ಕನಿಷ್ಟ 2 ವರ್ಷ ಆರ್ಥಿಕ ಸಂಕಷ್ಟ ಮುಂದುವರಿಕೆ; ಶ್ರೀಲಂಕಾ ವಿತ್ತ ಸಚಿವರ ಎಚ್ಚರಿಕೆ
ಕೊಲಂಬೊ, ಮೇ 7: ಶ್ರೀಲಂಕಾವನ್ನು ಕಂಗೆಡಿಸಿರುವ ಅಸಾಮಾನ್ಯ ಆರ್ಥಿಕ ಸಂಕಷ್ಟದ ಸಮಸ್ಯೆ ಇನ್ನೂ ಕನಿಷ್ಟ ಮುಂದುವರಿಯಲಿದೆ ಎಂದು ವಿತ್ತಸಚಿವ ಅಲಿ ಸಬ್ರಿ ಎಚ್ಚರಿಸಿದ್ದಾರೆ.
ಬಹುತೇಕ ಆಮದು ವ್ಯವಹಾರವನ್ನೇ ಆಧರಿಸಿರುವ ಶ್ರೀಲಂಕಾದ ಅರ್ಥವ್ಯವಸ್ಥೆಗೆ ಚಾಲನೆ ದೊರಕಬೇಕಿದ್ದರೆ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಬೇಕಿದೆ. ಸದ್ಯಕ್ಕೆ ದೇಶದ ವಿದೇಶಿ ವಿನಿಮಯ ಸಂಗ್ರಹ 1.7 ಬಿಲಿಯನ್ ಡಾಲರ್ ನಷ್ಟಿದೆ ಎಂದು ಸರಕಾರದ ಅಂಕಿಅಂಶ ಹೇಳುತ್ತಿದೆ. ಆದರೆ ಇದರಲ್ಲಿ ಹೆಚ್ಚಿನ ಅಂಶ ಚೀನಾದ ಕರೆನ್ಸಿ ವಿನಿಮಯ ಪ್ರಕ್ರಿಯೆಗೆ ಸಂಬಂಧಿಸಿದ್ದು. ಇದನ್ನು ಇತರ ವಿದೇಶದಿಂದ ಆಮದು ಮಾಡಿಕೊಳ್ಳುವಾಗ ಪಾವತಿಗೆ ಬಳಸಲು ಸಾಧ್ಯವಾಗದು. ಆರ್ಥಿಕ ನೆರವು ವಿಸ್ತರಣೆಗಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸುವಲ್ಲಿ ವಿಳಂಬ ಮಾಡಿರುವುದು ಸರಕಾರ ಎಸಗಿರುವ ತಪ್ಪಾಗಿದೆ. ಕೊರೋನ ಸಾಂಕ್ರಾಮಿಕದಿಂದ ಪ್ರವಾಸೋದ್ದಿಮೆಗೆ ಆದ ಆಘಾತ ಆರ್ಥಿಕ ಸಮಸ್ಯೆ ಬಿಗಡಾಯಿಸಲು ಪ್ರಮುಖ ಕಾರಣ ಎಂದು ಸಬ್ರಿ ಹೇಳಿದ್ದಾರೆ. 51 ಬಿಲಿಯನ್ ಡಾಲರ್ ವಿದೇಶಿ ಸಾಲ ಮರುಪಾವತಿಸಲು ಬಾಕಿಯಿದೆ ಎಂದು ಕಳೆದ ತಿಂಗಳು ಶ್ರೀಲಂಕಾ ಘೋಷಿಸಿದೆ.
ಈ ಮಧ್ಯೆ, ಅಧ್ಯಕ್ಷ ಗೊತಬಯ ರಾಜಪಕ್ಸ ಹಾಗೂ ಸರಕಾರದ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ವಿದ್ಯಾರ್ಥಿಗಳೂ ಕೈಜೋಡಿಸಿದ್ದು ದೇಶದ ಸಂಸತ್ ಭವನಕ್ಕೆ ನುಗ್ಗಲು ಪ್ರಯತ್ನಿಸಿದರು. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ಅಂತರ್ ವಿವಿ ವಿದ್ಯಾರ್ಥಿಗಳ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ಸಂಸತ್ ಭವನದ ಮುಖ್ಯದ್ವಾರದ ಎದುರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೆಸೆಯಲು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ವಿದ್ಯಾರ್ಥಿಗಳು ಬ್ಯಾರಿಕೇಡ್ ಕಿತ್ತೆಸೆಯಲು ಮುಂದಾದಾಗ ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.