​ರಾಜ್ಯ ಸರಕಾರದ ಮಾನದ ಬೆಲೆ!

Update: 2022-05-09 04:21 GMT

ಬಿಜೆಪಿಯ ಪಾಲಿಗೆ ಸೆರಗಿನ ಕೆಂಡ ಈ ಬಸನ ಗೌಡ ಪಾಟೀಲ್ ಯತ್ನಾಳ್ . ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ, ವರಿಷ್ಠರು ರಾಜ್ಯಕ್ಕೆ ಪರಿಹಾರ ನೀಡಲು ಹಿಂದೇಟು ಹಾಕಿದಾಗ ಯಡಿಯೂರಪ್ಪರ ಪರವಾಗಿ ಬ್ಯಾಟಿಂಗ್ ಮಾಡಿದವರು ಇದೇ ಯತ್ನಾಳ್. ಉಳಿದೆಲ್ಲ ಸಂಸದರು ಕರ್ನಾಟಕಕ್ಕೆ ಪರಿಹಾರದ ಅಗತ್ಯವೇ ಇಲ್ಲ ಎಂದು ಕೇಂದ್ರದ ಜೀತಕ್ಕೆ ನಿಂತಾಗ, ರಾಜ್ಯಕ್ಕೆ ಪರಿಹಾರ ಹಣವನ್ನು ಬಿಡುಗಡೆ ಮಾಡದೇ ಇದ್ದರೆ ಪರಿಣಾಮ ಕೆಟ್ಟದಾಗುತ್ತದೆ ಎಂದು ಮಾಧ್ಯಮಗಳಿಗೆ ಎದೆಗೊಟ್ಟು ಮಾತನಾಡಿದವರು. ಮುಂದೆ ಯಡಿಯೂರಪ್ಪ ಅವರು ಯತ್ನಾಳ್ ಅವರನ್ನು ಮೂಲೆಗುಂಪು ಮಾಡಿದಾಗ ಯಡಿಯೂರಪ್ಪ ವಿರುದ್ಧವೇ ತಿರುಗಿ ನಿಂತರು. 'ಶೀಘ್ರದಲ್ಲೇ ನಾಯಕತ್ವ ಬದಲಾವಣೆಯಾಗುತ್ತದೆ' ಎಂದು ಭವಿಷ್ಯ ನುಡಿದರು. ಕೊನೆಗೂ ಅವರ ಭವಿಷ್ಯ ಸುಳ್ಳಾಗಲಿಲ್ಲ. ಆ ಬಳಿಕ 'ಅಶ್ಲೀಲ ಸೀಡಿ'ಗಳ ಹಿಂದೆ ಬಿದ್ದರು. 'ನೋಡಲು ಅಸಾಧ್ಯ ಅನ್ನಿಸುವಂತಹ ಅಶ್ಲೀಲ ಸೀಡಿಗಳಿವೆ' ಎಂದು ಹೇಳಿದರು. ಬಳಿಕ ಆ ಅಶ್ಲೀಲ ಸೀಡಿಯನ್ನು ನೋಡಲೇ ಬೇಕಾದ ದೌರ್ಭಾಗ್ಯಕ್ಕೊಳಗಾದರು ಕರ್ನಾಟಕದ ಜನತೆ. ಅನೇಕ ಸಂದರ್ಭದಲ್ಲಿ ಯದ್ವಾತದ್ವಾ ನಾಲಗೆ ಹರಿಬಿಡುವ ಇವರು ಒಮ್ಮಾಮ್ಮೆ ಹೊರಗೆಡಹುವ ಕೆಂಡದಂತಹ ಸತ್ಯಕ್ಕೆ ಸ್ವತಃ ಬಿಜೆಪಿಯೇ ಬೆಚ್ಚಿ ಬಿದ್ದದ್ದಿದೆ.

ಯತ್ನಾಳ್ ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತು. ಇದೀಗ ರಾಜ್ಯದ ಮುಖ್ಯಮಂತ್ರಿ ಗಾದಿಯ ಬೆಲೆಯನ್ನು ಬಹಿರಂಗ ಪಡಿಸುವ ಮೂಲಕ ಯತ್ನಾಳ್ ಸುದ್ದಿಯಲ್ಲಿದ್ದಾರೆ. 'ದಿಲ್ಲಿಯಿಂದ ತನ್ನ ಬಳಿಗೆ ಬಂದಿದ್ದ ಹಲವರು 2,500 ಕೋಟಿ ರೂಪಾಯಿಯನ್ನು ನೀಡಿದರೆ ನಿಮ್ಮನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಆಮಿಷ ಒಡ್ಡಿದ್ದರು'' ಎನ್ನುವ ಮೂಲಕ ದಿಲ್ಲಿ ವರಿಷ್ಠರನ್ನು, ರಾಜ್ಯ ಸರಕಾರವನ್ನು ಏಕಕಾಲದಲ್ಲಿ ಮುಜುಗರಕ್ಕೆ ತಳ್ಳಿದ್ದಾರೆ. ಇಷ್ಟೇ ಅಲ್ಲ, ''ರಾಜ್ಯ ಸರಕಾರದಲ್ಲಿರುವ ಸಚಿವರೊಬ್ಬರು 'ಸೀಡಿಯನ್ನು ಇಟ್ಟು ಬ್ಲಾಕ್‌ಮೇಲ್ ಮಾಡಿ' ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ'' ಎಂದೂ ಆರೋಪಿಸಿದ್ದಾರೆ. ಈಗ ಅಸ್ತಿತ್ವದಲ್ಲಿರುವ ಸರಕಾರ ಅಕ್ರಮ ಹಾದಿಯಲ್ಲಿ ರಚನೆಯಾಗಿರುವುದು ಎಲ್ಲರಿಗೂ ಈಗಾಗಲೇ ಗೊತ್ತಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ದಿಲ್ಲಿ ವರಿಷ್ಠರಿಗೆ ಸಾವಿರಾರು ಕೋಟಿ ರೂಪಾಯಿ ಲಂಚ ನೀಡಬೇಕು ಎನ್ನುವುದು ಮಾತ್ರ ರಾಜ್ಯದ ಜನತೆಗೆ ಹೊಸತು. ಈ ಹಿಂದೆ ರೆಡ್ಡಿ ಸಹೋದರರು ಬಳ್ಳಾರಿಯ 'ದೊರೆ'ಗಳಾಗಿ ಮೆರೆಯುತ್ತಿರುವಾಗ ಪ್ರತಿವರ್ಷ ಸೂಟ್‌ಕೇಸ್ ಒಯ್ಯುವುದಕ್ಕೆಂದೇ ಅಂದಿನ ಬಿಜೆಪಿ ನಾಯಕಿ ಸುಶ್ಮಾ ಸ್ವರಾಜ್ ಬಳ್ಳಾರಿಗೆ ಆಗಮಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಪೂರಕವಾಗಿ, ರಾಜ್ಯ ಸರಕಾರದ ಸಂಪೂರ್ಣ ನಿಯಂತ್ರಣ ರೆಡ್ಡಿ ಸಹೋದರರ ಕೈಯಲ್ಲಿತ್ತು. ರಾಜ್ಯದ ಹಣ ಈಗಲೂ ಬೇರೆ ಬೇರೆ ರೂಪದಲ್ಲಿ ದಿಲ್ಲಿಗೆ ವರ್ಗಾಣೆಯಾಗುತ್ತಿರುವ ಆಘಾತಕಾರಿ ಅಂಶ ಯತ್ನಾಳ್ ಆರೋಪದಿಂದ ಹೊರಬಿದ್ದಿದೆ.

ಯತ್ನಾಳ್ ಆರೋಪವನ್ನು ಬಿಜೆಪಿಯೊಳಗಿರುವ ಯಾವ ನಾಯಕರೂ ಈವಗೆ ಗಟ್ಟಿ ಧ್ವನಿಯಲ್ಲಿ ಅಲ್ಲಗಳೆದಿಲ್ಲ. ಕೆಲವು ನಾಯಕರು 'ಆರೋಪಕ್ಕೆ ದಾಖಲೆಗಳನ್ನು ನೀಡಲಿ' ಎಂದಷ್ಟೇ ಹೇಳಿಕೆ ನೀಡಿ ವೌನವಾಗಿದ್ದಾರೆ. ಯತ್ನಾಳ್ ಆರೋಪಕ್ಕೆ ಬಿಜೆಪಿಯೊಳಗಿಂದ ಬಲವಾದ ಆಕ್ಷೇಪ ಕೇಳಿ ಬರದೇ ಇರುವುದೇ, ಅದರಲ್ಲಿರುವ ಸತ್ಯಾಂಶಕ್ಕಿರುವ ಮುಖ್ಯ ದಾಖಲೆಯಾಗಿದೆ. ಇದೊಂದು ದಾಖಲೆ ರಹಿತ ಆರೋಪವೇ ಆಗಿದ್ದರೆ, ಇಂತಹ ಆರೋಪ ಮಾಡಿದ ಮರುದಿನವೇ ಯತ್ನಾಳ್ ಪಕ್ಷದಿಂದ ವಜಾಗೊಳ್ಳುತ್ತಿದ್ದರು. ಬಿಜೆಪಿ ಈವರೆಗೆ ಯತ್ನಾಳ್ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ವಿಶೇಷವೆಂದರೆ ಈ ಆರೋಪ ಮಾಡಿದ ಎರಡೇ ದಿನದಲ್ಲಿ ಇನ್ನೊಂದು ಗುರುತರ ಆರೋಪವನ್ನೂ ಯತ್ನಾಳ್ ಮಾಡಿದ್ದಾರೆ. ''ಅಶ್ಲೀಲ ಸೀಡಿ ತೋರಿಸಿ ರಾಜ್ಯ ಸರಕಾರದಲ್ಲಿ ಸಚಿವ ಸ್ಥಾನವನ್ನು ಕೆಲವರು ಗಿಟ್ಟಿಸಿಕೊಂಡಿದ್ದಾರೆ'' ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇನು ನಿರ್ಲಕ್ಷಿಸುವ ಆರೋಪವಲ್ಲ. ಅಶ್ಲೀಲ ಸೀಡಿಯನ್ನು ತೋರಿಸಿ ಸಚಿವ ಸ್ಥಾನವನ್ನು ಗಿಟ್ಟಿಸಬೇಕಾದರೆ ಆ ಸೀಡಿಯಲ್ಲಿರುವ ವ್ಯಕ್ತಿ ಪಕ್ಷದಲ್ಲಿ ಅತ್ಯಂತ ಜವಾಬ್ದಾರಿಯುತ ಹುದ್ದೆಯಲ್ಲಿರುವವರೇ ಆಗಿರಬೇಕು. ಒಂದು ವೇಳೆ ಇದೇ ಸೀಡಿಯನ್ನು ತೋರಿಸಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಇನ್ನಿತರ ಮಾಹಿತಿಗಳನ್ನು ಪಡೆಯಲು ಯತ್ನಿಸಿದರೆ ಅದರಿಂದ ಆಗುವ ದುಷ್ಪರಿಣಾಮಗಳೆಷ್ಟಿರಬಹುದು? ಈ ರಾಜ್ಯವನ್ನು ಆಳುವ ಸರಕಾರ ಅಶ್ಲೀಲ ಸೀಡಿಯ ಬ್ಲಾಕ್‌ಮೇಲ್‌ಗೆ ಒಳಗಾಗಿ ನಾಡಿನ ಹಿತಾಸಕ್ತಿಯನ್ನೇ ಬಲಿಕೊಟ್ಟರೆ ಅದಕ್ಕೆ ಯಾರು ಜವಾಬ್ದಾರರು? ಆದುದರಿಂದ ಅಶ್ಲೀಲ ಸಿಡಿಯ ಕುರಿತಂತೆ ಯತ್ನಾಳ್ ಹೇಳಿಕೆ ಗಂಭೀರ ತನಿಖೆಗೆ ಯೋಗ್ಯವಾಗಿದೆ.

ಇದೇ ಸಂದರ್ಭದಲ್ಲಿ '2,500 ಕೋಟಿ ರೂಪಾಯಿ ಸಿದ್ಧಪಡಿಸಿಕೊಳ್ಳಿ. ನೀವು ಸಿಎಂ ಆಗ್ತೀರಿ' ಎಂದು ಯತ್ನಾಳ್ ಅವರಿಗೆ ಆಮಿಷ ಒಡ್ಡಿದ ವ್ಯಕ್ತಿ ಯಾರು? ಅಂತಹದೊಂದು ಆಮಿಷ ಒಡ್ಡ ಬೇಕಾದರೆ ಆತ ದಿಲ್ಲಿ ವರಿಷ್ಠರಿಗೆ ತುಂಬಾ ಹತ್ತಿರದವನೇ ಆಗಿರಬೇಕು. 2,500 ಕೋಟಿ ರೂಪಾಯಿಯನ್ನು ಕೊಟ್ಟು ಮುಖ್ಯಮಂತ್ರಿಯಾದ ವ್ಯಕ್ತಿ ಈ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಾಡುವುದು ಸಾಧ್ಯವೆ? ಕೊಟ್ಟ ಹಣದ ದುಪ್ಪಟ್ಟು ಹಣವನ್ನು ಸಂಪಾದಿಸುವುದೇ ಅವನ ಗುರಿಯಾಗಿರುತ್ತದೆ. ಈಗಾಗಲೇ ರಾಜ್ಯದಲ್ಲಿ ಶೇ. 40 ಕಮಿಷನ್ ಚರ್ಚೆಯಲ್ಲಿದೆ. ಈ ಕಮಿಷನ್‌ಗೂ ಮುಖ್ಯಮಂತ್ರಿ ಗಾದಿಯ ಬೆಲೆಗೂ ಇರುವ ಸಂಬಂಧ ತನಿಖೆಯಾಗುವುದು ಅತ್ಯಗತ್ಯವಾಗಿದೆ. ರಾಜ್ಯ ಸರಕಾರದ ಒಂದೊಂದೇ ಭ್ರಷ್ಟಾಚಾರಗಳು ಹೊರ ಬೀಳುತ್ತಿರುವ ಹೊತ್ತಿಗೇ, ಮುಖ್ಯಮಂತ್ರಿ ಗಾದಿಯ ದರ ಹೊರಬಿದ್ದಿರುವುದು ಕಾಕತಾಳೀಯವಲ್ಲ ಎನ್ನುವುದನ್ನು ಗಮನಿಸಬೇಕು. ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ವರಿಷ್ಠರು ಹಿಂದೇಟು ಹಾಕಲು ಎರಡು ಪ್ರಮುಖ ಕಾರಣಗಳನ್ನು ನಾವು ಊಹಿಸಬಹುದು. ಒಂದು, ತಾವು ಮಾಡಿದ ಆರೋಪಕ್ಕೆ ಸಂಬಂಧಿಸಿ ಅವರ ಬಳಿ ಆಡಿಯೊ ಅಥವಾ ವೀಡಿಯೊಗಳಿರಬಹುದು. ಎರಡು, ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಸರಕಾರದ ಪ್ರಮುಖರ ಮಾನ ಹರಾಜು ಮಾಡುವ ಅಶ್ಲೀಲ ಸೀಡಿಗಳು ಅವರ ಬಳಿ ಇರಬಹುದು. ಒಟ್ಟಿನಲ್ಲಿ, ಈ ಬೆಳವಣಿಗೆ ರಾಜ್ಯದ ಹಿತಾಸಕ್ತಿಗೆ ಯಾವ ರೀತಿಯಲ್ಲೂ ಒಳಿತನ್ನು ಮಾಡುವುದಿಲ್ಲ.

ಇದೀಗ ಮತ್ತೆ ಮುಖ್ಯಮಂತ್ರಿ ಗಾದಿ ಬದಲಾವಣೆ, ಸಚಿವ ಸ್ಥಾನ ಬದಲಾವಣೆಗಳ ಮಾತು ಕೇಳಿ ಬರುತ್ತಿದೆ. ಅಂದರೆ ರಾಜ್ಯದಿಂದ ಇನ್ನಷ್ಟು ಹಣ ದಿಲ್ಲಿಗೆ ವರ್ಗಾವಣೆಯಾಗಲಿದೆ ಎನ್ನುವುದು ಇದರ ಅರ್ಥ. ಯಾರು ಅತ್ಯಧಿಕ ಹಣವನ್ನು ಕೇಂದ್ರಕ್ಕೆ ಕಪ್ಪವಾಗಿ ಕೊಡುತ್ತಾನೆಯೋ ಅವನೇ ಮುಂದಿನ ಮುಖ್ಯಮಂತ್ರಿ ಎನ್ನುವುದನ್ನು ಯತ್ನಾಳ್ ಆರೋಪ ಸ್ಪಷ್ಟಪಡಿಸುತ್ತದೆ. ಆದುದರಿಂದಲೇ ಬಿಜೆಪಿ ತನ್ನ ಮಾನ ಉಳಿಸಿಕೊಳ್ಳುವುದಕ್ಕಾದರೂ ಯತ್ನಾಳ್ ಆರೋಪವನ್ನು ತನಿಖೆಗೊಳಪಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News