾಗಿ ನನಗೂ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ಅದಾಗಿ ಬಂದರೆ ನೋಡೋಣ ಎಂದ ಉಮೇಶ್ ಕತ್ತಿ, ಸಿಎಂ ಆಗಿ ರಾಜ್ಯವನ್ನು ನಿಭಾಯಿಸುವ ಸಾಮರ್ಥ್ಯ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೋರಾಟ ಕೈಬಿಟ್ಟಿಲ್ಲ: ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ನಡೆಸಿದ ಹೋರಾಟದ ಕುರಿತು ಪ್ರಶ್ನಿಸಿದಾಗ, ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ವಾದಾಗ ರಾಜ್ಯವನ್ನು ಒಡೆಯಬೇಕು ಎಂದು ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಹೇಳಿದವನು ನಾನೇ. ಅಂದು ನಮ್ಮ ಬೇಡಿಕೆ ಈಡೇರಿತು. ಹೋರಾಟ ಕೈಬಿಟ್ಟೆವು. ಈಗ ಅಖಂಡ ಕರ್ನಾಟಕದ ಸಚಿವನಾಗಿ ಕೆಲಸ ಮಾಡುತಿದ್ದೇನೆ ಎಂದರು.

ಈಗಲೂ ನಾನು ಹೋರಾಟ ಕೈಬಿಟ್ಟಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ವಾದರೆ ಎರಡು ರಾಜ್ಯ ಆಗದೇ ಬಿಡೋದಿಲ್ಲ. ಈಗ ಅಂಥ ಅನ್ಯಾಯ ವಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಆದರೆ ಕರ್ನಾಟಕ ವಿಭಜನೆ ಹೋರಾಟ ಕೈಬಿಟ್ಟಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಹೋರಾಟ ಇದ್ದೇ ಇದೆ ಎಂದರು.

೧೫೦ ಸ್ಥಾನ ಗೆಲ್ಲುತ್ತೇವೆ: ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಸರಕಾರ ಅಧಿಕಾರದಲ್ಲಿದೆ. ಮುಂದಿನ ಅವಧಿಗೆ ೧೫೦ ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ ಕನಿಷ್ಠ ೧೨೦ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ಮೈಸೂರು ಭಾಗದಲ್ಲಿ ಬಹಳ ಪರಿವರ್ತನೆ ಆಗಿದೆ. ಹಳೇ ಮೈಸೂರು ಭಾಗದಲ್ಲಿ ಜನತಾದಳ- ಕಾಂಗ್ರೆಸ್ ಇತ್ತು. ಸುಮಲತಾ ಸಂಸದೆಯಾದ ನಂತರ ಬಹಳ ಬದಲಾವಣೆ ಆಗುತ್ತಿದೆ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಪಕ್ಷ ಸಿದ್ಧಾಂತ ಒಪ್ಪಿ ಬಿಜೆಪಿಗೆ ಬರುವವರಿಗೆ ಸ್ವಾಗತವಿದೆ ಎಂದರು.

ಮಾರುಕಟ್ಟೆಯಲ್ಲಿ ಹಣದ ಆಮಿಷ ತೋರಿಸುವವರಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆಯೇ ಹೊರತು ಅವರು ಹಣಕೊಟ್ಟು ಸಿಎಂ ಆಗ್ತಾರೆ ಎಂಬ ಭಾವನೆ ಬೇಡ ಎಂದು ಯತ್ನಾಳ್ ಅವರ ಸಿಎಂ ಸ್ಥಾನಕ್ಕೆ ಎರಡುವರೆ ಸಾವಿರ ಕೋಟಿ ಹೇಳಿಕೆಗೆ ಸಮಜಾಯಿಷಿ ನೀಡಿದರು. ಯತ್ನಾಳ್ ಈಗಿನ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ ಎಂದರು. 

ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ನಿರುದ್ಯೋಗಿ ರಾಜಕಾರಣಿಗಳು. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮುಂದಿನ ದಿನದಲ್ಲೂ ಅವರು ನಿರುದ್ಯೋಗಿಗಳಾಗಿಯೇ  ಉಳಿಯುತ್ತಾರೆ ಎಂದು ಕತ್ತಿ ವ್ಯಂಗ್ಯವಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News