ಆತ್ರಾಡಿ : ಉಸಿರುಗಟ್ಟಿಸಿ ತಾಯಿ-ಮಗಳ ಕೊಲೆ; ದುಷ್ಕರ್ಮಿಗಳು ಪರಾರಿ

Update: 2022-05-09 15:58 GMT

ಹಿರಿಯಡ್ಕ : ಇಲ್ಲಿಗೆ ಸಮೀಪದ ಆತ್ರಾಡಿ ಮದಗ ಅಂಗನವಾಡಿ ಸಮೀಪದ ಮನೆಯೊಂದರಲ್ಲಿ ತಾಯಿ ಮಗಳ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು, ಇವರಿಬ್ಬರನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರು ವುದಾಗಿ ಶಂಕಿಸಲಾಗಿದೆ.

ಮೃತರನ್ನು ಮದಗ ನಿವಾಸಿ ಚೆಲುವಿ (30) ಹಾಗೂ ಅವರ 10 ವರ್ಷ ವಯಸ್ಸಿನ ಮಗಳು ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದ ಚೆಲುವಿ ಕುಟುಂಬ, ಸುಮಾರು 30 ವರ್ಷಗಳ ಹಿಂದೆ ಶಿವಮೊಗ್ಗದಿಂದ ಆಗಮಿಸಿ ಉಡುಪಿಯಲ್ಲಿ ವಾಸ ಮಾಡಿಕೊಂಡಿದೆ.

ಮಣಿಪಾಲದಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ ಚೆಲುವಿ, ತನ್ನ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದರು. ಇವರ ತಾಯಿ ಮತ್ತು ಮಗ ಶಿವಮೊಗ್ಗದಲ್ಲಿರುವ ಅಜ್ಜಿ ಮನೆಗೆ ತೆರಳಿದ್ದರು. ಇದರಿಂದ ಮನೆಯಲ್ಲಿ ಚೆಲುವಿ ಮತ್ತು ಮಗಳು ಮಾತ್ರ ಇದ್ದರೆನ್ನಲಾಗಿದೆ.

ಮೇ 8ರಂದು ರಾತ್ರಿ ವೇಳೆ ಇವರಿಬ್ಬರನ್ನು ದುಷ್ಕರ್ಮಿ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದೆಂದು ಮೃತರ ಸಹೋದರಿ ನೀಡಿರುವ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೆಲುವಿ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ನೆರೆ ಮನೆಯವರು ಹೋಗಿ ನೋಡಿದಾಗ ಮನೆಯ ಬಾಗಿಲು ಅರ್ಧ ತೆರೆದಿತ್ತೆನ್ನಲಾಗಿದೆ.  ಸರಿಯಾಗಿ ಪರಿಶೀಲಿಸಿದಾಗ ತಾಯಿ ಮಗಳು ಮನೆಯೊಳಗೆ ಮೃತಪಟ್ಟಿರುವುದು ಕಂಡು ಬಂದಿದೆ.

ಚೆಲುವಿ 15 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಎಂಬವರ ಜೊತೆ ಮದುವೆ ಆಗಿದ್ದು, ನಂತರ ಮಣಿಪಾಲದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆಗೆ ಮತ್ತೋರ್ವ ಪರಿಚಯವಾಗಿದ್ದು, ಈ ವಿಚಾರ ತಿಳಿದು ಆಕೆಯ ಪತಿ ಆಕೆಯನ್ನು ಬಿಟ್ಟು ಹೋಗಿದ್ದನು.

ನಂತರ ಇವರಿಬ್ಬರು ಮದುವೆಯಾಗಿ ಮುಂಬೈಗೆ ತೆರಳಿದ್ದರು. ಎರಡು ವರ್ಷ ಗಳ ಬಳಿಕ ಕಾರ್ಕಳಕ್ಕೆ ಬಂದು ನೆಲೆಸಿದ ಇವರಿಗೆ ಇಬ್ಬರು ಮಕ್ಕಳಾಗುತ್ತಾರೆ. ಮುಂದೆ ಇವರಿಬ್ಬರ ಮಧ್ಯೆಯೂ ಮನಸ್ತಾಪ ಉಂಟಾಗಿ, ಚೆಲುವಿ ಆತನನ್ನು ಕೂಡ ಬಿಟ್ಟು ಮದಗಕ್ಕೆ ಬಂದು ನೆಲೆ ನಿಂತಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನ ದಳ ತಂಡ ಮತ್ತು ವಿಧಿ ವಿಜ್ಞಾನ ಪ್ರಯೋ ಗಾಲಯ ತಜ್ಞರ ತಂಡ ಆಗಮಿಸಿ ತನಿಖೆ ನಡೆಸಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಯ್ಯ, ಡಿವೈಎಸ್ಪಿ ಸುಧಾಕರ್ ನಾಯ್ಕ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಹಿರಿಯಡ್ಕ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಎರಡು ಪೊಲೀಸ್ ತಂಡ ರಚನೆ: ಎಸ್ಪಿ

ಆತ್ರಾಡಿ ಮದಗ ತಾಯಿ ಮಗಳ ಸಾವಿಗೆ ಸಂಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಇಬ್ಬರು ಎಸ್ಸೈಗಳ ತಂಡವನ್ನು ರಚಿಸಲಾಗಿದೆಂದು ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಎರಡು ತಂಡಗಳು ಬೇರೆ ಬೇರೆ ಕಡೆ ಹೋಗಿ, ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದೆ. ಮೃತ ಚೆಲುವಿ ಪತಿ ಯನ್ನು ಬಿಟ್ಟು ಹಲವು ವರ್ಷಗಳಾಗಿವೆ ಎಂಬ ಮಾಹಿತಿ ದೊರೆತಿದೆ. ಅವರಿ ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News