×
Ad

ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

Update: 2022-05-09 19:17 IST

ಉಡುಪಿ : ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿ ಯೇಶನ್ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ರಾಜ್ಯ ಹಿರಿಯರ ಮತ್ತು ೨೦ರ ಕೆಳಗಿನ ವಯೋಮಿತಿಯ ಪುರುಷ ಹಾಗೂ ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮೂಡಬಿದ್ರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.

೨೦ ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಡಿಯೆಸ್ ಸಿನಿಯರ್ ಸ್ಪೋರ್ಟ್ಸ್ ಹಾಸ್ಟೆಲ್, ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಪುರುಷರ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ತಂಡ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದುಕೊಂಡಿತು.

೨೦ ವರ್ಷ ಕೆಳಗಿನ ವಯೋಮಿತಿಯ ಬಾಲಕರ ವಿಭಾಗದಲ್ಲಿ ಎಸ್‌ಎಐ ಬೆಂಗಳೂರಿನ ರಿಹಾನ್ ಸಿ.ಎಚ್., ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವರ್ಷ ವಿ., ಪುರುಷರ ವಿಭಾಗದಲ್ಲಿ ಆಳ್ವಾಸ್‌ನ ಮಿಜೋ ಚಕೋ ಕುರಿಯನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಲಿಖಿತಾ ಉತ್ತಮ ಅಥ್ಲೆಟ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸಮಾರೋಪ ಸಮಾರಂಭ: ಸೋಮವಾರ ನಡೆದ ಚಾಂಪಿಯನ್‌ಶಿಪ್‌ನ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್ ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ಕಕ್ಕುಂಜೆ, ಮಣಿಪಾಲ ಮಾಹೆ ಸ್ಟೂಡೆಂಟ್ಸ್ ಅಫೆರ್ಸ್‌ನ ನಿರ್ದೇಶಕಿ ಗೀತಾ ಮಯ್ಯ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ್ ಎಕ್ಕಾರ್, ಕರ್ನಾಟಕ ಅಥ್ಲೇಟಿಕ್ ಅಸೋಶಿಯೇಶನ್ ಕಾರ್ಯ ದರ್ಶಿ ರಾಜವೇಲು, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ಡಾ. ಕೆಂಪರಾಜ್ ಎಚ್.ಬಿ., ಕಾರ್ಯದರ್ಶಿ ದಿನೇಶ್ ಕುಮಾರ್, ಕೋಶಾಧಿಕಾರಿ ದೀಪಕ್ ರಾಮ್ ಬಾಯಾರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್‌ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಒಟ್ಟು ಐದು ಕೂಟ ದಾಖಲೆ!

ಈ ಕ್ರೀಡಾಕೂಟದ ೨೦ರ ಕೆಳಗಿನ ವಯೋಮಿತಿ ವಿಭಾಗದ ಅಖಿಲೇಶ್ ತ್ರಿಪಲ್ ಜಂಪ್‌ನಲ್ಲಿ, ಮಹಿಳಾ ವಿಭಾಗದ ಅಂಬಿಕಾ ಶಾಟ್‌ಪುಲ್‌ನಲ್ಲಿ, ೨೦ರ ಕೆಳಗಿನ ವಯೋಮಿತಿ ವಿಭಾಗದ ಶಿವಾಜಿ ಮದ್ದಪ್ಪ ಗೌಡರ್ ೫೦೦೦ ಮೀಟರ್ ಓಟದಲ್ಲಿ, ಲಿಖಿತಾ ೪೦೦ಮೀಟರ್ ಓಟದಲ್ಲಿ, ಐಶ್ಚರ್ಯ ತ್ರಿಪಲ್ ಜಂಪ್‌ನಲ್ಲಿ ಹೊಸ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News