×
Ad

ಪ್ರತಿಭಟನಾಕಾರರ ಮೇಲೆ ರಾಜಪಕ್ಸ ನಿಷ್ಟರ ದಾಳಿ: 78 ಮಂದಿಗೆ ಗಾಯ; ಶ್ರೀಲಂಕಾದಲ್ಲಿ ಕರ್ಫ್ಯೂ ಜಾರಿ

Update: 2022-05-09 22:02 IST
PHOTO:TWITTER

ಕೊಲಂಬೊ, ಮೇ 9: ಶ್ರೀಲಂಕಾದಲ್ಲಿ ಸರಕಾರದ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪ್ರಧಾನಿ ಮಹೀಂದ್ರ ರಾಜಪಕ್ಸ ಬೆಂಬಲಿಗರು ದಾಳಿ ನಡೆಸಿದ ಬಳಿಕ ಸಂಭವಿಸಿದ ಘರ್ಷಣೆಯಲ್ಲಿ ಕನಿಷ್ಟ 78 ಮಂದಿ ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿದ್ದು ಭದ್ರತೆಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಎಪ್ರಿಲ್ 9ರಿಂದ ಕೊಲಂಬೊದಲ್ಲಿನ ಅಧ್ಯಕ್ಷರ ಕಚೇರಿಯ ಮುಂಭಾಗ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದೆ. ಸೋಮವಾರ ಪ್ರಧಾನಿಯ ಸರಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಸರಕಾರದ ಬೆಂಬಲಿಗರ ತಂಡವು ದಾಳಿ ನಡೆಸಿ ಬಡಿಗೆ ಮತ್ತು ದೊಣ್ಣೆಯಿಂದ ಥಳಿಸಿದೆ. ಘರ್ಷಣೆಯಲ್ಲಿ ಕನಿಷ್ಟ 78 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆದ ಸರಕಾರ ಪರ ಗುಂಪು ಪೊಲೀಸರೊಂದಿಗೇ ಘರ್ಷಣೆಗೆ ಮುಂದಾದಾಗ ಅವರನ್ನು ಚದುರಿಸಲು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಲಾಯಿತು. ಸರಕಾರವನ್ನು ಸಮರ್ಥಿಸಿಕೊಳ್ಳುವಂತೆ ಮಹಿಂದ ರಾಜಪಕ್ಸ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು ಎಂದು ವರದಿಯಾಗಿದೆ.
 

ಹಿಂಸಾತ್ಮಕ ಕೃತ್ಯಗಳನ್ನು ಬಲವಾಗಿ ಖಂಡಿಸುವುದಾಗಿ ಅಧ್ಯಕ್ಷ ಗೊತಬಯ ರಾಜಪಕ್ಸ ಹೇಳಿದ್ದಾರೆ. ಹಿಂಸಾಚಾರವನ್ನು ಪಕ್ಷಬೇಧ ಮರೆತು ಖಂಡಿಸಬೇಕು. ಈಗ ದೇಶಕ್ಕೆ ಎದುರಾಗಿರುವ ಬಿಕ್ಕಟ್ಟಿಗೆ ಹಿಂಸಾಚಾರ ಪರಿಹಾರವಲ್ಲ. ಎಲ್ಲಾ ನಾಗರಿಕರು ಶಾಂತಿ ಕಾಪಾಡುವಂತೆ ಮತ್ತು ಸಂಯಮ ವಹಿಸುವಂತೆ ವಿನಂತಿಸುತ್ತೇನೆ. ಈಗಿನ ಬಿಕ್ಕಟ್ಟನ್ನು ಪರಿಹರಿಸಲು ಪ್ರತಿಯೊಬ್ಬರೂ ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದವರು ಟ್ವೀಟ್ ಮಾಡಿದ್ದಾರೆ.

 ಟೆಂಪಲ್ ಟ್ರೀಸ್ ಪ್ರದೇಶದ ಬಳಿಯ ಪ್ರತಿಭಟನಾ ಸ್ಥಳಕ್ಕೆ ಸರಕಾರದ ಬೆಂಬಲಿಗರ ಗುಂಪು ನುಗ್ಗಲು ಮುಂದಾದಾಗ ಪೊಲೀಸರು ಮಾನವ ಸರಪಳಿ ರಚಿಸಿ ತಡೆಯಲು ಪ್ರಯತ್ನಿಸಿದರು. ಆದರೆ ಸರಪಳಿಯನ್ನು ತುಂಡರಿಸಿದ ಗುಂಪು ಪ್ರತಿಭಟನಾ ಸ್ಥಳಕ್ಕೆ ನುಗ್ಗಿ ಅಲ್ಲಿ ಹಾಕಿದ್ದ ಟೆಂಟನ್ನು ಕಿತ್ತೆಸೆದು ಪ್ರತಿಭಟನಾನಿರತರನ್ನು ಥಳಿಸಿದರು ಎಂದು ಹಿರು ನ್ಯೂಸ್ ವೆಬ್ಸೈಟ್ ವರದಿ ಮಾಡಿದೆ. ಪ್ರವಾಸೋದ್ದಿಮೆ ಆದಾಯದ ಪ್ರಮುಖ ಮೂಲವಾಗಿರುವ ಶ್ರೀಲಂಕಾದ ಅರ್ಥವ್ಯವಸ್ಥೆಗೆ ಕೊರೋನ ಸಾಂಕ್ರಾಮಿಕ ಮಾರಕ ಹೊಡೆತ ನೀಡಿದೆ. ಜೊತೆಗೆ, ಕೆಲವು ಅನಗತ್ಯ ಬಿಳಿಯಾನೆ ಯೋಜನೆಗಳಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬಿದ್ದಿದೆ. ಈ ಮಧ್ಯೆ, ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ಇಳಿದ ಕಾರಣ, ವಿದೇಶಿ ವಿನಿಮಯ ಉಳಿಸಲು ಆಮದಿನ ಮೇಲೆ ನಿಷೇಧ ವಿಧಿಸಿದ್ದು ದೇಶದಲ್ಲಿ ಇಂಧನ, ವಿದ್ಯುತ್, ತೈಲ, ಔಷಧವಸ್ತು, ಆಹಾರ ಪದಾರ್ಥ ಸಹಿತ ಅಗತ್ಯ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ದೈನಂದಿನ ಬಳಕೆ ವಸ್ತುಗಳ ಕೊರತೆಯ ಜತೆ ದರ ಗಗನಕ್ಕೇರಿತು. ಹಣದುಬ್ಬರ ಪರಾಕಾಷ್ಟೆಗೆ ತಲುಪಿತು. ಪಾವತಿಸಬೇಕಿರುವ ವಿದೇಶಿ ಸಾಲದ ಮೊತ್ತ ಬೆಟ್ಟದೆತ್ತರಕ್ಕೆ ಬೆಳೆದಿದ್ದು ಇದಕ್ಕೆಲ್ಲಾ ಸರಕಾರದ ಅದಕ್ಷತೆಯೇ ಕಾರಣ ಎಂದು ಆಕ್ರೋಶಗೊಂಡಿರುವ ಜನತೆ ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಿಂದ ಬೆಂಬಲಿಗರ ಶಕ್ತಿ ಪ್ರದರ್ಶನ
 

ಶುಕ್ರವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಮುನ್ನ ಶಕ್ತಿಪ್ರದರ್ಶನಕ್ಕೆ ಮುಂದಾದ ಮಹಿಂದಾ ರಾಜಪಕ್ಸರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಬಸ್ಸುಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಮಹಿಂದ ಅವರನ್ನು ಬೆಂಬಲಿಸುವ ಕೆಲವು ಸಂಸದರು ಹಾಗೂ ಸ್ಥಳೀಯಾಡಳಿತ ಸದಸ್ಯರೂ ಸ್ಥಳದಲ್ಲಿದ್ದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು, ಹುದ್ದೆಯಲ್ಲಿಯೇ ಮುಂದುವರಿಯಬೇಕು ಎಂದು ಬೆಂಬಲಿಗರು ಮಹಿಂದ ರಾಜಪಕ್ಸರನ್ನು ಆಗ್ರಹಿಸಿದರು ಎಂದು ಕೊಲಂಬೊ ಪೇಜ್ ಸುದ್ಧಿಸಂಸ್ಥೆ ವರದಿ ಮಾಡಿದೆ.ದೇಶದ ಜನತೆಯ ಹಿತಾಸಕ್ತಿಯ ರಕ್ಷಣೆಗಾಗಿ ತಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ರಾಜಪಕ್ಸ ಹೇಳಿದರು.

ಕೊಲಂಬೊದಲ್ಲಿ ಸೇನೆ ನಿಯೋಜನೆ 

 ಶ್ರೀಲಂಕಾದಲ್ಲಿ ಪ್ರತಿಭಟನಾನಿರತರ ಮೇಲೆ ಸರಕಾರ ಪರ ಗುಂಪು ಹಲ್ಲೆ ನಡೆಸಿದ ಪ್ರಕರಣದ ಬಳಿಕ ದೇಶದಾದ್ಯಂತ ಕರ್ಫ್ಯೂ ಘೋಷಿಸಿರುವ ಸರಕಾರ, ರಾಜಧಾನಿ ಕೊಲಂಬೊದಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

ಅಧ್ಯಕ್ಷ ಹಾಗೂ ಸರಕಾರದ ರಾಜೀನಾಮೆಗೆ ಆಗ್ರಹಿಸಿ ಎಪ್ರಿಲ್ 9ರಿಂದ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಒತ್ತಡಕ್ಕೆ ಸಿಲುಕಿರುವ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬ ಸುದ್ಧಿ ಹರಡುತ್ತಿದ್ದಂತೆಯೇ ವಾಹನಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಿಂದಾ ಬೆಂಬಲಿಗರು ರಾಜೀನಾಮೆ ನೀಡದಂತೆ ಒತ್ತಾಯಿಸಿದರು. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಬೆಂಬಲಿಗರು ಪೊಲೀಸ್ ಬ್ಯಾರಿಕೇಡ್ ಹಾಗೂ ಪೊಲೀಸರ ಮಾನವ ಸರಪಳಿಯನ್ನು ತುಂಡರಿಸಿ ಪ್ರತಿಭಟನಾಕಾರರ ಮೇಲೆ ಮುಗಿಬಿದ್ದರು. ದೊಣ್ಣೆ ಮತ್ತು ಬಡಿಗೆಯಿಂದ ಥಳಿಸಿದಾಗ ಕನಿಷ್ಟ 78 ಮಂದಿ ಗಾಯಗೊಂಡರು.

ಪರಿಸ್ಥಿತಿ ನಿಯಂತ್ರಿಸಲು ತಕ್ಷಣದಿಂದಲೇ ದೇಶದಾದ್ಯಂತ ಕರ್ಫ್ಯೂ ಜಾರಿಗೊಳಿಸಿದ್ದು ಮುಂದಿನ ಸೂಚನೆಯವರೆಗೆ ಜಾರಿಯಲ್ಲಿರುತ್ತದೆ. ಕಾನೂನು ಜಾರಿಗೆ ನೆರವಾಗಲು ಪ್ರತಿಭಟನಾ ಸ್ಥಳದಲ್ಲಿ ಸೇನೆಯ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವಕ್ತಾರರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News