×
Ad

ದಲಿತ ಸಮುದಾಯದ ಸಾಮಾಜಿಕ ಆರ್ಥಿಕ ಪ್ರಗತಿಯಲ್ಲಿ ಇಳಿಮುಖ: ಡಾ. ಕೃಷ್ಣಪ್ಪ ಕೊಂಚಾಡಿ

Update: 2022-05-09 21:54 IST

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿರುವ ದಲಿತ ಸಮುದಾಯದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ, ಇದರಿಂದ ದಲಿತರ ಸಾಮಾಜಿಕ ಆರ್ಥಿಕ ಪ್ರಗತಿಯ ದರ ಇಳಿಮುಖವಾಗಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಆರೋಪಿಸಿದ್ದಾರೆ.

ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

೨೦೧೩ರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಸಮುದಾಯದ ಕಾನೂನನ್ವಯ ದಲಿತ ಮೀಸಲು ನಿಧಿಯನ್ನು ಸರಿಯಾಗಿ ಉಪಯೋಗಿಸದಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಸಮಾಜ ಕಲ್ಯಾಣ ಸಚಿವರು ಕಳೆದ ಆಗಸ್ಟ್‌ನಲ್ಲಿ ಮನೆ ನಿರ್ಮಾಣಕ್ಕೆ ೫ ಲಕ್ಷ ರೂ. ಹೆಚ್ಚಿಸಿರುವುದಾಗಿ ಹೇಳಿಕೊಂಡಿದ್ದರೂ  ಅದು ಜಾರಿಯಾಗಿಲ್ಲ. ಇತ್ತೀಚೆಗೆ ಜಾರಿಗೊಳಿಸಿರುವ ಕಠಿಣ ನಿಯಮಗಳಿಂದ ಬಡ ದಲಿತರ ವ್ಯವಸ್ಥಿತವಾದ ಸ್ವಂತ ಮನೆ ಹೊಂದುವ ಕನಸಿಗೆ ಎಳ್ಳುನೀರು ಬಿಟ್ಟಂತಾಗಿದೆ ಎಂದು ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು.

ದ.ಕ. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಮಾತನಾಡಿ ದಲಿತ ಮೀಸಲು ನಿಧಿ ಕಾನೂನುಬದ್ದ ಹಕ್ಕಾಗಿದ್ದು,ಅದನ್ನು ದಲಿತರಿಗೆ ನೀಡದೆ ವಂಚಿಸಿರುವ ಮಂಗಳೂರು ಮಹಾನಗರ ಪಾಲಿಕೆ ದಲಿತ ವಿರೊಧಿಯಾಗಿದೆ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ದಲಿತ ಹಕ್ಕುಗಳ ಸಮಿತಿಯ ೧೪ ಬೇಡಿಕೆಗಳು ದಲಿತರ ಬದುಕುವ ಮೂಲಭೂತ ಅವಶ್ಯಕತೆಗಳ ಪ್ರತಿರೂಪವಾಗಿದೆ. ಆದ್ದರಿಂದ ಅವುಗಳನ್ನು ಈಡೇರಿಸಿಕೊಳ್ಳಲು ತಕ್ಷಣವೇ ಮಹಾನಗರ ಪಾಲಿಕೆ ಸಭೆ ಕರೆಯಬೇಕು. ಇಲ್ಲದಿದ್ದಲ್ಲಿ ಮನಪಾ ಕಚೇರಿಗೆ ಮುತ್ತಿಗೆ ಹಾಗೂ ಅಧಿಕಾರಿಗಳ ಘೆರಾವ್ ನಂತಹ ತೀವ್ರ ರೀತಿಯ ಹೋರಾಟಗಳನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ನಾಯಕಿ ಭಾರತಿ ಬೋಳಾರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ, ದಸಂಸ ಮುಖಂಡ ತಿಮ್ಮಯ್ಯ ಕೊಂಚಾಡಿ, ವಿಚಾರವಾದಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡ  ರವಿಚಂದ್ರ ಕೊಂಚಾಡಿ, ಪ್ರಗತಿಪರ ಚಿಂತಕ  ಪ್ರೊ. ಹರಿಯಪ್ಪ ಪೇಜಾವರ ಮಾತನಾಡಿದರು.

ದಸಂಸ ಮಂಗಳೂರು ನಗರ ಮುಖಂಡರಾದ ರಾಧಾಕೃಷ್ಣ, ಕೃಷ್ಣ ತಣ್ಣೀರುಬಾವಿ, ಶಿವಾನಂದ, ಹೇಮಾ, ಪ್ರವೀಣ್ ಕೊಂಚಾಡಿ, ಚಂದ್ರಶೇಖರ ಕಿನ್ಯಾ, ರಘುವೀರ್, ಸುಧಾಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಸಂಸ ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News