ಅಸನಿ ಚಂಡಮಾರುತದ ಎಫೆಕ್ಟ್: ಮಲ್ಪೆಯ ತೇಲುವ ಸೇತುವೆಗೆ ಹಾನಿ

Update: 2022-05-09 06:17 GMT

ಉಡುಪಿ, ಮೇ 9: ಬಂಗಾಳ ಕೊಲ್ಲಿಯಲ್ಲಿನ ಅಸನಿ ಚಂಡಮಾರುತ ಪರಿಣಾಮ ಮಲ್ಪೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳಿಂದಾಗಿ ನಾಲ್ಕು ದಿನಗಳ ಹಿಂದೆ ಬೀಚ್‌ನಲ್ಲಿ ಅಳವಡಿಸಲಾದ ತೇಲುವ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಬೃಹತ್ ಅಲೆಗಳ ಕಾರಣಕ್ಕಾಗಿ ರವಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್ ಹಾಗೂ ತೇಲುವ ಸೇತುವೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ರಾತ್ರಿ ಸಮುದ್ರ ಇನ್ನಷ್ಟು ಪ್ರಕ್ಷುಬ್ಧಗೊಂಡಿದ್ದು, ರಕ್ಕಸ ಗಾತ್ರದ ಅಲೆಗಳು ತೀರ ಅಪ್ಪಳಿಸುತ್ತಿದ್ದವು. ಇದರ ಪರಿಣಾಮವಾಗಿ ತೇಲುವ ಸೇತುವೆಯು ಛಿದ್ರಗೊಂಡು ಸಮುದ್ರಪಾಲಾಗಿದೆ. ಸೇತುವೆಯ ಬಿಡಿಭಾಗಗಳು ಸಮುದ್ರದಲ್ಲಿ ತೇಲುವ ದೃಶ್ಯಗಳು ಕಂಡುಬಂದಿವೆ. ಇದನ್ನು ಮರು ಜೋಡಿಸುವ ಕಾರ್ಯ ಇದೀಗ ನಡೆಯುತ್ತಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮಲ್ಪೆ ಬೀಚ್‌ನಲ್ಲಿನ ವಾಟರ್ ಸ್ಪೋರ್ಟ್ಸ್ ಹಾಗೂ ತೇಲುವ ಸೇತುವೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಲ್ಪೆ ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ, ಚಂಡಮಾರುತದ ಪರಿಣಾಮ ಭಾರೀ ಗಾತ್ರದ ಅಲೆಗಳಿಂದ ಸೇತುವೆಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಸೇತುವೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸೇತುವೆ ಸಂಪೂರ್ಣ ಸುರಕ್ಷತೆಯಿಂದ ಕೂಡಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಪಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಂಡಮಾರುತ ಹಾಗೂ ಸಮುದ್ರ ಪ್ರಕ್ಷುಬ್ಧಗೊಂಡ ಕಾರಣಕ್ಕಾಗಿ ರವಿವಾರವೇ ನಾವು ಎಲ್ಲವನ್ನು ಸಂಪೂರ್ಣ ಬಂದ್ ಮಾಡಿದ್ದೇವೆ. ರವಿವಾರ ಸಂಜೆಯಿಂದ ಇಂದು ಮತ್ತು ನಾಳೆ ಕೂಡ ವಾಟರ್ ಸ್ಪೋರ್ಟ್ಸ್, ಸೈಂಟ್ ಮೇರಿಸ್ ದ್ವೀಪದ ಬೋಟು, ತೇಲುವ ಸೇತುವೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಸಿಗರು ಬೀಚ್‌ನಲ್ಲಿ ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ಸೇತುವೆ ಸುರಕ್ಷಿತವಾಗಿಲ್ಲ, ಇದರಿಂದ ಜನ ನೀರಿಗೆ ಬಿದ್ದಿದ್ದಾರೆ ಎಂದು ಕೆಲವರು ಸೇತುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಚಾರ ಮಾಡುತ್ತಿದ್ದಾರೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ಸೇತುವೆ ಸುರಕ್ಷಿತ ವಾಗಿದೆ. ಚಂಡಮಾರುತದ ಕಾರಣದಿಂದ ನಾವು ಸೇತುವೆಯನ್ನು ಬಿಚ್ಚಿ ಮೇಲೆ ಇಟ್ಟಿದ್ದೇವೆ. ಮುಂದೆ ಸಮುದ್ರದಲ್ಲಿನ ಅಲೆಗಳ ಅಬ್ಬರ ಇಳಿದ ಬಳಿಕ ಪುನಾರಂಭಿಸುವ ಬಗ್ಗೆ ತಿಳಿಸಲಾಗುವುದು ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News