ಕಾರ್ಕಳ: ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಚಿಣ್ಣರ ಮೇಳಕ್ಕೆ ಚಾಲನೆ

Update: 2022-05-09 12:07 GMT

ಕಾರ್ಕಳ: ಮಕ್ಕಳಲ್ಲಿ ಸೃಜನಶೀಲತೆ ಮೂಡಿಸುವ ನಿಟ್ಟಿನಲ್ಲಿ ಚಿಣ್ಣರ ಮೇಳ ಪೂರಕ. ಇಂತಹ ಶಿಬಿರಗಳಲ್ಲಿ ಮನಸ್ಸು ಕಟ್ಟುವ ಕಾರ್ಯವಾಗುವುದು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ ಅಭಿಪ್ರಾಯಪಟ್ಟರು. 

ಅವರು ಮೇ 9ರಂದು ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಯಕ್ಷರಂಗಾಯಣ ಆಶ್ರಯದಲ್ಲಿ ಜೀವನ್‌ ರಾಂ ಸುಳ್ಯ ನಿರ್ದೇಶನದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳ - 2022 ಉದ್ಘಾಟಿಸಿ ಮಾತನಾಡಿದರು.

ಸಚಿವ ಸುನೀಲ್‌ ಕುಮಾರ್‌ ಕಾರ್ಕಳದಲ್ಲಿ ಯಕ್ಷರಂಗಾಯಣ ಆರಂಭಿಸಿರುವುದು ಸಂತೋಷ ಸಂಗತಿ. ಮುಂದಿನ ದಿನಗಳಲ್ಲಿ ಸುನೀಲ್‌ ಅವರ ಮಾರ್ಗದರ್ಶನ, ಯಕ್ಷರಂಗಾಯಣ ನಿರ್ದೇಶಕ ಜೀವನ್‌ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಕಾರ್ಕಳ ಯಕ್ಷ ರಂಗಾಯಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಗೆ ಬರಲಿದೆ ಎಂದು ಮೋಹನ್‌ ಆಳ್ವ ಹೇಳಿದರು.

ನಮ್ಮ ದೇಶದ ಹಲವಾರು ಸಂಪತ್ತುಗಳಲ್ಲಿ ಯುವಸಂಪತ್ತು ಪ್ರಮುಖವಾದುದು. 6ರಿಂದ 18 ವರ್ಷಗಳ 35 ಕೋಟಿ ವಿದ್ಯಾರ್ಥಿಗಳು, 18ರಿಂದ 25 ವರ್ಷಗಳ 11 ಕೋಟಿ ಯುವ ಸಂಪತ್ತು ದೇಶದಲ್ಲಿದೆ. ಇದು ಯಾವೊಂದು ದೇಶದಲ್ಲಿರದ ಶ್ರೇಷ್ಠ ಸಂಪತ್ತು ಎಂದು ಆಳ್ವ ಅವರು ಹೇಳಿದರು.  

ಕರ್ನಾಟಕ ಯಕ್ಷಗಾನ ಅಕಾಡಮಿ ಮಾಜಿ ಅಧ್ಯಕ್ಷ ಎಂ.ಎಲ್‌. ಸಾಮಗ ಮಾತನಾಡಿ, ಅಮೆರಿಕ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್‌ ಮಗನ ಶಿಕ್ಷಕರಿಗೆ ಬರೆದ ಪತ್ರವೊಂದರಲ್ಲಿ ನನ್ನ ಮಗನಿಗೆ ಸೋಲುವುದನ್ನು ಕಲಿಸಿ ಎಂದು ವಿನಂತಿಸಿದ್ದರು. ಈ ಪತ್ರವನ್ನು ಪೋಷಕರು ಮತ್ತೆ ಮತ್ತೆ ಮನನ ಮಾಡಿಕೊಳ್ಳವುದು ಅಗತ್ಯವೆಂದರು .

ಚಿಣ್ಣರ ಮೇಳದಂತಹ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವುದು. ಜೀವನೋತ್ಸಾಹ ತುಂಬುವುದು ಎಂದು ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ ಅಭಿಪ್ರಾಯಪಟ್ಟರು.

ಕನ್ನಡ ಸಂಸ್ಕೃತಿ ಇಲಾಖೆಗೆ ಬಹಳಷ್ಟು ಜನ ಸಚಿವರಾಗಿ ಬಂದು ಹೋಗಿದ್ದಾರೆ. ಆದರೆ ವಿ. ಸುನೀಲ್‌ ಕುಮಾರ್‌ ಈ ಇಲಾಖೆಗೆ ಸಚಿವರಾದ ಬಳಿಕ ಜನಸಾಮಾನ್ಯರಿಗೂ ಇಂತಹ ಇಲಾಖೆಯೊಂದು ಇದೆ ಎಂದು ರುಜುವಾತು ಪಡಿಸಿದ್ದಾರೆ. ಸಾವಿರಾರು ಜನ ಕಲಾವಿದರಿಗೆ ಹೊಸ ಹುರುಪು ತುಂಬಿದ್ದಾರೆ. ಸುನೀಲ್‌ ಕುಮಾರ್‌ ಅವರ ನಾಯಕತ್ವ ಮತ್ತು ಅವರ ದೂರದೃಷ್ಟಿಯಿಂದ ನಡೆದ ಕಾರ್ಕಳ ಉತ್ಸವದಲ್ಲಿ ಕಾರ್ಕಳ ಹೆಬ್ರಿಯ ಪ್ರತಿ ಮನೆಯವರು ಭಾಗವಹಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಗಣೇಶ್‌ ಕುದ್ರೋಳಿ ತಿಳಿಸಿದರು. 

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಪ್ರಿಯಾಂಕ ಸುನೀಲ್‌, ವರ್ಧಮಾನ್‌ ವಿದ್ಯಾಸಂಸ್ಥೆ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಯಕ್ಷ ರಂಗಾಯಣ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ನಿರ್ದೇಶಕ ಜೀವನ್‌ ರಾಂ ಸುಳ್ಯ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಾಜೇಂದ್ರ ಭಟ್‌ ಕಾರ್ಯಕ್ರಮ ನಿರೂಪಿಸಿ, ನಿವೃತ್ತ ಶಿಕ್ಷಕ ವಸಂತ್‌ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News