ದೇಶದಲ್ಲಿ 190 ಕೋಟಿ ದಾಟಿದ ಕೋವಿಡ್ ಲಸಿಕೆ ಡೋಸ್: ಕೇಂದ್ರ ಸರಕಾರ ಹೇಳಿಕೆ
ಹೊಸದಿಲ್ಲಿ, ಮೇ 7: ದೇಶದಲ್ಲಿ ನೀಡಲಾದ ಕೋವಿಡ್ ಲಸಿಕೆ ಡೋಸ್ ಗಳ ಒಟ್ಟು ಸಂಖ್ಯೆ 190 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಇದುವರೆಗೆ 12ರಿಂದ 14ರ ವರೆಗಿನ ಪ್ರಾಯ ಗುಂಪಿನ 3.01 ಕೋಟಿ (3,01,97,120) ಗಿಂತ ಅಧಿಕ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ನೀಡಲಾಗಿದೆ. ಇದುವರೆಗೆ, 18ರಿಂದ 59ರ ವರೆಗಿನ ಪ್ರಾಯದವರಿಗೆ 9,95,265 ಮುನ್ನೆಚ್ಚರಿಕಾ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ದತ್ತಾಂಶ ತಿಳಿಸಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಕೋವಿಡ್ ಲಸಿಕೆ ನೀಡುವುದನ್ನು ಎಪ್ರಿಲ್ 10ರಂದು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಸರಕಾರ ಆರಂಭಿಸಿತ್ತು. ಎರಡನೇ ಡೋಸ್ ಲಸಿಕೆ ಪಡೆದ ಬಳಿಕ 9 ತಿಂಗಳು ಪೂರ್ಣಗೊಳಿಸಿದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ಗಳಿಗೆ ಅರ್ಹರು. ಮೊದಲ ಹಂತದಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರು ಲಸಿಕೆಯನ್ನು ಪಡೆದುಕೊಳ್ಳುವುದರೊಂದಿಗೆ ಕಳೆದ ವರ್ಷ ಜನವರಿ 16ರಂದು ರಾಷ್ಟ್ರವ್ಯಾಪಿ ಕೋವಿಡ್ ಲಸಿಕೆಯ ಅಭಿಯಾನ ಆರಂಭಿಸಲಾಗಿತ್ತು. ಮುಂಚೂಣಿ ಕಾರ್ಯಕರ್ತರಿಗೆ 2021 ಫೆಬ್ರವರಿ 2ರಂದು ಲಸಿಕೆ ನೀಡಿಕೆ ಆರಂಭವಾಗಿತ್ತು.
ಮುಂದಿನ ಹಂತವಾಗಿ 2021 ಮಾರ್ಚ್ 1ರಂದು 60 ವರ್ಷಕ್ಕಿಂತ ಮೇಲ್ಪಟ್ಟವರು, 45 ವಯಸ್ಸಿನ, ಅದಕ್ಕಿಂತ ಮೇಲ್ಪಟ್ಟ ಹಾಗೂ ನಿರ್ದಿಷ್ಟವಾಗಿ ಹಲವು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿತ್ತು.
45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಅಭಿಯಾನವನ್ನು ಸರಕಾರ ಕಳೆದ ವರ್ಷ ಎಪ್ರಿಲ್ 1ರಂದು ಆರಂಭಿಸಿತ್ತು. ಕಳೆದ ವರ್ಷ ಮೇ 1ರಂದು 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಕೋವಿಡ್ ವಿರುದ್ಧ ಲಸಿಕೆ ನೀಡುವ ಮೂಲಕ ಸರಕಾರ ಕೋವಿಡ್ ಲಸಿಕಾ ಅಭಿಯಾನವನ್ನು ವಿಸ್ತರಿಸಲು ನಿರ್ಧರಿಸಿತ್ತು.
ಮುಂದಿನ ಹಂತದಲ್ಲಿ 15ರಿಂದ 18 ಪ್ರಾಯ ಗುಂಪಿನ ಹದಿಹರೆಯದವರಿಗೆ ಜನವರಿ 3ರಂದು ಲಸಿಕೀಕರಣ ಆರಂಭಿಸಿತ್ತು. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಹಲವು ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಟಟ್ಟವರಿಗೆ ಜನವರಿ 10ರಿಂದ ಮುನ್ನೆಚ್ಚರಿಕಾ ಲಸಿಕೆಗಳನ್ನು ನೀಡಲು ಸರಕಾರ ಆರಂಭಿಸಿತ್ತು. ಸರಕಾರ 12 ರಿಂದ 14ರ ವರೆಗಿನ ಪ್ರಾಯ ಗುಂಪಿನ ಮಕ್ಕಳಿಗೆ ಮಾರ್ಚ್ 16ರಂದು ಲಸಿಕೆ ನೀಡಲು ಆರಂಭಿಸಿತ್ತು. ಅಲ್ಲದೆ, ಹಲವು ಕಾಯಿಲೆಗಳ ಕಾರಣವನ್ನು ಹಿಂಪಡೆದು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮುನ್ನೆಚ್ಚರಿಕಾ ಕೋವಿಡ್ ಲಸಿಕೆ ಸ್ವೀಕರಿಸಲು ಅರ್ಹರು ಎಂದು ಹೇಳಿತ್ತು.