ಅಸ್ಸಾಂ: ಮಾಟಗಾತಿಯೆಂದು ಶಂಕಿಸಿ ಮಹಿಳೆಯ ಹತ್ಯೆ

Update: 2022-05-09 17:19 GMT

ಗುವಾಹತಿ, ಮೇ 9: ಮಾಟಗಾತಿ ಎಂಬ ಶಂಕೆಯಲ್ಲಿ 45 ವರ್ಷದ ಮಹಿಳೆಯೋರ್ವರನ್ನು ಹತ್ಯೆಗೈದು ಮರಕ್ಕೆ ನೇತು ಹಾಕಿದ ಘಟನೆ ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿ ನಡೆದಿದೆ.

ಗೋಸಾಯಿಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹನಪುರ ಗ್ರಾಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ ಇದುವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗ್ರಾಮದಿಂದ ಮಹಿಳೆ ಶನಿವಾರ ನಾಪತ್ತೆಯಾಗಿದ್ದರು. ಅವರ ಪತಿ ಗ್ರಾಮದ ಮುಖ್ಯಸ್ಥನಿಗೆ ಮಾಹಿತಿ ನೀಡಿದ್ದರು. ಅವರು ಅದೇ ದಿನ ಪೊಲೀಸ್ ದೂರು ದಾಖಲಿಸಿದ್ದರು.

ಪೊಲೀಸರು ಹಾಗೂ ಗ್ರಾಮಸ್ಥರು ಮಹಿಳೆಗಾಗಿ ಶೋಧ ನಡೆಸಿದರು. ಈ ಸಂದರ್ಭ ಗ್ರಾಮದ ಹೊರವಲಯದ ಮರದಲ್ಲಿ ನೇತು ಹಾಕಲಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ರವಿವಾರ ರಾತ್ರಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಹಿಳೆಯ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದು ಮಹಿಳೆಯನ್ನು ಹತ್ಯೆಗೈದು ಮರಕ್ಕೆ ನೇತು ಹಾಕಿರುವ ಶಂಕೆಯನ್ನು ಮೂಡಿಸಿದೆ. ಮೃತದೇಹವನ್ನು ಮರಣೋತ್ತ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News